ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಸೇವೆ ಸಿಗುವುದಿಲ್ಲ ಎಂಬ ಮಾತು ವ್ಯಾಪಕವಾಗಿರುವ ಸಂದರ್ಭದಲ್ಲಿ ಪಾಂಡವಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಯ ವೈದ್ಯೆ ಡಾ. ಶಿಲ್ಪಶ್ರೀ ಗರ್ಭಿಣಿಯರಿಗೆ ಹಾಗೂ ಮಹಿಳೆಯರಿಗೆ ಉತ್ತಮ ಸೇವೆ ನೀಡುವ ಮೂಲಕ ಮನೆಮಾತಾಗಿದ್ದಾರೆ.
ಪಾಂಡವಪುರ ತಾಲ್ಲೂಕಿನ ಹಾಗೂ ಸುತ್ತಮುತ್ತಲಿನ ಹಲವು ತಾಲ್ಲೂಕುಗಳ ಗರ್ಭಿಣಿ ಸ್ತ್ರೀಯರ ಪಾಲಿಗೆ ತಮ್ಮ ಸೇವಾಕಾರ್ಯದ ಮೂಲಕ ಸ್ತ್ರೀ ರೋಗ ತಜ್ಞೆ ಡಾ.ಶಿಲ್ಪಶ್ರೀ ಸಂಜೀವಿನಿ ಆಗಿದ್ದಾರೆಂಬುದು ಈ ಭಾಗದ ಜನರ ಮಾತು.
ವೈದ್ಯೋ ನಾರಾಯಣ ಹರಿ ಎನ್ನುವಂತೆ ಜನರ ಪಾಲಿಗೆ ವೈದ್ಯರು ದೇವರಿದ್ದಂತೆ. ಡಾ.ಶಿಲ್ಪಶ್ರೀ ಅವರು ಗರ್ಭಿಣಿ ಸ್ತ್ರೀಯರೊಂದಿಗೆ ಆತ್ಮೀಯವಾಗಿ ಮಾತನಾಡುತ್ತಾರೆ.
ಅವರನ್ನು ಬಹಳ ಮುತುವರ್ಜಿಯಿಂದ ಪರೀಕ್ಷಿಸಿ ಕಾಳಜಿ ತೋರುತ್ತಾರೆ.ಗರ್ಭಿಣಿಯರ ಕುಟುಂಬದ ಸದಸ್ಯರಿಗೆ ಸಮಾಧಾನದಿಂದ ಮಾತನಾಡಿ ಗರ್ಭಿಣಿಯರನ್ನು ಯಾವ ರೀತಿ ಕಾಳಜಿಯಿಂದ ಆರೈಕೆ ಮಾಡಬೇಕು.ಆಹಾರ,ಮಾತ್ರೆ ಇವುಗಳ ಬಗ್ಗೆ ಸಲಹೆ ನೀಡುತ್ತಾರೆ.
ಈ ಕಾಳಜಿಯ ಮಾತುಗಳಿಂದಲೇ ಅವರು ಮಹಿಳೆಯರ ಪಾಲಿನ ಅಚ್ಚುಮೆಚ್ಚಿನ, ನಂಬಿಕೆಯ ವೈದ್ಯರಾಗಿದ್ದಾರೆ.
ಗರ್ಭಿಣಿ ಸ್ತ್ರೀಯರು ತಮ್ಮ ಹೆರಿಗೆ ಸಂದರ್ಭದಲ್ಲಿ ಡಾ.ಶಿಲ್ಪಶ್ರೀ ಬಳಿ ಆರೋಗ್ಯ ತೋರಿಸಿದರೆ, ತಾಯಿ ಹಾಗೂ ಮಗು ಸುರಕ್ಷಿತ ಎಂಬ ನಂಬಿಕೆಯ ಮನೋಭಾವದಿಂದಲೇ ಇವರ ಬಳಿ ಬಂದು ಚಿಕಿತ್ಸೆ ಪಡೆಯುತ್ತಾರೆ.
ಖಾಸಗಿ ಆಸ್ಪತ್ರೆಗೆ ಪರೀಕ್ಷೆಗೆಂದು ಹೋಗುತ್ತಿದ್ದ ಹಲವಾರು ಗರ್ಭಿಣಿಯವರ ಡಾ.ಶಿಲ್ಪಶ್ರೀ ಅವರ ಕೈಗುಣದ ಬಗ್ಗೆ ಜನರಾಡುವ ಮಾತುಗಳನ್ನು ಕೇಳಿ ಸರ್ಕಾರಿ ಆಸ್ಪತ್ರೆಗೆ ಬಂದು ಅವರ ಬಳಿ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಅದೇನೋ ಗೊತ್ತಿಲ್ಲ, ಡಾ.ಶಿಲ್ಪಶ್ರೀ ಅವರ ಕೈಗುಣ, ಕಾಳಜಿಯುತ ಚಿಕಿತ್ಸೆಗೆ ತಾಲೂಕಿನ ಮಹಿಳೆಯರು ತುಂಬಾ ಖುಷಿಯಾಗಿದ್ದಾರೆ.
ಆಸ್ಪತ್ರೆಯಲ್ಲಿ ಹೆರಿಗೆ ಆದ ತಾಯಂದಿರಿಗೆ ಡಾ.ಶಿಲ್ಪಶ್ರೀ ಅವರು, ಮಗುವಿನ ಆರೈಕೆ ಅಂದರೆ ಜೋಪಾನವಾಗಿ ನೋಡಿಕೊಳ್ಳುವುದು, ಮಗುವನ್ನು ಯಾವ ರೀತಿ ಬೆಳೆಸಬೇಕು ಎನ್ನುವುದು ಸೇರಿದಂತೆ ಹಲವು ಮಾಹಿತಿ ನೀಡುತ್ತಾರೆ.
ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆಂದು ಬರುವವರು ಬಡ-ಮಧ್ಯಮ ವರ್ಗದವರೇ ಹೆಚ್ಚು.ಹಾಗಾಗಿ ಆಸ್ಪತ್ರೆಯ ವೈದ್ಯರಿಗಾಗಲಿ ಅಥವಾ ನರ್ಸ್ ಸೇರಿದಂತೆ ಸಿಬ್ಬಂದಿ ವರ್ಗದವರಿಗಾಗಲಿ ಒಂದೂ ಪೈಸೆಯೂ ಕೊಡದಂತೆ ತಾಕೀತು ಮಾಡಿದ್ದಾರೆ.
ನಮಗೆ ಸರ್ಕಾರಿ ಸಂಬಳ ಬರುತ್ತದೆ. ಬೇರೆ ಹಣದ ಅವಶ್ಯಕತೆಯಿಲ್ಲ.ಆಸ್ಪತ್ರೆಗೆ ಬರುವ ಸ್ತ್ರೀಯರು ಹಾಗೂ ತಾಯಂದಿರ ಆರೋಗ್ಯ ಚೆನ್ನಾಗಿದ್ದರೆ ಸಾಕು ಎಂಬ ಸೇವಾ ಮನೋಭಾವದ ಗುರಿ ಇಟ್ಟುಕೊಂಡು ಡಾ.ಶಿಲ್ಪಶ್ರೀ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಸಣ್ಣಪುಟ್ಟ ವ್ಯತ್ಯಾಸ,ಸಮಸ್ಯೆ ಇರೋದು ಸಹಜ.ಆದರೆ ಅದನ್ನೆಲ್ಲಾ ಸರಿಪಡಿಸಿಕೊಂಡು ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ಆಸ್ಪತ್ರೆ ವೈದ್ಯೆ ಡಾ.ಶಿಲ್ಪಶ್ರೀ ಅವರ ಬಳಿ ಮಹಿಳೆಯರು ಆರೋಗ್ಯ ತೋರಿಸಲು ದಿನನಿತ್ಯ ಸಾಲುಗಟ್ಟಿ ನಿಲ್ಲವುದು ವಾಸ್ತವ ಸಂಗತಿ.
ಡಾ.ಶಿಲ್ಪಶ್ರೀ ಅವರು ಉತ್ತಮ ವೈದ್ಯ ಸೇವೆ ಜೊತೆಗೆ ಉತ್ತಮ ಕ್ರೀಡಾಪಟು ಕೂಡ ಆಗಿದ್ದಾರೆ. ಪಾಂಡವಪುರದಲ್ಲಿ ನಡೆದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಪ್ರತಿವರ್ಷ ಪಾಲ್ಗೊಳ್ಳುವ ಇವರು, ವಿವಿಧ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಬಹುಮಾನ ಪಡೆದುಕೊಂಡಿದ್ದಾರೆ. ವೈದ್ಯರಾಗಿ ಕ್ರೀಡಾಪಟು ಆಗಿರೋದು ಬಲು ಅಪರೂಪ ಎನ್ನುವಂತಿದೆ ಡಾ.ಶಿಲ್ಪಶ್ರೀ ಅವರ ಕ್ರೀಡಾ ಕ್ಷೇತ್ರದ ಸಾಧನೆ.
ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಗಮಿಸುವ ಬಡ ಕುಟುಂಬ ವರ್ಗಕ್ಕೆ ಸರ್ಕಾರಿ ನಿಯಮದಂತೆ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಿ ಚಿಕಿತ್ಸೆ ನೀಡುತ್ತಿರುವುದು ಇವರ ಖ್ಯಾತಿಗೆ ಹೆಚ್ಚು ಸಹಕಾರಿಯಾಗಿದೆ.
ಡಾ.ಶಿಲ್ಪಶ್ರೀ ಎಂದರೆ ಗರ್ಭಿಣಿಯರು ಮತ್ತು ಮಹಿಳೆಯರ ಪಾಲಿಗೆ ಸಂಜೀವಿನಿಯಂತೆ ಎಂಬ ಮಾತು ಜನರ ಬಾಯಲ್ಲಿ ಕೇಳಿಬರುತ್ತಿರುವುದು ವಾಸ್ತವ ಸತ್ಯ.