ಗ್ರಾಮೀಣ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದರ ಜೊತೆಗೆ, ಹಳ್ಳಿಗಳಲ್ಲಿ ವಿದ್ಯುತ್ ಸಮಸ್ಯೆ ಇರುವುದರಿಂದ ಓದಿಗೆ ಅನುಕೂಲವಾಗುವಂತೆ ಸೋಲರ್ ದೀಪ ನೀಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಡಾ. ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ದಡದಪುರ ಶಿವಣ್ಣ ಒತ್ತಾಯಿಸಿದರು.
ಮಳವಳ್ಳಿ ಪಟ್ಟಣದ ಕುಮಾರ ಸಮುದಾಯ ಭವನದಲ್ಲಿ ಡಾ. ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿ ಅವರು ಮಾತನಾಡಿದರು.
ರಾಮಮನೋಹರ್ ಲೋಹಿಯಾ ವಿಚಾರ ವೇದಿಕೆ ವತಿಯಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಆರೋಗ್ಯ ಕಿಟ್, ಲ್ಯಾಪ್‌ಟಾಪ್ ಸೇರಿದಂತೆ ಹಲವಾರು ಕೊಡುಗೆಗಳನ್ನು ನೀಡಲಾಗಿದೆ. ಆದರೆ ಸರ್ಕಾರ ಎಲ್ಲಾ ವಿದ್ಯಾರ್ಥಿಗಳಿಗೆ ಬಸ್‌ಪಾಸ್ ಮತ್ತು ಆರೋಗ್ಯ ಕಿಟ್ ನೀಡುವುದರ ಬಗ್ಗೆ ಚಿಂತನೆ ನಡೆಸಬೇಕೆಂದು ಸಲಹೆ ನೀಡಿದರು.
ಗ್ರಾಮೀಣ ಪ್ರದೇಶದ ಹಿಂದುಳಿದ, ದೀನ-ದಲಿತ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮಳವಳ್ಳಿಯಲ್ಲಿ ಉತ್ತಮವಾದ ಶಾಲೆ, ಕಾಲೇಜು ಕಟ್ಟಲು ಚಿಂತನೆ ನಡೆಸಲಾಗಿದ್ದು,ಉಚಿತವಾಗಿ ಶಿಕ್ಷಣ ನೀಡುವ ಉದ್ದೇಶವನ್ನು ಹೊಂದಲಾಗಿದೆ ಎಂದರು.
ಅಪಶಕುನ ಎಂಬ ನೆಪದಲ್ಲಿ ಹಲವು ಮಂದಿಯನ್ನು ನಿಂದಿಸುವುದನ್ನು ನಿಲ್ಲಿಸಬೇಕು.ನಾವೆಲ್ಲರೂ ಮನುಷ್ಯರು ಎನ್ನುವುದನ್ನು ಮೊದಲು ಅರಿಯಬೇಕು, ಮೌಢ್ಯವನ್ನು ಬಿಟ್ಟು ವೈಜ್ಞಾನಿಕ ಚಿಂತನೆಗಳನ್ನು ಅಳವಡಿಸಬೇಕೆಂದು ಸಲಹೆ ನೀಡಿದರು.
ಸಂವಿಧಾನ ಶಿಲ್ಪಿ ಡಾ, ಬಿ.ಆರ್.ಅಂಬೇಡ್ಕರ್, ರಾಷ್ಟ್ರಕವಿ ಕುವೆಂಪು, ರಾಮಮನೋಹರ್ ಲೋಹಿಯಾ ವಿಚಾರಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಓದಿನ ಕಡೆಗೆ ಗಮನ ಕೊಟ್ಟು, ಶಾಲೆ, ಗ್ರಾಮ ಹಾಗೂ ಪೋಷಕರಿಗೆ ಹೆಸರು ಬರುವಂತೆ ವಿದ್ಯಾರ್ಥಿಗಳು ಸಾಧನೆ ಮಾಡಬೇಕೆಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಸಾಧನೆ ಮಾಡಬೇಕಾದರೆ ಶಿಕ್ಷಕರ ಜೊತೆ ಪೋಷಕರು ಕೈ ಜೋಡಿಸಬೇಕು.
ರಾಮಮನೋಹರ ಲೋಹಿಯಾ ವೇದಿಕೆ ವತಿಯಿಂದ 180 ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಿರುವುದು ಶ್ಲಾಘನೀಯ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದರಿಂದ ಮಕ್ಕಳ ಸಾಧನೆಗೆ ಸ್ಪೂರ್ತಿದಾಯಕವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಕುರುಬರ ಸಂಘದ ಜಿಲ್ಲಾ ಉಪಾಧ್ಯಕ್ಷ ಪುಟ್ಟಬಸವಯ್ಯ, ಸಮಾಜ ಸೇವಕ ತಳಗವಾದಿ ಪ್ರಕಾಶ್, ನಿವೃತ್ತ ಪ್ರಾಂಶುಪಾಲ ಪುಟ್ಟಸ್ವಾಮಿಗೌಡ, ಅಕ್ಷರ ದಾಸೋಹ ನಿರ್ದೇಶಕ ಜಯಪ್ರಕಾಶ್, ಉಪನ್ಯಾಸಕ ನಟರಾಜು, ಉಪನ್ಯಾಸಕಿ ಪವಿತ್ರ, ಮುಖ್ಯ ಶಿಕ್ಷಕ ಕಾಳರಾಜೇಗೌಡ, ಯೋಗೇಶ್, ಬಾಬು, ಶಿವರಾಜ್ ಸೇರಿದಂತೆ ಇತರರಿದ್ದರು.