ಇಂದು ಜನರನ್ನು ಅವರದೇ ಹಕ್ಕುಗಳಿಗಾಗಿ ಹೋರಾಟ ಮಾಡಲು ಸೇರಿಸುವುದು ದೊಡ್ಡ ಪವಾಡವಾಗಿದ್ದು, ಹೊಸ ಕಾಲಘಟ್ಟಕ್ಕೆ ಅಗತ್ಯವಿರುವ ಚಳುವಳಿ ಕಟ್ಟಬೇಕಿದೆ ಎಂದು ಪ್ರಗತಿಪರ ಚಿಂತಕ, ಸಾಮಾಜಿಕ ಹೋರಾಟಗಾರ ಡಾ. ಎಚ್. ವಿ. ವಾಸು ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಡ್ಯ ನಗರದ ಕರ್ನಾಟಕ ಸಂಘದ ಆವರಣದಲ್ಲಿ ಕರ್ನಾಟಕ ಜನಶಕ್ತಿ ಸಂಘಟನೆಯ ದಶಮಾನೋತ್ಸವ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಸಂಘಟನೆಗಳು ವಿಘಟನೆಗಳಾಗಿ ಹೋಗಿದೆ. ಸಂಘಟನೆಯ ಒಳಗೆ ಸಾಕಷ್ಟು ಸಮಸ್ಯೆಗಳಿವೆ. ತುಂಬಾ ಜನಕ್ಕೆ ಚಳುವಳಿ ಸಾಕಾಗಿದೆ.ಇಂತಹ ಕಾಲಘಟ್ಟದಲ್ಲಿ ರೈತರು, ಅಸಂಘಟಿತ ಕಾರ್ಮಿಕರು, ವಿದ್ಯಾರ್ಥಿಗಳು, ಸ್ಲಂ ಜನರನ್ನು ಒಳಗೊಂಡ ಹೊಸ ಕಾಲಘಟ್ಟದ ಚಳುವಳಿಯ ಅನಿವಾರ್ಯತೆ ಇದೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಹಲವು ಸಮಸ್ಯೆಗಳಿವೆ. ಮೈಷುಗರ್ ಕಾರ್ಖಾನೆ ,ಪಿಎಸ್ಎಸ್ ಕೆ ಕಾರ್ಖಾನೆ ಉಳಿವಿಗಾಗಿ ಸಂಘಟಿತ ಹೋರಾಟ ನಡೆಯುತ್ತಿಲ್ಲ. ರೈತರು,ಅಸಂಘಟಿತ ಕಾರ್ಮಿಕರಿಗೆ ಜಿಲ್ಲೆಯಲ್ಲಿ ಸಂಘಟನೆಗೆ ನಾಯಕತ್ವ ಕೊಡದಂತಹ ಕೆಟ್ಟ ಪರಿಸ್ಥಿತಿ ಉದ್ಭವವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಅಂದು 80-90ರ ದಶಕದಲ್ಲಿ ಇದ್ದಂತಹ ರೈತ ಚಳುವಳಿ, ದಲಿತ ಚಳುವಳಿ ಕಟ್ಟಲು ಸಾಧ್ಯವಿಲ್ಲ.
ಜನರನ್ನು ಅವರದೇ ಸಮಸ್ಯೆಗಳಿಗಾಗಿ ಸೇರಿಸಿ ಹೋರಾಟ ಮಾಡುವುದು ಇಂದು ಸಾಧ್ಯವಿಲ್ಲ. ಆದರೆ ದೆಹಲಿಯಲ್ಲಿ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ರೈತರು ಒಂದು ಸಂಘಟನೆ ಗಟ್ಟಿಯಾಗಿದ್ದರೆ ಯಾವ ರೀತಿ ನ್ಯಾಯ ಪಡೆಯಬಹುದು ಎಂದು ಒಂದು ವರ್ಷಕ್ಕೂ ಹೆಚ್ಚು ಕಾಲ ಪ್ರತಿಭಟನೆ ಮಾಡುವ ಮೂಲಕ ತೋರಿಸಿಕೊಟ್ಟಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ಹರಿದರೂ ಶೇ.51ರಷ್ಟು ಭಾಗ ಒಣ ಭೂಮಿ ಇದೆ.
ಜಿಲ್ಲೆಯಲ್ಲಿ ರಾಜಕಾರಣಿಗಳು ಅತ್ಯಂತ ಬೇಜವಾಬ್ದಾರಿ ನಾಯಕರಾಗಿದ್ದಾರೆ. ಅವರಲ್ಲಿ ಯಾರಿಗೂ ನಾಯಕತ್ವ ಕೊಡುವ ಮನಸ್ಸಿಲ್ಲ. ರೈತ ಚಳುವಳಿಗೆ ನಾಯಕತ್ವದ ಕೊರತೆಯಿದ್ದು, ಹೀಗಾದರೆ ಇನ್ನು ಕೆಲವೇ ವರ್ಷಗಳಲ್ಲಿ ಮೈಷುಗರ್ ಹಾಗೂ ಪಿ ಎಸ್ ಎಸ್ ಕೆ ಕಾರ್ಖಾನೆ ಕಳೆದುಕೊಳ್ಳುತ್ತೇವೆ ಎಂದರು.
ಮಂಡ್ಯದಲ್ಲಿ ಕರ್ನಾಟಕ ಜನಶಕ್ತಿ ಸಂಘಟನೆಯ ಹಲವಾರು ಹೋರಾಟಗಳಲ್ಲಿ ನಾನು ಭಾಗವಹಿಸಿದ್ದೇನೆ. ಜನಶಕ್ತಿ ರೈತರು, ಅಸಂಘಟಿತ ಕಾರ್ಮಿಕರು, ಶ್ರಮಿಕ ನಿವಾಸಿಗಳ ಪರವಾಗಿ ಹಲವು ಹೋರಾಟಗಳನ್ನು ಮಾಡಿದೆ. ಅಸಂಘಟಿತ ಕಾರ್ಮಿಕರಿಗೆ ಇಎಸ್ಐ,ಪಿಎಫ್ ಬೆಲೆಯಲ್ಲಿ ಹೆಚ್ಚಳ ಮಾಡಿಸಿದೆ.ಶ್ರಮಿಕ ಜನರ ಪರವಾಗಿ ಗಟ್ಟಿಯಾಗಿ ನಿಂತು ಒಂದು ಕೂಡ ಸ್ಲಂ ಎತ್ತಂಗಡಿಯಾಗದಂತೆ ಹೋರಾಟ ನಡೆಸಿದೆ.
ಕಾಳಿಕಾಂಬ ಸ್ಲಂ ಜನರ ಹೋರಾಟದಲ್ಲಿ ಪ್ರಭಾವಿ ರಾಜಕಾರಣಿಗಳನ್ನು ಎದುರುಹಾಕಿಕೊಂಡು ಸಂಘಟನೆ ಜಯ ಸಾಧಿಸಿದೆ ಆರ್ ಟಿ ಓ ಕಛೇರಿ ಮುಂಭಾಗದಲ್ಲಿರುವ ಕಾಳಪ್ಪ ಬಡಾವಣೆಯನ್ನು ಪಟ್ಟಭದ್ರ ಶಕ್ತಿಗಳಿಂದ ರಕ್ಷಣೆ ಮಾಡಿ ಅವರನ್ನು ಅಲ್ಲೇ ಉಳಿಸಿರುವುದು ಜನಶಕ್ತಿ ಹೋರಾಟದಿಂದ ಎಂದರು.
ಕರ್ನಾಟಕ ಜನಶಕ್ತಿ ಸಂಘಟನೆಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾ. ಸಿ. ಬಂದಿಗೌಡ 10 ವರ್ಷಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ಚಾಲನೆ ನೀಡಿದರು. ಎಚ್.ಎಲ್. ಕೇಶವಮೂರ್ತಿ ಅಂತ ಹಿರಿಯ ಸಾಹಿತಿಗಳು ಸೇರಿದಂತೆ ಹಲವರು ಜನಪರ ಸಂಘಟನೆ ಕರ್ನಾಟಕ ಶಕ್ತಿಯ ಭಾಗವಾಗಿದ್ದು ಅವರ ಮಾರ್ಗದರ್ಶನದಲ್ಲಿ ಹಲವು ಚಳವಳಿಗಳನ್ನು ರೂಪಿಸಿದ್ದು ಹೆಮ್ಮೆಯ ಸಂಗತಿ ಎಂದರು.
ಕಾವೇರಿ ಅಂತಿಮ ತೀರ್ಪು ಹಾಗೂ ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಮಂಡ್ಯ ತಾಲ್ಲೂಕಿನ 750 ಹಳ್ಳಿಗಳಲ್ಲಿ ಪ್ರಚಾರ ಜಾಥ ನಡೆಸಿ ಜಿಲ್ಲಾಧಿಕಾರಿಗಳಿಗೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಕರ್ನಾಟಕ ಜನಶಕ್ತಿ ಪಾತ್ರ ದೊಡ್ಡದಿತ್ತು.
ಹಾಗೆಯೇ ದೆಹಲಿಯಲ್ಲಿ ಕಾವೇರಿ ನೀರಿನ ಹೋರಾಟದ ಬಗ್ಗೆ ಜಂತರ್ ಮಂತರ್ ನಲ್ಲಿ ಹೋರಾಟ ರೂಪಿಸಿದ್ದು ಐತಿಹಾಸಿಕ ಹೋರಾಟವಾಗಿತ್ತು.ಆದರೆ ಮಂಡ್ಯ ಜಿಲ್ಲೆಯಲ್ಲಿರುವ ರಾಜಕಾರಣಿಗಳು ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ನಾಯಕತ್ವ ನೀಡುವ ಮನಸ್ಸು ಮಾಡದಿರುವುದು ಅವರ ಬೇಜವಾಬ್ದಾರಿ ತೋರಿಸುತ್ತದೆ. ಹೀಗಾದರೆ ಪ್ರಭುತ್ವ ಜನರ ಮೇಲೆ ಸವಾರಿ ಮಾಡುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿರಿಯ ರೈತ ನಾಯಕಿ ಅನಸೂಯಮ್ಮ ಅರಳಾಳುಸಂದ್ರ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಚಿಂತಕ,ವಕೀಲ ಬಿ.ಟಿ. ವಿಶ್ವನಾಥ ಮುಖ್ಯ ಭಾಷಣ ಮಾಡಿದರು.
ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ ಸದಸ್ಯ ಸಿದ್ದರಾಜು ಪ್ರಸ್ತಾವನೆ ಮಾಡಿದರು. ಪ್ರಧಾನ ಕಾರ್ಯದರ್ಶಿ ಮಲ್ಲಿಗೆ ಸಿರಿಮನೆ ಜನಶಕ್ತಿ ಪ್ರಣಾಳಿಕೆ ಮತ್ತು ರಾಜ್ಯ ವರದಿ ಮಂಡನೆ ಮಾಡಿದರು. ರಾಜ್ಯ ಕಾರ್ಯದರ್ಶಿ ಪೂರ್ಣಿಮಾ ಜಿಲ್ಲಾ ವರದಿ ಮಂಡನೆ ಮಾಡಿದರು.
ಕರ್ನಾಟಕ ಜನಶಕ್ತಿಯ ಕಮಲ, ಜ್ಯೋತಿ, ಈಶ್ವರಿ, ಪ್ರಕಾಶ್, ಎನ್.ನಾಗೇಶ್, ಜಿ. ಸಂತೋಷ್, ರಜನಿಕಾಂತ್, ಅಂಜಲಿ ಮತ್ತಿತರರು ಉಪಸ್ಥಿತರಿದ್ದರು.