ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಅವರ ವಿದೇಶಾಂಗ ಸಚಿವರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಭಾರೀ ಮಂಜಿನಿಂದ ಪರ್ವತ ಪ್ರದೇಶದಲ್ಲಿ ಪತನಗೊಂಡಿದ್ದು ರೈಸಿ ಮತ್ತು ವಿದೇಶಾಂಗ ಸಚಿವರು ನಿಧನರಾಗಿದ್ದಾರೆ ಎಂದು ಘೋಷಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಸುಮಾರು 12 ಗಂಟೆಗಳ ನಂತರ ಸೋಮವಾರ ಬೆಳಿಗ್ಗೆ ಹೆಲಿಕಾಪ್ಟರ್‌ನ ಅವಶೇಷಗಳು ಪತ್ತೆಯಾಗಿದೆ. ಆದರೆ ಯಾವುದೇ ವ್ಯಕ್ತಿ ಜೀವಂತವಾಗಿರುವ ಕುರುಹು ಸಿಕ್ಕಿಲ್ಲ, ವಿಮಾನ ಸಂಪೂರ್ಣವಾಗಿ ಅಗ್ನಿಗಾಹುತಿಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇರಾನ್‌ನ ವಾಯುವ್ಯದಲ್ಲಿರುವ ಅಜೆರ್‌ಬೈಜಾನ್‌ನ ಗಡಿಗೆ ಭೇಟಿ ನೀಡಿ ಹಿಂತಿರುಗುವಾಗ ಗಡಿಯಲ್ಲಿರುವ ಜೋಲ್ಫಾ ನಗರದ ಬಳಿ ಹೆಲಿಕಾಪ್ಟರ್ ಅಪಘಾತ ಸಂಭವಿಸಿದೆ. ಯುಎಸ್ ನಿರ್ಮಿತ ಬೆಲ್ 212 ಹೆಲಿಕಾಪ್ಟರ್‌ನಲ್ಲಿ ರೈಸಿ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ.
ಇರಾನ್ ಸೈನ್ಯದ ಮುಖ್ಯಸ್ಥರು ಸೈನ್ಯದ ಎಲ್ಲಾ ಸಂಪನ್ಮೂಲಗಳನ್ನು ಮತ್ತು ಗಾರ್ಡ್‌ಗಳನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿದ್ದರು. ಸ್ಥಳೀಯ ಮಾಧ್ಯಮಗಳ ಪ್ರಕಾರ, ಹೆಲಿಕಾಪ್ಟರ್‌ನಲ್ಲಿ ಒಂಬತ್ತು ಜನರು ಇದ್ದರು.
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ಇರಾನ್ ವಿದೇಶಾಂಗ ಸಚಿವ ಹೊಸೈನ್ ಅಮೀರ್ ಅಬ್ದುಲ್ಲಾಹಿಯಾನ್, ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದ ಗವರ್ನರ್ ಮಾಲೆಕ್ ರಹಮತಿ, ತಬ್ರಿಜ್‌ನ ಶುಕ್ರವಾರದ ಪ್ರಾರ್ಥನೆ ನಡೆಸುವ ಇಮಾಮ್ ಮೊಹಮ್ಮದ್ ಅಲಿ ಅಲಿಹಾಶೆಮ್, ಪೈಲಟ್, ಕಾಪಿಲಟ್, ಸಿಬ್ಬಂದಿ ಮುಖ್ಯಸ್ಥ, ಭದ್ರತಾ ಸಿಬ್ಬಂದಿ ಮತ್ತು ಇನ್ನೋರ್ವ ಅಂಗರಕ್ಷಕ ಹೆಲಿಕಾಪ್ಟರ್‌ನಲ್ಲಿ ಇದ್ದರು ಎಂದು ವರದಿಯಾಗಿದೆ.