ವಿವೇಕಾನಂದ ಎಚ್. ಕೆ.
ಗಾಂಧಿ………….
ಗಾಂಧಿ ಎದೆಯಿಂದ ಘೋಡ್ಸೆ ಚಿಮ್ಮಿಸಿದ ರಕ್ತ ಇನ್ನೂ ಹರಿಯುತ್ತಲೇ ಇದೆ,
ಗಾಂಧಿ ಉಸಿರಾಡುತ್ತಲೇ ಇದ್ದಾರೆ,
ಘೋಡ್ಸೆಯೂ ಸಹ…….
ಗಾಂಧಿಯ ರಾಮ,
ಘೋಡ್ಸೆಯ ರಾಮ,
ಗಾಂಧಿಯ ಧರ್ಮ,
ಘೋಡ್ಸೆಯ ಧರ್ಮ ಸಂಘರ್ಷ ಇನ್ನೂ ನಡೆಯುತ್ತಲೇ ಇದೆ……..
ಗಾಂಧಿ ಬೆಂಬಲಿಗರು ಭ್ರಷ್ಟರಾದರು,
ಗಾಂಧಿ ವಿರೋಧಿಗಳು ದುಷ್ಟರಾದರು,
ಭ್ರಷ್ಟ – ದುಷ್ಟರ ಅಧಿಕಾರ ಇನ್ನೂ ಮುಂದುವರಿಯುತ್ತಲೇ ಇದೆ,
ಅಹಿಂಸಾ ಪರಮೋಧರ್ಮ ಎಂದು ನುಡಿಯುತ್ತಲೇ ಇದ್ದಾರೆ…….
ಸತ್ಯ ನುಡಿದವ ಕೊಲೆಯಾದ,
ಅಸತ್ಯ ನುಡಿಯುವವ ನಾಯಕನಾದ,
ಭತ್ತ ಬೆಳೆಯುವ ರೈತ ಆತ್ಮಹತ್ಯೆ ಮಾಡಿಕೊಂಡ,
ಅಕ್ಕಿ ಮಾರುವ ವ್ಯಾಪಾರಿ ಕೊಟ್ಯಾಧೀಶನಾದ,
ಗಾಂಧಿಯ ” ಸತ್ಯಮೇವ ಜಯತೇ ” ಇನ್ನೂ ಶೀರ್ಷಿಕೆಯಾಗಿಯೇ ಇದೆ…..
ಶಸ್ತ್ರಗಳೂ ಇವೆ,
ಶಾಸ್ತ್ರಗಳೂ ಇವೆ,
ಕಾನೂನು ಇದೆ,
ಶಿಕ್ಷೆಯೂ ಇದೆ,
ದೈವವೂ ಇದೆ,
ಭ್ರಷ್ಟಾಚಾರವೂ ಇನ್ನೂ ನಿರಂತರವಾಗಿದೆ,
ಗಾಂಧಿ ಫೋಟೋ ಗೋಡೆಯ ಮೇಲೆ ಇನ್ನೂ ಉಳಿದಿದೆ……..
ಖುರಾನ್ ಪಠಣವಾಗುತ್ತಲೇ ಇದೆ,
ಬೈಬಲ್ ಪ್ರಾರ್ಥನೆಯಾಗುತ್ತಲೇ ಇದೆ,
ಭಗವದ್ಗೀತೆ ಶ್ಲೋಕಿಸುತ್ತಲೇ ಇದೆ,
ಅನೈತಿಕತೆ ಮೆರೆಯುತ್ತಲೇ ಇದೆ,
ಮದ್ಯಪಾನ ಸುರಿಯುತ್ತಲೇ ಇದೆ,
ಗಾಂಧಿಯ ಹುಟ್ಟು ಹಬ್ಬಗಳು ಇನ್ನೂ ನಡೆಯುತ್ತಲೇ ಇದೆ…..
ಮರ್ಯಾದ ಹತ್ಯೆಗಳು ನಡೆಯುತ್ತಿವೆ,
ಅಸ್ಪೃಶ್ಯತಾ ಆಚರಣೆಯೂ ಇದೆ,
ಜಾತಿ ಲೆಕ್ಕಾಚಾರಗಳು ನಿರಂತರವಾಗಿದೆ,
ಸಬ್ ಕೋ ಸನ್ಮತಿ ದೇ ಭಗವಾನ್ ಧ್ವನಿ ಕೇಳಿ ಬರುತ್ತಲೇ ಇದೆ……..
ಗಾಂಧಿಯ ಹುಡುಕಾಟದಲ್ಲಿ………
ಕರ್ನಾಟಕದ ಬೆಳಗಾವಿ ಜಿಲ್ಲೆಯ ಒಂದು ಹಳ್ಳಿಯ ನಿರಾಶ್ರಿತ ಶಿಬಿರದ ಮುಂದೆ ಸರ್ಕಾರದ ಪರಿಹಾರಕ್ಕಾಗಿ ಕಾದು ಕುಳಿತು ಎಲ್ಲವನ್ನೂ ಕಳೆದುಕೊಂಡ ರೈತನೊಬ್ಬ ದಾರಿಯತ್ತ ದೃಷ್ಟಿ ನೆಟ್ಟು ಸರ್ಕಾರದ ಜೀಪು ಬರುವುದನ್ನೇ ತದೇಕಚಿತ್ತದಿಂದ ನೋಡುತ್ತಿರುವ ಕಣ್ಣುಗಳಲ್ಲಿ ಗಾಂಧಿ ಕಾಣಿಸುತ್ತಾರೆ…….
ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ದಲಿತನೊಬ್ನನನ್ನು ಇಳಿಸಿ ಸಹಜವಾಗಿ ಅದರಿಂದ ಆತ ಉಸಿರುಗಟ್ಟಿ ಸತ್ತ ನಂತರ ಆತನ ಹೆಂಡತಿ ಮಕ್ಕಳು ಆ ಶವದ ಮೇಲೆ ಬಿದ್ದು ಅಳುತ್ತಿರುವಾಗ ಅವರ ಕಣ್ಣೀರಿನಲ್ಲಿ ಗಾಂಧಿಯನ್ನು ನೋಡಬಹುದು…….
ಭಾರತದ ಬಹುತೇಕ ಎಲ್ಲಾ ಪ್ಲೈ ಓವರ್ ರಸ್ತೆಗಳ ಕೆಳಗೆ ಮನುಷ್ಯ ಪ್ರಾಣಿಯ ಲಕ್ಷಣಗಳನ್ನೇ ಹೊಂದಿದ್ದರು ಕೆಲವು ಅನಾಥರು ಗಾಳಿಚಳಿಮಳೆಗೂ ಜಗ್ಗದೆ ಅಲ್ಲಿಯೇ ವಾಸ ಮಾಡುತ್ತಿರುವವರ ಮನಸ್ಸುಗಳಲ್ಲಿ ಗಾಂಧಿಯನ್ನು ನೋಡಬಹುದು……
ಬಸ್ ರೈಲು ನಿಲ್ದಾಣಗಳಲ್ಲಿ ಬಣ್ಣ ಬಣ್ಣದ ಉಡುಗೆಗಳಲ್ಲಿ ರಂಗುರಂಗಿನ ಮೇಕಪ್ಪುಗಳಲ್ಲಿ ಗಿರಾಕಿಗಳಿಗಾಗಿ ಕಾದು ಕುಳಿತಿರುವ ನಿತ್ಯ ಸುಮಂಗಲಿಯರ ಕನಸುಗಳಲ್ಲಿ ಗಾಂಧಿ ಅಡಗಿದ್ದಾರೆ. ಸ್ವಲ್ಪ ಕಷ್ಟ ಪಟ್ಟರೆ ಕಾಣಬಹುದು…..
ಬೃಹತ್ ನಗರಗಳ ಸರ್ಕಾರಿ ಆಸ್ಪತ್ರೆಗಳ ಪ್ರತಿ ಹಾಸಿಗೆಯ ಮೇಲೆ ಬಡತನ ಮತ್ತು ಅಲ್ಲಿನ ವ್ಯವಸ್ಥೆಯಿಂದಾಗಿಯೇ ತನ್ನ ಆಯಸ್ಸು ಕಡಿಮೆ ಆಗಿರುವುದನ್ನು ಯೋಚಿಸುತ್ತಲೇ ಕೆಮ್ಮುತ್ತಿರುವ ರೋಗಿಗಳ ಉಗುಳಿನಲ್ಲಿ ಗಾಂಧಿ ಅಡಗಿದ್ದಾರೆ…..
ಕಾಲೇಜಿನ ಹಿಂಭಾಗದ ಟೀ ಅಂಗಡಿಯಲ್ಲಿ ತಿನ್ನುವ ಬನ್ನಿನೊಳಗೆ ಗಾಂಜಾ ಚರಸ್ ಕೊಕೇನ್ ಇಟ್ಟು ಯುವಕರಿಗೆ ಮಾರಾಟ ಮಾಡಿ ಬದುಕು ಕಟ್ಟುವ ಮತ್ತು ಅದನ್ನು ಸೇವಿಸಿ ಬೈಕ್ ವೀಲಿಂಗ್ ಮಾಡುತ್ತಾ ರಾತ್ರಿಗಳಲ್ಲಿ ಮಜಾ ಉಡಾಯಿಸುವ ಹಾಗು ಅದನ್ನು ನಿಯಂತ್ರಿಸಲಾಗದ ಬೃಹತ್ ಪೋಲೀಸ್ ವ್ಯವಸ್ಥೆಯ ಅಸಹಾಯಕತೆಯ ನಿಟ್ಟುಸಿರಿನಲ್ಲಿ ಗಾಂಧಿ ಸ್ಪಷ್ಟವಾಗಿ ಕಾಣುತ್ತಾರೆ…..
ಅಂಬೇಡ್ಕರ್ ಎಂಬ ಅಸ್ಪೃಶ್ಯ ಹುಡುಗ ಅದು ಯಾವ ಮಾಯೆಯಲ್ಲೋ ತನ್ನ ಅತ್ಯದ್ಭುತ ಪ್ರತಿಭೆಯಿಂದ ಈ ಆಧ್ಯಾತ್ಮದ ತವರೂರು ಭಾರತದ ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಅಂಗೀಕರಿಸಲ್ಪಟ್ಟ ಕಾನೂನುಗಳು ಅವರ ಆಶಯಕ್ಕೆ ವಿರುದ್ದವಾಗಿ ಬಹುತೇಕ ಶ್ರೀಮಂತರ ರಕ್ಷಕವಾಗಿ ಬಡವರು ಮಾತ್ರ ಅದಕ್ಕೆ ಬಲಿಯಾಗಿದ್ದು ಆ ಬಡವರ ಚರ್ಮದ ಬೆವರಿನಲ್ಲಿ ಗಾಂಧಿ ಕಾಣುತ್ತಾರೆ…..
ಆದ್ದರಿಂದ ಈ ಸಂದರ್ಭದಲ್ಲಿ ಈ ಹಂತದಲ್ಲಿಯೇ ಗಾಂಧಿಯ ಹುಡುಕಾಟ ಅರ್ಥ ಕಳೆದುಕೊಳ್ಳುತ್ತದೆ……….
ಭಾರತದ ಬಹಳಷ್ಟು ಜನರು ಸ್ವಾಭಾವಿಕ ಮತ್ತು ಕೃತಕ ಬಣ್ಣಗಳ ನಡುವಿನ ವ್ಯತ್ಯಾಸಗಳನ್ನೇ ಮರೆತಿದ್ದಾರೆ……..
” ಸತ್ಯದೊಂದಿಗೆ ನನ್ನ ಬದುಕಿನ ಪ್ರಯೋಗ ” ಎಂಬ ಭಾವನೆಯೊಂದಿಗೆ ಬದುಕಿದ, ಆಹಾರವೇ ಇರಲಿ, ಉಡುಗೆಯೇ ಇರಲಿ, ಪ್ರಯಾಣವೇ ಇರಲಿ, ಭದ್ರತೆಯೇ ಇರಲಿ, ಮನೋ ದೈಹಿಕ ನಿಗ್ರಹಗಳೇ ಇರಲಿ ಎಲ್ಲದರಲ್ಲೂ ಪಾರದರ್ಶಕ ಸರಳತೆ ಮೆರೆದ, ಅಧಿಕಾವನ್ನು ತಿರಸ್ಕರಿಸಿದ ಗಾಂಧಿಯವರನ್ನು ಈಗ ಹುಡುಕುವುದು ಅರ್ಥಹೀನ……
ಇರಲಿ, ಇಷ್ಟೆಲ್ಲದರ ನಡುವೆಯೂ ಗಾಂಧಿಯನ್ನು ಒಪ್ಪಲೇ ಬೇಕೆಂಬ ಒತ್ತಾಯ ಸರಿಯಲ್ಲ. ಪ್ರತಿಯೊಬ್ಬರಿಗೂ ಅವರವರ ಆಯ್ಕೆಯ ಸ್ವಾತಂತ್ರ್ಯ ಇದೆ. ಆದರೆ ವಿಷಯದ ಆಳವನ್ನು ಬದುಕಿನ ಅನುಭವ ಮತ್ತು ವ್ಯವಸ್ಥೆಯ ಹಿನ್ನೆಲೆಯಲ್ಲಿ ಸರಿಯಾಗಿ ಗ್ರಹಿಸದಿದ್ದರೆ ಜೀವನಮೌಲ್ಯ ಕುಸಿಯುತ್ತದೆ. ಬದುಕನ್ನು ಹೇಗೋ ಕಳೆಯಬಹುದು. ಆದರೆ ಸತ್ವಯುತ ಬದುಕು ನಮ್ಮದಾಗಲು ನಾವು ಆಯ್ಕೆ ಮಾಡಿಕೊಳ್ಳುವ ದಾರಿ ತುಂಬಾ ಮುಖ್ಯ. ಉಳಿದದ್ದು ನಿಮಗೆ ಸೇರಿದ್ದು…….
ಗಾಂಧಿಯ ಬಗ್ಗೆ ಬರೆಯಲು
ಭಯವಾಗುತ್ತದೆ,
ಸಂಕೋಚವಾಗುತ್ತದೆ, ಗೊಂದಲವಾಗುತ್ತದೆ, ಅನುಮಾನವಾಗುತ್ತದೆ,
ನೋವು ಬೇಸರ ದುಃಖದಿಂದ ಆತ್ಮಸಾಕ್ಷಿ ಹಿಂಡುತ್ತದೆ…...
ಏಕೆಂದರೆ ಗಾಂಧಿ ಮನುಷ್ಯರೆಲ್ಲರ ಭಾವನೆಗಳ ಕನ್ನಡಿ. ಆತ್ಮವಂಚಕರು ಗಾಂಧಿ ಎಂಬ ಕನ್ನಡಿಯಲ್ಲಿ ನೋಡಿದಾಗ ಅವರ ಆತ್ಮಗಳು ಕಪ್ಪಾಗಿ ವಿಕೃತವಾಗಿ ಕಾಣುತ್ತವೆ. ಹಾಗಾಗಿ ಅವರೆಲ್ಲ ಗಾಂಧಿಯನ್ನು ದ್ವೇಷಿಸುತ್ತಾರೆ. ……
ಶಾಂತಿ ಅಹಿಂಸೆ ಹೇಡಿಗಳ ಅಸ್ತ್ರಗಳು ಎನ್ನಲಾಗುತ್ತದೆ. ಇದು ಅಪ್ರಬುದ್ಧ ಅವಿವೇಕಿ ಅತ್ಯುತ್ಸಾಹಿಗಳ ಹೇಳಿಕೆ ಅಷ್ಟೆ. ಭಾರತ ಸ್ವಾತಂತ್ರ್ಯದ ನಿಜವಾದ ಸಂಘಟಿತ ಶಕ್ತಿ ಗಾಂಧಿ ಮಾತ್ರವೆ……..
ಕೋಟ್ಯಾಂತರ ಜನರ ತ್ಯಾಗ ಬಲಿದಾನಗಳಿದ್ದರೂ ಗಾಂಧಿ ನಾಯಕತ್ವ ಇಲ್ಲದಿದ್ದರೆ ಹರಿಯುತ್ತಿದ್ದ ರಕ್ತ, ತಬ್ಬಲಿ ಮಕ್ಕಳ ಆಕ್ರಂದನ, ವಿಧವೆಯರ ಗೋಳು ಊಹಿಸಲಸಾಧ್ಯವಾಗಿರುತ್ತಿತ್ತು. ಸಾಮಾನ್ಯ ಜನರ ಅರಿವಿಗೆ ಇದು ನಿಲುಕುವುದಿಲ್ಲ……….
ಗಾಂಧಿ ನೆನಪಾದಾಗಲೆಲ್ಲ ನನಗೆ,
ನಾನೆಷ್ಟು ಕಪಟಿ, ನಾನೆಷ್ಟು ಅಸಮರ್ಥ, ನಾನೆಷ್ಟು ದುರ್ಬಲ, ನಾನೆಷ್ಟು ಅಜ್ಞಾನಿ, ನಾನೆಷ್ಟು ಆತ್ಮವಂಚಕ ಎಂದು ಮನಸ್ಸು ಹೇಳುತ್ತಿರುತ್ತದೆ……..
ಏನೇ ಆಗಲಿ, ಯಾರು ಏನೇ ಹೇಳಲಿ, ಜನಪ್ರಿಯತೆಯ ಅಮಲಿನಲ್ಲಿ ಯಾರನ್ನು ಬೇಕಾದರೂ ವಿಜೃಂಭಿಸಲಿ ಒಳ್ಳೆಯ ಪ್ರಬುದ್ಧ ಮನಸ್ಸುಗಳು ಈಗಲೂ ಗಾಂಧಿಯನ್ನು ಮರೆಯದಿರೋಣ….
ಯಾರೇ ಬೇಸರಿಸಿಕೊಂಡರೂ,…..
ಕಾಣಸಿಗುವ ಎಲ್ಲಾ ದೃಷ್ಟಿಕೋನಗಳಿಂದ ನೋಡಿದರೆ ಮಾತ್ರ ಗಾಂಧಿ ಎಲ್ಲರಿಗೂ ಏಕ ರೀತಿಯಲ್ಲಿಯೇ ಕಾಣುವರು. ಅದಕ್ಕೆ ಅವರೊಂದು ಸಾಕ್ಷಿ ಪ್ರಜ್ಞೆ.
ಹೇಳಲಾಗದ ಒಳ ಅರ್ಥದ ಇನ್ನೂ ಅನೇಕ ಭಾವನೆಗಳು ಹಾಗೆ ಬಚ್ಚಿಟ್ಟುಕೊಂಡಿವೆ…..
ಅಕ್ಟೋಬರ್ 2 ರ ಗಾಂಧಿ ಜನ್ಮದಿನದ ಸವಿ ನೆನಪಿನಲ್ಲಿ………
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,