Friday, October 11, 2024

ಪ್ರಾಯೋಗಿಕ ಆವೃತ್ತಿ

ಮೈಷುಗರ್ ಕಾರ್ಖಾನೆ ಆರಂಭಕ್ಕೆ ಹಣ ಬಿಡುಗಡೆ ಮಾಡಲು ಸಿಎಂಗೆ ಒತ್ತಾಯ

ಮಂಡ್ಯದ ಮೈಷುಗರ್ ಕಾರ್ಖಾನೆಗೆ ಸರ್ಕಾರ 3.75 ಕೋಟಿ ರೂ. ಬಿಡುಗಡೆ ಮಾಡಿದ್ದು,ಬಾಕಿ ಇರುವ 46.25 ಕೋಟಿ ರೂ. ಹಣವನ್ನು ಶೀಘ್ರ ಬಿಡುಗಡೆ ಮಾಡಿ, ಕಬ್ಬು ನುರಿಯುವ ಕೆಲಸ ಪ್ರಾರಂಭಿಸುವಂತೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಾರೆ.

ಸಿಎಂ ಅವರನ್ನು ಅವರ ಸರ್ಕಾರಿ ನಿವಾಸದಲ್ಲಿ ಭೇಟಿ ಮಾಡಿದ ದಿನೇಶ್ ಗೂಳಿಗೌಡ ಮಂಡ್ಯ ಜಿಲ್ಲೆ ಜನತೆಯ ಜೀವನಾಧಾರವಾಗಿರುವ ಮೈಸೂರು ಸಕ್ಕರೆ ಕಾರ್ಖಾನೆ ಶೀಘ್ರ ಪುನಾರಂಭ ಮಾಡುವ ಮೂಲಕ ರೈತರ ಸಹಾಯಕ್ಕೆ ಬರಬೇಕೆಂದು ಮನವಿ ಪತ್ರ ಸಲ್ಲಿಸಿದರು.

ಮೈಷುಗರ್ ಅರಂಭ ಹಾಗೂ ಪುನಶ್ಚೇತನಕ್ಕಾಗಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 50 ಕೋಟಿ ರೂಪಾಯಿಯನ್ನು ಮೀಸಲಿಟ್ಟಿದ್ದು, ಅದರಲ್ಲಿ ಪ್ರಥಮ ಹಂತವಾಗಿ 15 ಕೋಟಿ ರೂಪಾಯಿಯನ್ನು ಬಿಡುಗಡೆಗೊಳಿಸಲಾಗುತ್ತದೆ ಎಂಬ ಆಶ್ವಾಸನೆಯನ್ನು ಸಾರ್ವಜನಿಕವಾಗಿ ನೀಡಲಾಗಿತ್ತು.

ಆದರೆ, ಇದೀಗ ಕೇವಲ 3.75 ಕೋಟಿ ರೂಪಾಯಿಯನ್ನು ಮಾತ್ರವೇ ಬಿಡುಗಡೆ ಮಾಡಲಾಗಿದ್ದು ಸದರಿ ಹಣ ಜನರ ನಿರೀಕ್ಷೆ ಮತ್ತು ಕಾರ್ಖಾನೆ ಪುನರ್ ಆರಂಭಿಸುವ ಕಾರ್ಯಕ್ಕೆ ತೊಡಕನ್ನುಂಟು ಮಾಡಿದೆ.

ಕಾರ್ಖಾನೆಯಲ್ಲಿ ಸಾಕಷ್ಟು ತಾಂತ್ರಿಕ ಹಾಗೂ ಆಡಳಿತಾತ್ಮಕ ತೊಂದರೆಗಳು ಇದ್ದು ಈಗಾಗಲೇ ಕಾರ್ಖಾನೆ ಆರಂಭವಾಗದೆ ಸುಮಾರು 2 ವರ್ಷಗಳು ಕಳೆದಿವೆ. ಜೊತೆಗೆ ಸಾಕಷ್ಟು ಯಂತ್ರಗಳ ದುರಸ್ತಿಯಾಗಬೇಕಿದ್ದು ಇನ್ನು ಹೊಸ ಯಂತ್ರೋಪಕರಣಗಳು ಅಥವಾ ಬಿಡಿಭಾಗಗಳು ಬೇಕಿರುತ್ತವೆ. ಜೊತೆಗೆ ಇನ್ನಿತರ ಮೂಲಭೂತ ಸೌಲಭ್ಯವನ್ನು ಒದಗಿಸಿ ಸುಸ್ಥಿತಿಗೆ ತರಬೇಕಿದ್ದು, ಈ ಎಲ್ಲಾ ಪ್ರಕ್ರಿಯೆಗೆ ಈಗ ಬಿಡುಗಡೆ ಮಾಡಿರುವ 3.75 ಕೋಟಿ ರೂಪಾಯಿ ಯಾವುದಕ್ಕೂ ಸಾಲದಾಗಿದೆ.

ಈಗ ಜೂನ್ ತಿಂಗಳ ಆರಂಭಿಕ ಹಂತದಲ್ಲಿದ್ದೇವೆ. ಜುಲೈ ಮಾಸಾಂತ್ಯದಲ್ಲಿ ಕಾರ್ಖಾನೆಯನ್ನು ಆರಂಭಗೊಳಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಕ್ಕರೆ ಸಚಿವರು ಹೇಳಿಕೆ ನೀಡಿದ್ದಾರೆ. ಹೀಗಾಗಿ ಕಬ್ಬು ನುರಿಯಲು ಗರಿಷ್ಠ ಎಂದರೆ ಇನ್ನು ಎರಡರಿಂದ ಎರಡೂವರೆ ತಿಂಗಳ ಅವಕಾಶ ಮಾತ್ರ ಇದೆ. ಇಂತಹ ಸಂದರ್ಭದಲ್ಲಿ ಯಂತ್ರೋಪಕರಣಗಳನ್ನು ಸರಿಪಡಿಸಿ, ಸಿಬ್ಬಂದಿಯನ್ನು ನಿಯೋಜಿಸಿಕೊಂಡು ಕಾರ್ಯನಿರ್ವಹಣೆ ಮಾಡಬೇಕೆಂದರೆ ಕೆಲಸ ಕಾರ್ಯಗಳು ಚುರುಕಾಗಿ ನಡೆಯಬೇಕು. ಇದಕ್ಕೆ ಸಾಕಷ್ಟು ಹಣದ ಅವಶ್ಯಕತೆ ಇರುತ್ತದೆ.

ಕಾರ್ಖಾನೆ ಒಮ್ಮೆ ಪ್ರಾರಂಭವಾದ ಮೇಲೆ ಬರುವಂತಹ ಖರ್ಚು–ವೆಚ್ಚಗಳು ಸೇರಿದಂತೆ ಕಾರ್ಖಾನೆಗೆ ಕಬ್ಬು ಹಾಕಿದ ರೈತರಿಗೆ ಹಣ ಪಾವತಿ ಮಾಡಲು ಅನುದಾನವು ಇರಬೇಕಾಗುತ್ತದೆ. ಈ ಮೂಲಕ ಸುಗಮವಾಗಿ ಚಾಲನೆಯನ್ನು ಮಾಡಬೇಕಿದೆ.

ಆದರೆ, ಈ ಬಗ್ಗೆ ಇದುವರೆಗೂ ಯಾವುದೇ ಕ್ರಮವಾಗಿಲ್ಲ. ಹೀಗಾಗಿ ತಾವುಗಳು ಈ ಎಲ್ಲ ವಿಷಯಗಳ ನಿಟ್ಟಿನಲ್ಲಿ ಗಮನಹರಿಸಿ, ಕಾರ್ಖಾನೆಗೆ ಬಾಕಿ ಇರುವ ಅನುದಾನವನ್ನು ಬಿಡುಗಡೆ ಮಾಡುವುದಲ್ಲದೆ, ಸಂಪೂರ್ಣ 50 ಕೋಟಿ ರೂಪಾಯಿಯನ್ನು (ಅಂದರೆ ಬಾಕಿ 46.25 ಕೋಟಿ ರೂ.) ಆದಷ್ಟು ಶೀಘ್ರವಾಗಿ ಬಿಡುಗಡೆಗೊಳಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಮಂಡ್ಯ ಜಿಲ್ಲೆಯ ರೈತರ ಪರವಾಗಿ ಮನವಿ ಮಾಡುವುದಾಗಿ ತಿಳಿಸಿದರು.

ದಿನೇಶ್ ಗೂಳಿಗೌಡರ ಮನವಿ ಸ್ವೀಕರಿಸಿದ ಸಿಎಂ ಬಸವರಾಜ್ ಬೊಮ್ಮಾಯಿ ಆದಷ್ಟು ಶೀಘ್ರ ಮೈಷುಗರ್ ಕಾರ್ಖಾನೆಯ ಆರಂಭಕ್ಕೆ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!