ರಾಜ್ಯದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ನಮ್ಮ ಸರ್ಕಾರ ಪ್ರಸ್ತುತ ವರ್ಷ 13,000 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದ್ದು, ನೀರಾವರಿ ಯೋಜನೆ ಪೂರ್ಣಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ತಿಳಿಸಿದರು.
ಶ್ರೀರಂಗಪಟ್ಟಣ ತಾಲ್ಲೂಕು ಮೊಗರಹಳ್ಳಿ (ಮಂಟಿ)ಯ ಕೆ.ಆರ್.ಎಸ್ ಕುಸುಮ ಚಂದ್ರಶೇಖರ್ ಕಲ್ಯಾಣ ಮಂಟಪದಲ್ಲಿ ಕಾವೇರಿ ನೀರಾವರಿ ನಿಗಮ ನಿಯಮಿತಿ ವತಿಯಿಂದ ಆಯೋಜಿಸಿದ್ದ ಕೃಷ್ಣರಾಜಸಾಗರ,ಹಾರಂಗಿ ಕಬಿನಿ ಮತ್ತು ಚಿಕ್ಕಹೊಳೆ ಅಣೆಕಟ್ಟುಗಳ ನದಿ ಪಾತ್ರದಲ್ಲಿ ಪ್ರವಾಹ ಸಂದರ್ಭದಲ್ಲಿ ಉಂಟಾಗಬಹುದಾದ ಪ್ರತಿಕೂಲ ಪರಿಣಾಮಗಳ ನಿರ್ವಹಣೆಯ ಕುರಿತು ಪಾಲುದಾರರ ಪಾತ್ರದ ಬಗ್ಗೆ ಅರಿವು ಮೂಡಿಸುವ ಒಂದು ದಿನದ ವಿಚಾರ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ರಾಜ್ಯದ ಪಾಲಿನ ನೀರಾವರಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಲು ನಾವು ಮುಂದಾದಾಗ ನೆರೆ ರಾಜ್ಯಗಳಿಂದ ಅಡ್ಡಿ, ಆತಂಕಗಳು ಎದುರಾಗುತ್ತವೆ.ಅದನ್ನು ನಿವಾರಿಸಿಕೊಂಡು ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ, ಉದ್ಯೋಗ ಮತ್ತು ಉತ್ಪನ್ನ ಹೆಚ್ಚಿಸಿ ರೈತರಿಗೆ ನೆರವಾಗಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ನೀರಾವರಿಗೆ ಮೈಸೂರು ಮಹಾರಾಜರು ಅವರು ನೀಡಿರುವ ಕೊಡುಗೆ ಅಪಾರ. ಅವರು ನೀಡಿರುವ ಕೊಡುಗೆಗಳನ್ನು ಮುಂದಿನ ಪೀಳಿಗೆ ಉಳಿಸಿಕೊಂಡು ಹೋಗುವ ಸಾಮಾಜಿಕ ಹೊಣೆಗಾರಿಕೆ ನಮ್ಮ ಮೇಲಿದೆ. ಪ್ರತಿಯೊಬ್ಬ ನಾಗರಿಕರು ನೀರನ್ನು ವ್ಯರ್ಥ ಮಾಡದೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಮಳೆಯಿಂದ ಅತಿವೃಷ್ಟಿ, ಅನಾವೃಷ್ಟಿ ಸಾರ್ವಜನಿಕರ ಆಸ್ತಿ ಪಾಸ್ತಿ, ಪ್ರಾಣಹಾನಿ, ಮೂಲಭೂತ ಸೌಕರ್ಯಗಳ ಹಾನಿ ಮತ್ತು ಸಾಮಾಜಿಕ ಆರ್ಥಿಕ ನಷ್ಟಗಳನ್ನು ತಡೆಗಟ್ಟಲು ಅಣೆಕಟ್ಟುಗಳ ತುರ್ತು ಪರಿಸ್ಥಿತಿ ಕ್ರಿಯಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸ ಬೇಕು.ಇದಕ್ಕೆ ಸಾರ್ವಜನಿಕರು ಹಾಗೂ ಸಂಬಂಧಪಟ್ಟ ಇಲಾಖೆಗಳ ಸಹಭಾಗಿತ್ವ ಅಗತ್ಯ ಎಂದರು.
ಕನ್ನಂಬಾಡಿ ಬಗ್ಗೆ ಆತಂಕ ಬೇಡ
ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಕೃಷ್ಣರಾಜ ಸಾಗರ ಅಣೆಕಟ್ಟು ಭದ್ರವಾಗಿದೆ. ಅದರ ಬಗ್ಗೆ ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ.ಕನ್ನಂಬಾಡಿ ಅಣೆಕಟ್ಟೆಯ ಬಗ್ಗೆ ಎಚ್ಚರವಹಿಸಬೇಕಾದ ಸಂಸದೆಯೊಬ್ಬರು ಬೇಜಾವಬ್ದಾರಿ ಹೇಳಿಕೆ ನೀಡಿ ಜನರಲ್ಲಿ ಆತಂಕ ಮೂಡಿಸಿದ್ದರು.ಅಣೆಕಟ್ಟೆ ಸುರಕ್ಷತೆ ಹಾಗೂ ನದಿ ಪಾತ್ರದ ರಕ್ಷಣೆಯ ಬಗ್ಗೆ ತಿಳಿಸುವ ಕಾರ್ಯಾಗಾರದಲ್ಲಿ ಭಾಗವಹಿಸದಿರುವುದು ತಲೆ ತಗ್ಗಿಸುವ ವಿಚಾರ ಎಂದು ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಅಂದಿನ ಕಾಲದಲ್ಲಿ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದೂರದೃಷ್ಟಿಯಿಂದ ಬಹಳ ಭದ್ರವಾಗಿ ಕೆ.ಆರ್.ಎಸ್ ನಿರ್ಮಾಣ ಮಾಡಿದ್ದಾರೆ.ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಸಹ ಕೆ.ಆರ್.ಎಸ್ ಅನ್ನು ಸುರಕ್ಷಿತವಾಗಿ ಕಾಪಾಡಿಕೊಂಡು ನಡೆಸಿಕೊಂಡು ಹೋಗುವುದು ಸರ್ಕಾರಗಳ ಕರ್ತವ್ಯವಾಗಿದೆ ಎಂದು ಹೇಳಿದರು.
ಇದೇ ವೇಳೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ. ಗುರುರಾಜ್ ರವರು ಮಾತನಾಡಿ, ಅಪಾಯ ಉಂಟಾದಾಗ , ಅವಘಡ ಸಂದರ್ಭದಲ್ಲಿ ಕೈಗೊಳ್ಳುವ ಕಾರ್ಯಾಚರಣೆ ನಡೆಸುವ ಬ್ರೋನ್ ಟೋ ಸ್ಕೈಲಿಫ್ಟ್ ವ್ಯವಸ್ಥೆ ವಿಪತ್ತು ನಿರ್ವಹಿಸಿದ ಸಂದರ್ಭದಲ್ಲಿ ಬಳಸುವಂತಹ ಉಪಕರಣಗಳ ಮಾಹಿತಿ ತಿಳಿಸಿದರು.
ಶಾಸಕರಾದ ಸಾ.ರಾ.ಮಹೇಶ್,ಡಾ. ಕೆ.ಅನ್ನದಾನಿ,
ನಂಜನಗೂಡು ಶಾಸಕ ಬಿ. ಹರ್ಷವರ್ಧನ್, ಕಾವೇರಿ ನೀರಾವರಿ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಶಂಕರೇಗೌಡ ಸೇರಿದಂತೆ ಇತರರಿದ್ದರು.