ಇಬ್ಬರು ಮಹಿಳೆಯರನ್ನು ಭೀಕರವಾಗಿ ಕೊಲೆ ಮಾಡಿ ರುಂಡ ಮುಂಡ ಬೇರೆ ಬೇರೆ ಮಾಡಿದ ಪ್ರಕರಣ ಮಂಡ್ಯ ಪೋಲಿಸರಿಗೆ ಕಗ್ಗಂಟಾಗಿ ಪರಿಣಮಿಸಿದೆ.
ಕೊಲೆಯಾದ ಮಹಿಳೆಯರ ಗುರುತು, ವಿಳಾಸದ ಬಗ್ಗೆಯಾಗಲಿ ಅಥವಾ ಆರೋಪಿಯ ಬಗ್ಗೆ ಆಗಲಿ ಮಂಡ್ಯ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿಲ್ಲ. ಈಗಾಗಲೇ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಪೊಲೀಸರು ಕರಪತ್ರದ ಮೂಲಕ, ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಕೊಲೆಯಾಗಿರುವ ಮಹಿಳೆಯರ ಬಗ್ಗೆ ಹಾಗೂ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕುವ ಕೆಲಸದಲ್ಲಿ ನಿರತರಾಗಿದ್ದರೂ ಯಾವುದೇ ಸುಳಿವು ಸಿಕ್ಕಿಲ್ಲ.
ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಕೊಲೆಯಾದ ಮಹಿಳೆಯರ ವಿಳಾಸ ಹಾಗೂ ಆರೋಪಿಯ ಬಗ್ಗೆ ಮಾಹಿತಿ ನೀಡಿದರೆ ಒಂದು ಲಕ್ಷ ರೂ.ಗಳ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಪಾಂಡವಪುರ ಟೌನ್ ಪೊಲೀಸ್ ಠಾಣೆ ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯರಿಬ್ಬರ ಶವ ದೊರಕಿತ್ತು.
7-6-2022 ರಂದು ಪಾಂಡವಪುರ ತಾಲೂಕಿನ ಬೇಬಿಕೆರೆ ಹಾಗೂ ಕೆ.ಬೆಟ್ಟಹಳ್ಳಿ ಮಾರ್ಗ ಮಧ್ಯೆ ಇರುವ ಬೇಬಿ ಕೆರೆಯ ಬಳಿ 30 ರಿಂದ 32 ವರ್ಷದ ಮಹಿಳೆಯ ಹೊಟ್ಟೆಯಿಂದ ಕೆಳಭಾಗ ಇರುವ ಶವ ಪತ್ತೆಯಾಗಿತ್ತು.ಅದೇ ರೀತಿ ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಗ್ರಾಮದ ಮಾಡರಹಳ್ಳಿ ಗ್ರಾಮದ ಸಿಡಿಎಸ್ ನಾಲೆಯಲ್ಲಿ ತೇಲಿ ಬಂದಿರುವ 40 ವರ್ಷದ ಮಹಿಳೆಯ ಅರ್ಧ ಭಾಗದ ದೇಹ ರೈತನ ಜಮೀನಿನಲ್ಲಿ ಸಿಕ್ಕಿತ್ತು.
ಎರಡೂ ಪ್ರಕರಣಗಳಲ್ಲಿ ಮಹಿಳೆಯರ ಹೊಟ್ಟೆಯ ಕೆಳಭಾಗ ಮಾತ್ರ ಸಿಕ್ಕಿದ್ದು,ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಎರಡೂ ಶವಗಳ ಕಾಲುಗಳನ್ನು ಕಟ್ಟಿ ದೇಹದ ಕೆಳ ಭಾಗವನ್ನು ಕತ್ತರಿಸಿ ಚೀಲದಲ್ಲಿ ಹಾಕಿ ದುಷ್ಕರ್ಮಿಗಳು ನೀರಿಗೆ ಎಸೆದಿದ್ದಾರೆ.
ಈ ಇಬ್ಬರೂ ಮಹಿಳೆಯರ ಬಗ್ಗೆ ಸಾಕಷ್ಟು ತನಿಖೆ ನಡೆಸಿದರೂ ಆರೋಪಿಗಳ ಪತ್ತೆಯಾಗಿಲ್ಲ.ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಕೊಲೆಯಾದ ಮಹಿಳೆಯರ ಬಗ್ಗೆ ಅಥವಾ ಆರೋಪಿಯ ಬಗ್ಗೆ ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂ.ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಮಾಹಿತಿದಾರರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂಬ ಭರವಸೆ ನೀಡಿದ್ದಾರೆ. ಮಾಹಿತಿ ಇದ್ದರೆ, ಪೊಲೀಸ್ ಕಂಟ್ರೋಲ್ ರೂಂ. 0823 2-224888 9480804800 ಡಿವೈಎಸ್ಪಿ ಶ್ರೀರಂಗಪಟ್ಟಣ ಉಪವಿಭಾಗ 94808 04821, ಪಿಐ ಪಾಂಡವಪುರ – 9480804858 ಹಾಗೂ ಕೆ. ಆರ್. ಸಾಗರ ವೃತ್ತ 9480804832 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.