ಮಲೇರಿಯಾ ನಿರ್ಮೂಲನೆಗೆ ಜನರ ಸಹಕಾರ ಅಗತ್ಯ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎನ್. ಕೆ. ವೆಂಕಟೇಶ್ ಮನವಿ ಮಾಡಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಛೇರಿ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಶ್ರೀರಂಗಪಟ್ಟಣದ ಗಂಜಾಂ ರಸ್ತೆಯಲ್ಲಿರುವ ಬಾಲಕರ ವಸತಿ ನಿಲಯ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಮಲೇರಿಯಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನತೆ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಸ್ವಚ್ಚತೆಗೆ ಕ್ರಮ ವಹಿಸಿ ಸೊಳ್ಳೆಗಳ ಉತ್ಪತ್ತಿ ತಡೆಗಟ್ಟಿದರೆ ಮಲೇರಿಯಾವನ್ನು ನಿರ್ಮೂಲನೆ ಮಾಡಲು ಸಹಾಯವಾಗುತ್ತದೆ ಎಂದರು.
ಜಿಲ್ಲಾ ಸಹಾಯಕ ಕೀಟ ಶಾಸ್ತ್ರಜ್ಞರಾದ ಜಾನೆಟ್ ಮೆನೆಜಿಸ್ ಮಾತನಾಡಿ, ಪ್ಲಾಸ್ಮೋಡಿಯಂ ಎಂಬ ಪರೋಪ ಜೀವಿ ಮಲೇರಿಯಾ ರೋಗಕ್ಕೆ ಕಾರಣವಾಗಿದ್ದು, ಹೆಣ್ಣು ಅನಾಫಿಲಿಸ್ ಸೊಳ್ಳೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದರು.
ಮಲೇರಿಯಾ ಸಾಂಕ್ರಾಮಿಕ ರೋಗವಾಗಿದ್ದು ಪುರಾತನ ಕಾಲದಿಂದಲೂ ಅನೇಕ ಸಾವು-ನೋವುಗಳಿಗೆ ಕಾರಣವಾಗಿದೆ. 2025 ಕ್ಕೆ ಭಾರತವನ್ನು ಮಲೇರಿಯಾ ಮುಕ್ತ ದೇಶವನ್ನಾಗಿಸಲು ಸರ್ಕಾರ ಮತ್ತು ಆರೋಗ್ಯ ಇಲಾಖೆ ಸಂಕಲ್ಪ ಮಾಡಿದೆ ಎಂದು ತಿಳಿಸಿದರು.
ಚಳಿ ಜ್ವರ ,ತಲೆನೋವು, ಮೈ ಕೈ ನೋವು,ಬೆವರುವಿಕೆ ಇತ್ಯಾದಿ ಮಲೇರಿಯ ರೋಗದ ಲಕ್ಷಣಗಳಾಗಿದ್ದು ಎಲ್ಲ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಕ್ಷೇತ್ರಮಟ್ಟದಲ್ಲಿ ಉಚಿತ ರಕ್ತ ಲೇಪನವನ್ನು ಸಂಗ್ರಹಿಸಿ 24 ಗಂಟೆ ಒಳಗೆ ಪರೀಕ್ಷಿಸಲಾಗುತ್ತದೆ. ಮಲೇರಿಯಾ ದೃಢಪಟ್ಟಲ್ಲಿ ಉಚಿತವಾಗಿ ಮನೆ ಬಾಗಿಲಿಗೆ ಬಂದು ಚಿಕಿತ್ಸೆ ನೀಡುವ ಸೌಲಭ್ಯವಿದ್ದು ಜನರು ಬಳಸಿಕೊಳ್ಳಬೇಕೆಂದರು. ಎಂದರು
ಕೆರೆ, ಕಟ್ಟೆ, ಬಾವಿ ,ಕಲ್ಯಾಣಿ, ಕ್ವಾರೆ ಗುಂಡಿಗಳಲ್ಲಿ ಹೆಣ್ಣು ಅನಾಫಿಲಿಸ್ ಸೊಳ್ಳೆ ಉತ್ಪತ್ತಿಯಾಗುತ್ತವೆ. ಈ ಸೊಳ್ಳೆ ನಿಯಂತ್ರಣಕ್ಕಾಗಿ ಜೈವಿಕ ವಿಧಾನದಲ್ಲಿ ಗಪ್ಪಿ ಮತ್ತು ಗ್ಯಾಂಬುಸಿಯಾ ಮೀನು ಮರಿಗಳನ್ನು ಬಿಡಲಾಗುತ್ತಿದೆ. ಸಾರ್ವಜನಿಕರು ಸ್ವಯಂ ರಕ್ಷಣಾ ವಿಧಾನಗಳಾದ ಸ್ವಚ್ಛತೆ ನಿರ್ವಹಣೆ ,ಸೊಳ್ಳೆಪರದೆ ಉಪಯೋಗಿಸುವುದು ,ಹಸಿ ಬೇವಿನ ಸೊಪ್ಪಿನ ಹೊಗೆ ಹಾಕುವುದು ಮುಂತಾದ ಕ್ರಮಗಳನ್ನು ಅನುಸರಿಸುವುದರ ಮೂಲಕ ಸೊಳ್ಳೆ ಉತ್ಪತ್ತಿ ತಡೆಗಟ್ಟಬೇಕೆಂದು ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ್,ಡಾ.ಕೆ.ಪಿ.ಅಶ್ವಥ್ ಪುರಸಭೆ ಉಪಾಧ್ಯಕ್ಷ ಕೃಷ್ಣಪ್ಪ,ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಪಿ.ಮಾರುತಿ,ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ. ವೇಣುಗೋಪಾಲ್, ಜಿಲ್ಲಾ ಮೇಲ್ವಿಚಾರಕರಾದ ಬಿ .ಎನ್. ವೆಂಕಟೇಶ್, ಸಿದ್ದೇಗೌಡ, ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ಜಿಲ್ಲಾ ಉಪಾಧ್ಯಕ್ಷ ರಾಜು, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಲೀಂಪಾಷ, ಆರೋಗ್ಯ ಸುರಕ್ಷಾಧಿಕಾರಿಗಳ ಸಂಘದ ತಾಲ್ಲೂಕು ಅಧ್ಯಕ್ಷರಾದ ಮಂಗಳ,ಕೆಂಪೇಗೌಡ,ಜಿ.ಬಿ.ಹೇಮಣ್ಣ,ಚಂದನ್,ಫಣೀಂದ್ರ,ಕೃಷ್ಣೇಗೌಡ ಇತರರು ಹಾಜರಿದ್ದರು.