ಪಾಂಡವಪುರ ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ನ್ಯಾಯಾಧೀಶರು ಪರಿಶೀಲನೆ ನಡೆಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ವತಿಯಿಂದ ವಿಶ್ವ ತಂಬಾಕು ನಿಷೇಧ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಿತು.
ಸಮಾರಂಭಕ್ಕೂ ಮುನ್ನ ಸರ್ಕಾರಿ ಆಸ್ಪತ್ರೆಯ ಕೊಠಡಿಗಳಿಗೆ ಭೇಟಿ ನೀಡಿದ ನ್ಯಾಯಾಧೀಶರಾದ ಮಹೇಶ್ ಹಾಗೂ ಕಿಶೋರ್ ಸ್ವಚ್ಛತೆ ಮತ್ತು ಚಿಕಿತ್ಸೆಯ ಬಗ್ಗೆ ರೋಗಿಗಳಿಂದ ಹಾಗೂ ಆಸ್ಪತ್ರೆಯ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ರೋಗಿಗಳನ್ನು ಚಿಕಿತ್ಸೆ ಮತ್ತು ಊಟದ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಮಾಡಿದರು. ಇದಕ್ಕೆ ಒಳ ರೋಗಿಗಳು ಮತ್ತು ಹೊರರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಹಾಗೂ ಊಟದ ವ್ಯವಸ್ಥೆ ತುಂಬಾ ಚೆನ್ನಾಗಿದ್ದು, ಔಷಧಿಗಳನ್ನು ನೀಡುತ್ತಾರೆ ಎಂದು ತಿಳಿಸಿದರು.
ಆಸ್ಪತ್ರೆ ಪರಿಸ್ಥಿತಿ, ರೋಗಿಗಳ ಮೂಲಭೂತ ಸೌಕರ್ಯಗಳ ಬಗ್ಗೆ ರೋಗಿಗಳಿಂದಲೇ ಮಾಹಿತಿ ಪಡೆದ ನ್ಯಾಯಾಧೀಶರು ಆಸ್ಪತ್ರೆಯ ವ್ಯವಸ್ಥೆ ತುಂಬಾ ಅಚ್ಚುಕಟ್ಟಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ನಂತರ ನಡೆದ ತಂಬಾಕು ನಿಷೇಧ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಪಾಂಡವಪುರ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಮಹೇಶ್ ಅವರು ಗಿಡಕ್ಕೆ ನೀರೆರೆದು ಉದ್ಘಾಟಿಸಿ, ಮಾತನಾಡಿದರು.
ಕೋವಿಡ್ ಕಷ್ಟಕಾಲದಲ್ಲಿ ವೈದ್ಯರು, ದಾದಿಯರು ಹಾಗೂ ಆಶಾ ಕಾರ್ಯಕರ್ತೆಯರು ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದರಿಂದ ಅನೇಕರ ಪ್ರಾಣ ಉಳಿಯಲು ಸಾಧ್ಯವಾಯಿತು.
ವೈದ್ಯರುಗಳು, ದಾದಿಯರು ಆಶಾ ಕಾರ್ಯಕರ್ತೆಯರು ಇಲ್ಲದಿದ್ದರೆ ದೇಶದ ಜನಸಂಖ್ಯೆಯಲ್ಲಿ ಬಹುಶಃ ಶೇ. ಹತ್ತರಷ್ಟು ಜನಸಂಖ್ಯೆ ಕಡಿಮೆ ಆಗುತ್ತಿತ್ತು.ವೈದ್ಯರು ಹಗಲು-ರಾತ್ರಿಯನ್ನದೆ ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದಾರೆಂದು ಶ್ಲಾಘಿಸಿದರು.
ನಮ್ಮ ವಕೀಲರ ಸಂಘಕ್ಕೆ ಬಂದ ಆರೋಗ್ಯ ಇಲಾಖೆ ಸಿಬ್ಬಂದಿಗಳು ಲಸಿಕೆ ನೀಡಿದರು.ಮನೆ ಮನೆಗೆ ತೆರಳಿದ್ದಲ್ಲದೆ, ಹಳ್ಳಿಗಳಿಗೆ ತೆರಳಿ ಪ್ರತಿಯೊಬ್ಬನಿಗೆ ಲಸಿಕೆ ನೀಡಿ ಜನರ ಪ್ರಾಣ ಕಾಪಾಡಿದರು ಎಂದು ಪ್ರಶಂಸೆ ವ್ಯಕ್ತಪಡಿಸಿದರು.