Wednesday, September 11, 2024

ಪ್ರಾಯೋಗಿಕ ಆವೃತ್ತಿ

ಮೇ.17 ರಂದು ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಆರ್‌ಸಿಎಚ್ ಪೋರ್ಟಲ್ ಡೇಟಾ ಎಂಟ್ರಿ ಸಮಸ್ಯೆ ಬಗೆಹರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಮೇ 17 ರಂದು ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ರಾಜ್ಯ ಮಟ್ಟದ ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಖಜಾಂಚಿ ಪಿ.ಎಸ್.ಸಂಧ್ಯಾ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಆರ್‌ಸಿಎಚ್ ಡೇಟಾ ಎಂಟ್ರಿ ಸಮಸ್ಯೆಯಿಂದ ಕಳೆದ ಮೂರು ವರ್ಷಗಳಿಂದ ಆಶಾ ಕಾರ್ಯಕರ್ತೆಯರಿಗೆ ಆರ್ಥಿಕ ನಷ್ಟವಾಗಿದೆ. ಹಿಂಬಾಕಿ ರೂಪದಲ್ಲಿ ನಷ್ಟ ಪರಿಹಾರ ತುಂಬಿಸಿಕೊಡಬೇಕು ಎಂದರು.

ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಸರ್ಕಾರಿ ನೌಕರರಿಗೆ ವೇತನ, ಮುಂಬಡ್ತಿ, ರಜೆ, ನಿವೃತ್ತಿ ವೇತನ ಮತ್ತಿತರ ಸೌಕರ್ಯಗಳನ್ನು ನೀಡಬೇಕು. ಐಎಲ್‌ಸಿ ಶಿಫಾರಸ್ಸಿನಂತೆ ಇವರನ್ನು ಶೆಡ್ಯೂಲ್ಡ್ ವರ್ಕರ್ಸ್ ಎಂದು ಪರಿಗಣಿಸಿ ಶಾಸನಬದ್ಧ ವೇತನ, ಇಪಿಎಫ್, ಇಎಸ್‌ಐ ಮತ್ತಿತರ ಸೌಕರ್ಯಗಳನ್ನು ನೀಡಲು ಸರ್ಕಾರದಿಂದ ಆದೇಶ ನೀಡಬೇಕು ಎಂದು ಆಗ್ರಹಿಸಿದರು.

ಕೇಂದ್ರದಿಂದ 2000 ಹಾಗೂ ರಾಜ್ಯ ಸರ್ಕಾರದಿಂದ 4000 ರೂ.ಸೇರಿ ಒಟ್ಟು 6000 ಗೌರವ ವೇತನ ನೀಡಲಾಗುತ್ತಿದೆ. ಎರಡೂ ಗೌರವಧನವನ್ನು ಒಂದೇ ಗೌರವಧನ ಮಾಡಿ ಪ್ರತಿ ತಿಂಗಳು 10ನೇ ತಾರೀಖಿನೊಳಗೆ ಪಾವತಿಸಬೇಕು. ಹೆಚ್ಚುವರಿ ಕೆಲಸಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಆರೋಗ್ಯ ಇಲಾಖೆಯ 34 ಚಟುವಟಿಕೆಗಳನ್ನು ಹೊರತುಪಡಿಸಿ ಇತರೆ ಕೆಲಸಗಳನ್ನು ಮತ್ತು ಸರ್ಕಾರದ ಇತರೆ ಇಲಾಖೆಗಳ ಕೆಲಸಗಳನ್ನು ಮಾಡಿಸಬಾರದು. ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಮಾಸಿಕ ಗೌರವಧನ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ಆಶಾ ಸುಗಮಕಾರರನ್ನು ಆಶಾ ಸೇವೆಯಿಂದ ಬೇರ್ಪಡಿಸಿ ಅವರ ಹುದ್ದೆಗೆ ತಕ್ಕಂತೆ ಮಾಸಿಕ ಗೌರವಧನ ಮತ್ತು ಪ್ರಯಾಣ ಭತ್ಯೆಗಳನ್ನು ನೀಡಬೇಕು. ಕಾರ್ಯಕರ್ತೆಯರ ವಿವಿಧ ಗಂಭೀರ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಮತ್ತು ಚೇತರಿಕೆಗೆ ಪರಿಹಾರ ಮೊತ್ತ ಪಾವತಿಸಬೇಕು ಎಂದು ತಿಳಿಸಿದರು.

ಕೋವಿಡ್ ಪ್ರೋತ್ಸಾಹ ಧನ ನೀಡಬೇಕು. ಸೇವಾ ನಿವೃತ್ತಿ ಮತ್ತು ಸೇವಾ ಅವಧಿಯಲ್ಲಿ ಸ್ವಯಂ ನಿವೃತ್ತಿ ಪಡೆಯುವ ಕಾರ್ಯಕರ್ತೆಯರಿಗೆ ಜೀವನ ಯೋಗ್ಯ ನಿವೃತ್ತಿ ವೇತನ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಆಶಾ ಕಾರ್ಯಕರ್ತೆಯರಾದ ಜ್ಯೋತಿ,ಬಿ.ಎಂ ಪುಷ್ಪಾವತಿ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!