ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಂತ ಕೃಷಿ ಕೂಲಿಕಾರರ ಸಂಘ ಪ್ರತಿಭಟನೆ ನಡೆಸಿತು.
ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿನ ಯಾವುದೇ ಬೇಡಿಕೆಗಳು ಇತ್ಯರ್ಥವಾಗಿಲ್ಲ. ಇದರ ಪರಿಣಾಮ ಜಿಲ್ಲೆಯ ಬಡವರ ಬದುಕು ಅಯೋಮಯವಾಗುತ್ತಿದೆ. ಉದ್ಯೋಗ ಖಾತರಿಯಲ್ಲಿ, ವಿದ್ಯುತ್ ಇಲಾಖೆಯಲ್ಲಿ, ಆಹಾರ ಇಲಾಖೆಯಲ್ಲಿ, ಬ್ಯಾಂಕ್‌ಗಳಲ್ಲಿ ಯಾವುದೇ ಬಡವರ ಕೆಲಸ ಬಗೆಹರಿಯುತ್ತಿಲ್ಲ. ಕಿರುಕುಳಗಳು ಹೆಚ್ಚುತ್ತಿದೆ ಎಂದು ಆರೋಪಿಸಿದರು.
ಸರ್ಕಾರ ಹೆಚ್ಚಿಸಿರುವ ವಿದ್ಯುತ್ ದರವನ್ನು ವಾಪಸ್ ಪಡೆಯಬೇಕು. ಭಾಗ್ಯ, ಕುವರ, ಸೌಭಾಗ್ಯ ದೀನ್‌ದಯಾಳ್ ಉಪಾಧ್ಯಾಯ, ಬೆಳಕು ಯೋಜನೆಯಲ್ಲಿ ಕಲ್ಪಿಸಿರುವ ಕುಟುಂಬಗಳಿಗೆ ವಿದ್ಯುತ್ ಸೌಲಭ್ಯ ಕಡಿತ ಮಾಡುತ್ತಿದ್ದು, ಯಾವುದೋ ಒಂದು ತಿಂಗಳಲ್ಲಿ 40 ಯೂನಿಟ್‌ಗಿಂತ ಹೆಚ್ಚಾದರೆ ಈ ಯೋಜನೆಯಿಂದ ಕೈಬಿಡುತ್ತಿರುವುದು ಅವೈಜ್ಞಾನಿಕವಾಗಿದೆ.
ವಿಪರೀತ ಗ್ಯಾಸ್ ಬೆಲೆ ಹೆಚ್ಚಳದಿಂದ ಬಡವರು ಹೈರಾಣರಾಗಿದ್ದಾರೆ. ಬೆಳಕಿಗಾಗಿ ತಲಾ ಮೂರು ಲೀಟರ್ ಸೀಮಎಣ್ಣೆ ವಿತರಿಸಬೇಕು. ಆರೇಳು ತಿಂಗಳಿಂದ ಸ್ಥಗಿತಗೊಂಡಿರುವ ಹೊಸ ರೇಷನ್ ಕಾರ್ಡ್ ವಿತರಿಸಬೇಕು ಮತ್ತು ತಿದ್ದುಪಡಿಗೆ ಅವಕಾಶ ಕಲ್ಪಿಸಬೇಕು ಎಂದರು.
ಉದ್ಯೋಗ ಖಾತರಿಯಡಿ ಆನ್‌ಲೈನ್ ಜಾರಿ, 10 ರೂ. ಸಲಕರಣೆ ಕಡಿತ ಜಾರಿ ಮಾಡಿದ್ದು, ಕೂಲಿಕಾರರು ಈ ಕಾಯ್ದೆಯಿಂದ ದೂರವಾಗುತ್ತಿದ್ದಾರೆ. ಈ ನೀತಿಗಳನ್ನು ಕೈಬಿಡಬೇಕು.
ಬೆಲೆ ಹೆಚ್ಚಳ ಸರ್ಕಾರ ನಿಯಂತ್ರಿಸಬೇಕು. ಕೃಷಿಕೂಲಿಕಾರರು ಉಪಕಸುಬು ಕೈಗೊಂಡು ಆರ್ಥಿಕ ಸ್ವಾವಲಂಬನೆಗೊಳ್ಳಲು ಬ್ಯಾಂಕುಗಳಿಂದ ಕುಟುಂಬಕ್ಕೆ ಒಂದು ಲಕ್ಷ ಸಾಲ ನೀಡಬೇಕು,
ಮೇಲ್ಕಂಡ ಬೇಡಿಕೆಗಳನ್ನು ಒಂದು ವಾರದೊಳಗೆ ಇತ್ಯರ್ಥ ಪಡಿಸಿ ಜಿಲ್ಲೆಯ ಕೃಷಿಕೂಲಿಕಾರರು ಮತ್ತೆ ಬಡ ರೈತರನ್ನು ಉಳಿಸುವಂತೆ ಆಗ್ರಹಿಸಿದರು.
ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಪುಟ್ಟಮಾಧು, ಪ್ರಧಾನ ಕಾರ್ಯದರ್ಶಿ ಹನುಮೇಶ್, ಸಹ ಕಾರ್ಯದರ್ಶಿ ಹನಮೇಗೌಡ, ಸಿಐಟಿಯು ಕಾರ್ಯದರ್ಶಿ ಸಿ. ಕುಮಾರಿ, ಉಪಾಧ್ಯಕ್ಷ ಸುರೇಂದ್ರ, ಶುಭಾವತಿ ,ಅನಿತಾ, ಮಂಚೇಗೌಡ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿದ್ದರು.