ಮಂಡ್ಯ ನಗರದ ಕರ್ನಾಟಕ ಸಂಘದಲ್ಲಿರುವ ಕೆ.ವಿ. ಶಂಕರಗೌಡ ಸಭಾಂಗಣದಲ್ಲಿ ಜುಲೈ 9 ರಂದು ಡಾ.ರಾಗೌ ಸಾಹಿತ್ಯ ಪ್ರಶಸ್ತಿ ಮತ್ತು ಕೆ. ಸಿಂಗಾರಿಗೌಡ ಪುಸ್ತಕ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ. ಜಯಪ್ರಕಾಶ್ ಗೌಡ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಖ್ಯಾತ ಸಾಹಿತಿ ಡಾ. ರಾಗೌ ವರ ಹೆಸರಿನಲ್ಲಿ ನೀಡುವ ಸಾಹಿತ್ಯ ಪ್ರಶಸ್ತಿಯನ್ನು ಹಂಪಿ ಕನ್ನಡ ವಿವಿಯ ಚರಿತ್ರೆ ವಿಭಾಗದ ಡಾ. ಎನ್ ಚಿನ್ನಸ್ವಾಮಿ ಸೋಸಲೆ ಅವರಿಗೂ ಹಾಗೂ ಮುತ್ಸದ್ದಿ ನಾಯಕ ಕೆ. ಸಿಂಗಾರಿಗೌಡರ ಹೆಸರಿನಲ್ಲಿ ನೀಡುವ ಕೆ. ಸಿಂಗಾರಿಗೌಡ ಪುಸ್ತಕ ಪ್ರಶಸ್ತಿಯನ್ನು ನಿವೃತ್ತ ಬ್ಯಾಂಕ್ ಉದ್ಯೋಗಿ, ಸಾಹಿತಿ ಮಂಡ್ಯದ ಎಂ. ಎಸ್.ಪರಶಿವಮೂರ್ತಿ ಅವರಿಗೆ ಪ್ರದಾನ ಮಾಡಲಾಗುವುದು ಎಂದರು.
ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಸೋಸಲೆ ಗ್ರಾಮದ ಡಾ. ಎನ್. ಚಿನ್ನಸ್ವಾಮಿ ಸೋಸಲೆ ಅವರು ಪಿಎಚ್ ಡಿ ಪದವಿ ಪಡೆದು 24 ವರ್ಷ ಹಂಪಿ ವಿವಿಯಲ್ಲಿ ಚರಿತ್ರೆ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ 24 ವರ್ಷ ಕಾರ್ಯನಿರ್ವಹಿಸಿದ್ದಾರೆ.
ಗಡಿ ಚಳುವಳಿ, ನಮ್ಮ ಗ್ರಾಮಗಳು ಅಂದು-ಇಂದು, ದಲಿತರ ಬದುಕು ಮೆಲುಕು ಮೊದಲಾದ 23 ಸ್ವತಂತ್ರ ಸಂಶೋಧನಾ ಕೃತಿಗಳನ್ನು ಪ್ರಕಟಿಸಿದ್ದು, ಅವರ ಸಾಹಿತ್ಯ ಸೇವೆಯನ್ನು ಗುರುತಿಸಿ ಡಾ. ರಾಗೌ ಸಾಹಿತ್ಯ ಪ್ರಶಸ್ತಿ (15000 ನಗದು ಹಾಗೂ ಪ್ರಶಸ್ತಿ) ನೀಡಿ ಗೌರವಿಸಲಾಗುತ್ತಿದೆ ಎಂದರು.
ಮಂಡ್ಯದ ಎಂ. ಎಸ್. ಪರಶಿವಮೂರ್ತಿಯವರು ಬ್ಯಾಂಕ್ ಉದ್ಯೋಗಿಯಾಗಿ 27 ವರ್ಷ ಕೆಲಸ ಮಾಡಿದ್ದಾರೆ.ಸಿಂಗಾಪೂರ್ ಮಗಳ ಮನೆಗೆ ಪ್ರವಾಸ ಕಥನ,ಕುಸುಮದಳಗಳು ಕಾದಂಬರಿ, ಮುಂದೂಡಿದ ನಿರ್ಧಾರ ಕಥಾ ಸಂಕಲನ, ಗಿರಿ ದಾಟಿದ ಮೇಲೆ ಆತ್ಮಕಥನ ರಚಿಸಿದ್ದಾರೆ. ಅವರ ಗೆರೆ ದಾಟಿದ ಮೇಲೆ ಆತ್ಮಕಥನಕ್ಕೆ ಎ.ಸಿಂಗಾರಿಗೌಡ ಪುಸ್ತಕ ಪ್ರಶಸ್ತಿಯನ್ನು 15000 ನಗದು ನೀಡಿ ಗೌರವಿಸಲಾಗುತ್ತಿದೆ ಎಂದು ತಿಳಿಸಿದರು.
ವಿಶ್ರಾಂತ ಕುಲಪತಿ ಡಾ. ಎನ್. ಎಸ್.ರಾಮೇಗೌಡ ಪ್ರದಾನ ಮಾಡಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ಸಾಹಿತಿ ಸಿಪಿಕೆ ವಹಿಸಲಿದ್ದಾರೆ. ಖ್ಯಾತ ಸಾಹಿತಿ ಡಾ. ರಾಗೌ ಹಾಗೂ ಕೆ.ಸಿಂಗಾರಿಗೌಡರ ಮಗ ಕೆ.ಎಸ್.ಆನಂದ್ ಮತ್ತಿತರರು ಉಪಸ್ಥಿತರಿದ್ದಾರೆ ಎಂದರು. ಕರ್ನಾಟಕ ಸಂಘದ ಸೋಮಶೇಖರ್ ಗೋಷ್ಠಿಯಲ್ಲಿದ್ದರು.