Friday, September 13, 2024

ಪ್ರಾಯೋಗಿಕ ಆವೃತ್ತಿ

ಜರ್ಮನಿಯ ನಾಝೀ – ಇಟಲಿಯ ಫ್ಯಾಸಿಸ್ಟ್ ಸಿದ್ದಾಂತ ಸರ್ವಾಧಿಕಾರದ ಅಪಾಯಕಾರಿ

ನಾರಾಯಣ ಬೆಳಗುರ್ಕಿ, ಸಾಮಾಜಿಕ ಹೋರಾಟಗಾರರು
ಸಿಂಧನೂರು.

ಜರ್ಮನಿಯ ನಾಝೀ ಸಿದ್ದಾಂತ ಮತ್ತು ಇಟಲಿಯ ಫ್ಯಾಸಿಸ್ಟ್ ಸಿದ್ದಾಂತ ಎರಡೂ ಸರ್ವಾಧಿಕಾರದ ಅಪಾಯಕಾರಿ ಸಿದ್ದಾಂತಗಳು ಎನ್ನುವುದರಲ್ಲಿ ಎರಡು ಮಾತಿಲ್ಲ.

ನಾಝೀ ತತ್ವ ಜನಾಂಗೀಯ ವಾದವನ್ನು ಮುಂದಿಟ್ಟರೆ ಫ್ಯಾಸಿಸ್ಟ್ ತತ್ವ ಧರ್ಮವನ್ನು ಜನರಲ್ಲಿ ತುಂಬಿ ಸರ್ವಾಧಿಕಾರ ಆಡಳಿತ ನಡೆಸುವ ಸಿದ್ದಾಂತವಾಗಿದೆ. ಎರಡೂ ಸಿದ್ಧಾಂತಗಳೂ ದುರಂತ ಆಡಳಿತ ನಡೆಸಿ ಪತನಗೊಂಡಿರುವುದು ಈಗ ಇತಿಹಾಸ. ಅಂತೆಯೇ ನಮ್ಮ ದೇಶದಲ್ಲಿ ಸಹ ಫ್ಯಾಸಿಸ್ಟ್ ಧೋರಣೆಯ ವಿದೇಶಿ ಸಿದ್ಧಾಂತವನ್ನು ಯಥಾವತ್ ಜಾರಿ ಮಾಡುವ ಮೂಲಕ ಮತ್ತೊಮ್ಮೆ ಸರ್ವಾಧಿಕಾರದ ಆಡಳಿತ ವ್ಯವಸ್ಥೆ ಇಲ್ಲಿಯೂ ನಡೆಯುತ್ತಿದೆ. ಇದು ಅಪಾರ ಸಾವು ನೋವುಗಳನ್ನು ಉಂಟು ಮಾಡುತ್ತಾ, ಶಾಂತಿ ಸಹಬಾಳ್ವೆಗೆ ಹೆಸರಾದ ಭಾರತದಲ್ಲಿ ನಡೆಯುತ್ತಿರುವದು ಅತ್ಯಂತ ಅಪಾಯಕಾರಿ.

ಫ್ಯಾಸೀವಾದ ತತ್ವ ಏನನ್ನು ಪ್ರತಿಪಾದಿಸುತ್ತದೆ ಎಂದರೆ, ಈ ದೇಶದಲ್ಲಿ ನಾನು ಮತ್ತು ನನ್ನ ಪಕ್ಷ ಮಾತ್ರ ದೇಶಪ್ರೇಮಿಗಳು ಉಳಿದವರೆಲ್ಲ ದೇಶ ದ್ರೋಹಿಗಳು ಎಂದು ಗಟ್ಟಿಯಾಗಿ ಪ್ರಚಾರ ಮಾಡುವುದು.

ಸದಾಕಾಲ ಅನ್ಯಧರ್ಮದ ತಪ್ಪುಗಳನ್ನು ಹುಡುಕುತ್ತ ಆ ಧರ್ಮವನ್ನು ಅಪರಾಧಿ ಕಟಕಟೆಯಲ್ಲಿ ನಿಲ್ಲಿಸುವುದು . ಇದಕ್ಕೆ ಇಂತದ್ದೇ ಧರ್ಮ ಆಗಬೇಕೆಂದಿಲ್ಲ ಅಲ್ಪಸಂಖ್ಯಾತ ಬೆಂಬಲ ಇರುವ ಯಾವುದೇ ಧರ್ಮ, ಪಂಥ ಕಡೆಗೆ ಇನ್ಯಾವುದೋ ಸಮುದಾಯವಾರೂ ಸರಿ. ಇಸ್ಲಾಂ ಆಗಬೇಕೆಂದಿಲ್ಲ, ಅದಿಲ್ಲದ ಪಕ್ಷದಲ್ಲಿ ಕ್ರಿಶ್ಚಿಯನ್ ಆಗಬಹುದು, ದಲಿತರು ಆಗಬಹುದು ಇತ್ಯಾದಿ..ಒಂದನ್ನು ಗುರಿಮಾಡಿಕೊಳ್ಳುವುದಂತೂ ಸತ್ಯ. ಎಲ್ಲಾ ವಿಚಾರ, ಪಂಥ ಧರ್ಮ ಇವುಗಳಲ್ಲಿ ತಪ್ಪುಗಳನ್ನು ಹುಡುಕುವುದು ದೊಡ್ಡ ಬ್ರಹ್ಮ ವಿದ್ಯಯೇನಲ್ಲ. ಎಲ್ಲಾ ಕಡೆ ಒಳಿತು ಕೆಡುಕು ಇದ್ದೇ ಇರುತ್ತದೆ ಅದರಲ್ಲಿ ತತ್ವ ವಿಚಾರಗಳಲ್ಲಿ ಇರಬಹುದು ಅಥವಾ ಆಚರಣೆಗಳಲ್ಲಿ ಇರಬಹುದು ಯಾವುದೋ ಒಂದು ಇದ್ದೇ ಇರುತ್ತದೆ.

ನೆರೆಯ ಯಾವುದಾದರೂ ಒಂದು ರಾಷ್ಟ್ರವನ್ನು ಆಯ್ಕೆಮಾಡಿಕೊಂಡು ಅದರ ವಿರುದ್ಧ ಕುತಂತ್ರದ ಕೃತ್ತಿಮ ಅಪವಾದಗಳನ್ನ ಹೇರುತ್ತ ಜನರಲ್ಲಿ ವ್ಯವಸ್ಥಿತವಾಗಿ ದ್ವೇಷ ಹರಡುವುದು. ಅದು ಜರ್ಮನಿಯಲ್ಲಿ ಪೋಲೆಂಡ್ ಆದರೆ ಇಂಡಿಯಾದಲ್ಲಿ ಪಾಕಿಸ್ತಾನ. ಒಂದು ವೇಳೆ ಪಾಕಿಸ್ತಾನ ಭೂಖಂಡದಲ್ಲೇ ಇಲ್ಲ ಎಂದು ಭಾವಿಸಿದಲ್ಲಿ ಬೇರೆ ಯಾವುದಾದರೂ ಇದಕ್ಕೆ ಬಲಿಯಾಗಲೇಬೇಕಿತ್ತು.

ಉಗ್ರ ರಾಷ್ಟ್ರೀಯತೆ ಮತ್ತೊಂದು ಮಹತ್ವದ ತತ್ವ. ಈ ಪ್ರಕಾರ ಯುದ್ದೋನ್ಮಾದ ತುಂಬುವುದು ಇದಕ್ಕಾಗಿ ಸದಾ ಒಂದಿಲ್ಲೊಂದು ಅಂತಹ ಅಜೆಂಡಾ ಸಿದ್ಧಪಡಿಸುವುದು ಈ ವಿಚಾರವಾಗಿ ಜನರನ್ನು ಎಂಗೇಜ್ ಇಡುವುದು. ಎದ್ದೇಳು ವೀರ ಸಮರ ಕರೆದಿದೆ ಎಂದೆಲ್ಲ ರೊಚ್ಚಿಬ್ಬಿಸುವುದು.ಇನ್ನೊಂದು ಮಹತ್ವದ ಕಲೆಯೆಂದರೆ ಸುಳ್ಳುಗಳ ಕಥಾ ಹಂದರ ಹೆಣೆದು ಅದನ್ನೇ ಸತ್ಯ ಎಂಬಂತೆ ಒಪ್ಪಿಸುವುದಿದೆಯಲ್ಲ ಇದೇ ಈ ಫ್ಯಾಸಿಸ್ಟ್ ಜಗತ್ತಿನ ಅದ್ಬುತವಾದ ಕಲೆ.

ಅಧಿಕಾರ ಪಡೆಯಲು ಮಾನವಕುಲದಲ್ಲಿ ಇದುವರೆಗೂ ಮಾಡಲಾಗದಂತಹ ಪ್ರಕಾಂಡ ಕರ್ಮಕಾಂಡಗಳನ್ನು ಮಾಡುವುದು. ಪ್ರಜಾಪ್ರಭುತ್ವವನ್ನು ಖರೀದಿ ಮಾಡುವುದು, ತಗ್ಗುವ ಬಗ್ಗುವ ಹಿಗ್ಗುವ ಎಲ್ಲಾ ಅಸ್ತ್ರ ಪ್ರಯೋಗಿಸಲು ಹಿಂಜರಿಯುವುದಿಲ್ಲ. ಈ ವಿಷಯದಲ್ಲಿ ಮಾತ್ರ ಯಾವ ಸಿದ್ಧಾಂತವನ್ನು ಪಾಲಿಸುವುದೇ ಇಲ್ಲ. ಬ್ರಹ್ಮಾಂಡ  ಭ್ರಷ್ಟಾಚಾರ ಮರೆಮಾಚುವಲ್ಲಿ ಎತ್ತಿದ ಕೈ.

ಅಧಿಕಾರಕ್ಕೆ ಬಂದಾಗಲೂ ಇತಿಹಾಸ ಪಾಠವನ್ನೇ ಹೇಳುವುದು ಕಳೆದ ದಶಕದ ಸಾದ್ಯವಾದಷ್ಟು ಕಳೆದ ಶತಮಾನಗಳ ಸಮಸ್ಯೆಗಳನ್ನು ತಮ್ಮ ಅಧಿಕಾರದ ಕಾಲಾವಧಿಯಲ್ಲಿ ಪರಿಹರಿಸತಕ್ಕ ಜ್ವಲಂತ ಸಮಸ್ಯೆಗಳು. ಇತಿಹಾಸದಲ್ಲಿ ಅದೆಷ್ಟೋ ಒಳ್ಳೆಯ ವಿಷಯಗಳು ಇದ್ದರೂ ಇವರ ಕಣ್ಣಿಗೆ ಬೀಳುವ ಸಾಧ್ಯತೆಗಳೇ ಇಲ್ಲ. ಇಂತಹವರಲ್ಲಿ ಎಂತೆಂತಹ ಇತಿಹಾಸಕಾರರು ಇರುತ್ತಾರೆಂದರೆ ತಜ್ಞರು ಹೇಳ ಹೆಸರಿಲ್ಲದೆ ಓಡಿ ಹೋಗಿ ಕಾಡಲ್ಲಿ ಕೊನೆಯುಸಿರೆಳೆಯಬೇಕು ಅಂತವರು.

ಮತ್ತೊಂದು ಪ್ರಮುಖ ಅಂಶವೆಂದರೆ ದೇಶಪ್ರೇಮ ದೇಶಿಯತೆ ಎಂದು ಊದುತ್ತಾ ಮೈತುಂಬ ವಿದೇಶಿಯತೆ ತುಂಬಿರುವುದು. ವಿದೇಶಿ ಮಾರುಕಟ್ಟೆಯಲ್ಲಿ ದೇಶಿಯ ಉತ್ಪನ್ನಗಳು ನೆಲಕಚ್ಚಿದರೂ ಎಲ್ಲಾ ವಿದೇಶಿ ಕಂಪನಿಗಳು ಅವರ ಉತ್ಪನ್ನಗಳನ್ನು ಶಿರಸಾವಹಿಸಿ ಪೋಷಿಸುವುದು. ಕಡೆಗೆ ತಮ್ಮ ರಾಜಕೀಯ ಸಿದ್ಧಾಂತ ಕೂಡ ವಿದೇಶಿ ಯಥಾವತ್ ಅನುಕರಣೆಯಾಗಿರುತ್ತದೆ. ಬೇರೆಯವರಲ್ಲಿ ವಿದೇಶಿಯತೆ ಹುಡುಕುವುದು ಮಾತ್ರ ಮರೆಯುದಿಲ್ಲ.

ಅದೇ ರೀತಿ ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಮಂತ್ರ ಪಠಣ ಇತ್ಯಾದಿಗಳ ಬದಲಾಗಿ ವಿರೋಧಿಗಳನ್ನು ಬಗ್ಗು ಬಡಿಯುವ ಕಾರ್ಯಕ್ರಮ ಹಾಕಿಕೊಂಡು ಅಂತ ಪಕ್ಷಗಳನ್ನು, ವ್ಯಕ್ತಿಗಳನ್ನು, ಸಮುದಾಯಗಳನ್ನು ಹುಡುಕಿ ನಾಶ ಮಾಡವುದು ಆದ್ಯತೆ.

ಧರ್ಮಶ್ರೇಷ್ಟತೆ : ತನ್ನ ಧರ್ಮವಲ್ಲದೇ ಉಳಿದ ಎಲ್ಲ ಧರ್ಮಗಳು ಅತ್ಯಂತ ಕೀಳು ಎಂಬ ಭಾವನೆ ಮೂಡುವಂತೆ ಮಾಡುವುದು. ಶಾಲಾ ಕಾಲೇಜುಗಳಲ್ಲಿ ವಿಜ್ಞಾನವನ್ನು ಅವಹೇಳನ ಮಾಡುವುದು. ಪುರಾಣ ಕಲ್ಪಿತ ಕಥೆಗಳನ್ನು ಪಠ್ಯವನ್ನಾಗಿಸುವುದು ಕೂಡ ಇದೇ ಸ್ಟ್ಯಾಟಜಿಯಲ್ಲಿ ಬರುತ್ತದೆ. ಧರ್ಮ ಶ್ರೇಷ್ಠತೆಯ ಸುತ್ತಲೇ ಎಲ್ಲಾ ಪಠ್ಯ ವಿಷಯಗಳು ಪಾಠಗಳೂ ಗಿರಿಕಿಹೊಡೆಯುತ್ತವೆ.

ಇದೇ ಜರ್ಮನಿಯಲ್ಲಾಗಿದೆ ಇಟಲಿಯಲ್ಲಾಗಿದೆ ಈಗ ಭಾರತದಲ್ಲಿ ಆಗುತ್ತಿದೆ.. ಮುಂದೆ ಅಲ್ಲಿ ಏನಾಗಿತ್ತೋ ಇಲ್ಲಿಯೂ ಅದೇ ಆಗುತ್ತದೆ…

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!