ಮದ್ದೂರಿನ ಕೊಕ್ಕರೆ ಬೆಳ್ಳೂರು ಗ್ರಾಮದ ಬೋರೆಶ್ವರಸ್ವಾಮಿ ದೇವರ ಹಬ್ಬ ಮತ್ತು ಪೂಜಾ ಕುಣಿತವು ಗ್ರಾಮದ ಭಕ್ತರ ಮಹಾಶಯರ ಸಹಯೋಗದೊಂದಿಗೆ ಬಹಳ ಯಶಸ್ವಿಯಾಗಿ ನಡೆಯಿತು.
ಈ ದೇವರ ಪೂಜೆಯು ಪ್ರತಿವರ್ಷಕ್ಕೊಮ್ಮೆ ನಡೆಯುತ್ತಿದ್ದು, ಸುತ್ತಲಿನ ಹತ್ತಾರು ಗ್ರಾಮದ ಜನರು ಈ ದೇವರ ಪೂಜೆಗೆ ಬರುತ್ತಾರೆ. ಪೂಜೆಯ ನಂತರ ಎಲ್ಲರ ಮನೆಗಳಲ್ಲಿ ಸಸ್ಯ ಆಹಾರದ ಊಟ ಮಾತ್ರವೇ ಇರುತ್ತದೆ. ಸಾಮಾನ್ಯವಾಗಿ ಸ್ಥಳೀಯವಾಗಿ ನಡೆಯುತ್ತಿರುವ ಗ್ರಾಮದ ಹಬ್ಬಗಳಲ್ಲಿ ಬಾಡೂಟವೇ ಪ್ರಮುಖವಾಗಿರುತ್ತದೆ.
ಪ್ರತಿ ವರ್ಷವೂ ಪೂಜಾ ಕುಣಿತವು ವಿಶೇಷವಾಗಿರುತ್ತದೆ. ದೇವರ ಮೆರವಣಿಗೆಯು ಗ್ರಾಮದ ಎಲ್ಲಾ ಬೀದಿಗಳಲ್ಲೂ ನಡೆಯುತ್ತದೆ. ಕೊಕ್ಕರೆ ಬೆಳ್ಳೂರಿನ ಶಾಲಾ ಮೈದಾನದಲ್ಲಿ ಮತ್ತು ಮಾರಮ್ಮನ ಗುಡಿಯ ಹತ್ತಿರ ಪೂಜಾ ಕುಣಿತವು ಬಹಳ ವಿಶೇಷವಾಗಿರುತ್ತದೆ.
ನಗಾರಿಯ ಬಡಿತದ ಶಬ್ದದೊಂದಿಗೆ ಭಕ್ತರು ಪೂಜಾ ಕುಣಿತವನ್ನು ನೋಡುತ್ತ ದೇವರಲ್ಲಿ ಭಕ್ತಿಯನ್ನು ಮೆರೆಯುವ, ಪೂಜಾ ಕುಣಿತ ತಂಡದ ಕಲಾವಿದರ ಶ್ರಮ, ಭಕ್ತಿ ಮತ್ತು ಚಾಕಚಕ್ಯತೆ ಬಹಳ ಮೆಚ್ಚುವಂತಹದ್ದು, ಶ್ಲಾಘನೀಯವಾದದ್ದು.
ಏಣಿ ಮೇಲೆ ಹತ್ತಿ ಸಮತೋಲನ ಮಾಡುವುದು(ಬ್ಯಾಲೆನ್ಸ್) ಮಾಡುವುದು ಮತ್ತು ಏಣಿ ಮೇಲೆ ಹತ್ತಿ ಟವಲ್ ನ್ನು ಬಾಯಿಯಲ್ಲಿ ಇಟ್ಟು ದೇವರ ಪೂಜೆಯನ್ನು ಬಾಯಲ್ಲಿ ಹಿಡಿದುಕೊಂಡು ಪೂಜಾ ಕುಣಿತವನ್ನು ಮೆರೆಸುತ್ತಾರೆ.
ಪೂಜಾ ಕುಣಿತವನ್ನು ಮಾಡುತ್ತಿರುವ ಕಲಾವಿದ ಮಧುವಿನ ಪ್ರದರ್ಶನವನ್ನು ವಿಡಿಯೋದಲ್ಲಿ ನೋಡಬಹುದು. ಇವರ ತಂದೆ ವೆಂಕಟೇಶರವರು ಕೂಡ ಪೂಜಾ ಕುಣಿತದ ಹಿರಿಯ ಕಲಾವಿದರು.
ಕಳೆದ ಸೋಮವಾರ 18ನೇ ತಾರೀಖಿನಂದು ದೇವರ ಕೊಂಡೋತ್ಸವ ಮತ್ತು ಮಂಗಳವಾರ 19ರಂದು ಅನ್ನಸಂರ್ಪಣೆಯು ನಡೆಯಿತು.