ಮಂಡ್ಯ ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಘೋಷಿಸಲು ಜಿಲ್ಲಾಡಳಿತಕ್ಕೆ ಸಾರ್ವಜನಿಕರ ಸಹಕಾರ ಅತ್ಯವಶ್ಯಕ ಎಂದು ಉಪವಿಭಾಗಾಧಿಕಾರಿ ಆರ್. ಐಶ್ವರ್ಯ ಮನವಿ ಮಾಡಿದರು.
ಮಂಡ್ಯ ನಗರದ ಕರ್ನಾಟಕ ಸಂಘದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಕಾರ್ಯಕ್ರಮವನ್ನು ಈ ವರ್ಷದ ಬಾಲ ಕಾರ್ಮಿಕ ಪದ್ಧತಿಯನ್ನು ಕೊನೆಗೊಳಿಸಲು ಸಾರ್ವತ್ರಿಕ ಸಾಮಾಜಿಕ ರಕ್ಷಣೆ ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲಾಯಿತು.
ಜಿಲ್ಲೆಯಲ್ಲಿ ಸ್ವಯಂ ಸೇವಾ ಸಂಘಗಳ ಸಹಾಯದೊಂದಿಗೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನೆರವಿನಿಂದ ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯಲ್ಲಿ
ಬಾಲಕಾರ್ಮಿಕ ಕಾಯ್ದೆಗೆ ಸಂಬಂಧಿಸಿದ ದೂರುಗಳನ್ನು ನೀಡಲು 1098 ಸಹಾಯವಾಣಿಗೆ ಕರೆ ಮಾಡಬೇಕು.
ಬಾಲ ಕಾರ್ಮಿಕ ಪದ್ದತಿ ನಿರ್ಮೂಲನ ಮಾಡಲು ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಮತ್ತು ಸಂಘ ಸಂಸ್ಥೆಗಳ ಪಾತ್ರವು ಸಹ ಮಹತ್ವ ಪೂರ್ಣವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ನಿರ್ಮೂಲನೆಗೆ ಶ್ರಮಿಸುವುದು ಅತ್ಯವಶ್ಯಕ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಂ ನಳಿನಿಕುಮಾರಿರವರು ಮಾತನಾಡಿ, ಅಂತರಾಷ್ಟ್ರೀಯ ಸಮುದಾಯಗಳ ಪಾಲ್ಗೊಳ್ಳುವಿಕೆಯಿಂದ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರ ನಿರ್ಮೂಲನೆಗಾಗಿ ಉತ್ತಮ ಪ್ರಯತ್ನಗಳು ನಡೆಯುತ್ತಿದ್ದು, ಕರ್ನಾಟಕ ರಾಜ್ಯವು ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮುಕ್ತ ಹಾಗೂ ಮಕ್ಕಳ ಸ್ನೇಹಿ ರಾಜ್ಯವಾಗುತ್ತಾ ದಾಪುಗಾಲು ಇಡುತ್ತಿದೆ ಎಂದರು.
ಉಪವಿಭಾಗ ಕಾರ್ಮಿಕ ಅಧಿಕಾರಿಯಾದ ಎಸ್ ಎಂ ಮಂಜುಳಾದೇವಿ ರವರು ಮಾತನಾಡಿ, ಬಾಲ ಕಾರ್ಮಿಕ ಪದ್ಧತಿ ಒಂದು ಸಾಮಾಜಿಕ ಸಮಸ್ಯೆಯಾಗಿದ್ದು, ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಪ್ರಮುಖ ಅಡ್ಡಿಯಾಗಿದೆ ಎಂದರೆ ತಪ್ಪಾಗಲಾರದು ಎಂದರು.
ಬಾಲಕಾರ್ಮಿಕ ಪದ್ಧತಿ ಒಂದು ಜಾಗತಿಕ ಸಮಸ್ಯೆ ಆಗಿರುವುದರಿಂದ ಬಾಲ ವ್ಯವಸ್ಥೆ ಹಾಗೂ ಕಿಶೋರ ವ್ಯವಸ್ಥೆ ಕಾರ್ಮಿಕ ಕಾಯ್ದೆ 1986 ರ ಅನ್ವಯ ಎಲ್ಲಾ ಉದ್ಯೋಗ ಮತ್ತು ಪ್ರಕ್ರಿಯೆಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿ ಕೊಳ್ಳಲು ಹಾಗೂ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂದರು.
2021 -22 ನೇ ಸಾಲಿನಲ್ಲಿ ಜಿಲ್ಲಾದ್ಯಂತ ಬಾಲ ಮತ್ತು ಕಿಶೋರ ಕಾರ್ಮಿಕ ಸಮೀಕ್ಷೆಯನ್ನು ನಡೆಸಲಾಗಿತ್ತು ಸಮೀಕ್ಷೆಯಲ್ಲಿ 09 ಬಾಲ ಕಾರ್ಮಿಕರು ಹಾಗೂ 28 ಕಿಶೋರ ಕಾರ್ಮಿಕರನ್ನು ಪತ್ತೆಹಚ್ಚಲಾಗಿದ್ದು, ಸಂಬಂಧಪಟ್ಟ ಸಕ್ಷಮ ನ್ಯಾಯಾಲಯಗಳಲ್ಲಿ ಕಾನೂನು ಉಲ್ಲಂಘಿಸಿದ ಉದ್ಯೋಗದಾತರರ ವಿರುದ್ಧ ಒಟ್ಟು 34 ಪ್ರಕರಣಗಳನ್ನು ದಾಖಲಿಸಲಾಗಿದೆ. ಜಿಲ್ಲೆಯಲ್ಲಿ 631 ಸಂಸ್ಥೆಗಳನ್ನು ತಪಾಸಣೆಗಳನ್ನು ನಡೆಸಲಾಗಿರುತ್ತದೆ ಎಂದರು.
ಎಸ್.ಸಿ.ಪಿ ಮತ್ತು ಟಿ.ಎಸ್ .ಪಿ ಯೋಜನೆಯಡಿ ಬಾಲಕಾರ್ಮಿಕ ಪದ್ಧತಿ ವಿರುದ್ಧ ಅರಿವು ಮೂಡಿಸಲು ಜಿಲ್ಲಾದ್ಯಂತ 15 ಬೀದಿನಾಟಕಗಳು, ಪಂಚಾಯಿತಿ ಮಟ್ಟದಲ್ಲಿ ಏಳು ದಿನ ಜಾಗೃತಿ ವಾಹನ ಪ್ರಚಾರಗಳು ಹಾಗೂ ಕರಪತ್ರ ವಿತರಣೆ ಕಾರ್ಯಕ್ರಮ ನಡೆಸಲಾಗಿರುತ್ತದೆ ಎಂದರು.
ಸಮೀಕ್ಷೆ ಸಮಯದಲ್ಲಿ ಕಂಡುಬಂದಂತಹ ಪರಿಶಿಷ್ಟ ಜಾತಿ ಜನಾಂಗದ 4 ಬಾಲ್ಯ ಮತ್ತು ಕಿಶೋರ ಕಾರ್ಮಿಕರಿಗೆ ಎಸ್ ಸಿ ಪಿ ಯೋಜನೆಯಡಿ ಆಹಾರ, ಶಿಕ್ಷಣ,ಉಡುಪು ಮತ್ತು ಅಗತ್ಯ ಸಾಮಗ್ರಿಗಳನ್ನು ವಿತರಣೆ ಮಾಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ನಿರ್ಮೂಲನೆಗೆ ಸಂಬಂಧಿಸಿದಂತೆ ಪ್ರಬಂಧಗಳು ಹಾಗೂ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಕೃಷ್ಣಪ್ರಸಾದ್ ರಾವ್,
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರು ಧನರಾಜ್, ಪೊಲೀಸ್ ಅಧಿಕಾರಿಗಳಾದ ದೇವರಾಜ್ , ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಘಟಕದ ಅಧಿಕಾರಿ ಪಿ ಅನ್ನದಾನಿ, ಬರ್ಡ್ಸ್ ಸಂಸ್ಥೆಯ ನಿರ್ದೇಶಕ ವೆಂಕಟೇಶ್ , ಡಾನ್ ಬಾಸ್ಕೋ ನಿರ್ದೇಶಕ ಫಾದರ್ ಸಜೀಜಾರ್ಜ್, ಪ್ರಭಾಕರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.