Friday, April 19, 2024

ಪ್ರಾಯೋಗಿಕ ಆವೃತ್ತಿ

ರೋಹಿತ್ ಚಕ್ರತೀರ್ಥ ಹಾಗೂ ಲಕ್ಷ್ಮಣ ಕಾರ್ಕಳ ಬಂಧನಕ್ಕೆ ಒತ್ತಾಯ

ಮಹಾಕವಿ ಕುವೆಂಪು ಅವರ ಬಗ್ಗೆ ಅವಹೇಳನ ಮಾಡಿರುವ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ರೋಹಿತ್ ಚಕ್ರತೀರ್ಥ ವಿರುದ್ಧ ರಾಜ್ಯಾದ್ಯಂತ ಖಂಡನೆ , ಪ್ರತಿಭಟನೆ ದಿನೇ ದಿನೇ ಹೆಚ್ಚಾಗುತ್ತಿದೆ.

ಕೆ.ಆರ್‌. ಪೇಟೆ ಪಟ್ಟಣದ ರಾಮದಾಸ್ ಹೋಟೆಲ್ ನ ಸುಲೋಚನಾ ಸಭಾಂಗಣದಲ್ಲಿ ಪ್ರಗತಿಪರ ಚಿಂತಕರು, ರೈತ ಸಂಘಟನೆಯ ಪ್ರಮುಖರು ಹಾಗೂ ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಸೇರಿ ಕುವೆಂಪು ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ರೋಹಿತ್ ಚಕ್ರತೀರ್ಥ ಮತ್ತು ಲಕ್ಷ್ಮಣ ಕಾರ್ಕಳ ಅವರನ್ನು ಸರ್ಕಾರ ಬಂಧಿಸಿ ತನಿಖೆಗೆ ಒಳಪಡಿಸಬೇಕು ಎಂದು ಸಭೆ ಒಕ್ಕೊರಲಿನಿಂದ ಆಗ್ರಹಿಸಿದೆ.

ವಿಶ್ವಕ್ಕೆ ಮಾನವ ಸಂದೇಶ ಸಾರಿದ,ಯುಗದ ಕವಿ,ಜಗದ ಕವಿ ಕುವೆಂಪು ಅವರ ಬಗ್ಗೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಲಕ್ಷ್ಮಣ ಕಾರ್ಕಳ ಎಂಬುವವರು ಅವಹೇಳನ ಮಾಡಿದ್ದು ಸರ್ಕಾರ ತಕ್ಷಣ ಇಬ್ಬರನ್ನೂ ಬಂಧಿಸಬೇಕೆಂದು ರೈತ ನಾಯಕ ಮುದುಗೆರೆ ರಾಜೇಗೌಡ ಒತ್ತಾಯಿಸಿದರು.

ಕುವೆಂಪು ಅವರು ಬರೆದ ಭಾರತ ಜನನಿಯ ತನುಜಾತೆ ಎಂತಹ ಮಹಾ ಕವನ ಎಂಬುದು ಗೊತ್ತಿದೆ.ನಾಡಗೀತೆಯನ್ನು ಅವಹೇಳನ ಮಾಡಿರುವ ರೋಹಿತ್ ಚಕ್ರತೀರ್ಥ ಎಂತಹ ಕೀಳು ಅಭಿರುಚಿಯವನು ಎಂಬುದು ಅವನ ಫೇಸ್ಬುಕ್ ನೋಡಿದರೆ ಗೊತ್ತಾಗುತ್ತದೆ. ನಾಡಗೀತೆ ಮತ್ತು ರೈತ ಗೀತೆ ಎರಡೂ ನಮ್ಮ ಕರ್ನಾಟಕದ ಅಸ್ಮಿತೆ ಯಾಗಿದೆ.ನಾಡಗೀತೆ ಮತ್ತು ನಾಡ ಧ್ವಜಕ್ಕೆ ಅವಹೇಳನ ಮಾಡಿದರೂ ಸರ್ಕಾರ ಇನ್ನು ಏಕೆ ಇವನನ್ನು ಬಂಧಿಸದೆ ಮೀನಾಮೇಷ ಎಣಿಸುತ್ತಿದೆ ಎಂದು ಕಿಡಿಕಾರಿದರು.

ಈಗಾಗಲೇ ಹಲವಾರು ಸಾಹಿತಿಗಳು ಪಠ್ಯಪುಸ್ತಕ ಪರಿಷ್ಕರಣೆಯನ್ನು ವಿರೋಧಿಸಿ ಹಲವು ಸಮಿತಿಗಳಿಗೆ ರಾಜೀನಾಮೆ ನೀಡಿದ್ದಾರೆ. ಹಲವರು ತೀವ್ರ ವಿರೋಧ ವ್ಯಕ್ತಪಡಿಸಿ ಸರ್ಕಾರದ ನಿಲುವನ್ನು ಖಂಡಿಸಿದರೂ ಸರ್ಕಾರ ಸುಮ್ಮನೆ ಸಹಿಸಿಕೊಂಡು ಕುಳಿತಿದೆ. ಹಲವಾರು ಸಾಹಿತಿಗಳು ಪಠ್ಯಪುಸ್ತಕದಲ್ಲಿ ನಮ್ಮ ಪಠ್ಯವನ್ನು ಕೈಬಿಡಿ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರೂ ಸರ್ಕಾರ ಒಬ್ಬ ಅಯೋಗ್ಯನನ್ನು ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡು ಎಂದು ಪ್ರಗತಿಪರ ಸಂಘಟನೆಯ ನಾಯಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಕೂಡಲೇ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯಿಂದ ದ್ರೋಹಿ ರೋಹಿತ್ ಚಕ್ರತೀರ್ಥನನ್ನು ಕಿತ್ತುಹಾಕಿ ಹಿಂದೆ ಇದ್ದ ಪಠ್ಯಗಳನ್ನು ಮುಂದುವರಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ರೂಪಿಸಲು ಸಂಘಟನೆಗಳ ನಾಯಕರು ತೀರ್ಮಾನ ತೆಗೆದುಕೊಂಡರು.

ಇದೇ ಸಂದರ್ಭದಲ್ಲಿ ಕೆ.ಆರ್.ಪೇಟೆಯ ಉಪನ್ಯಾಸಕರಾದ ಕೆ.ಎಂ.ವಾಸು ಅವರು ಮಾತನಾಡಿ, ನಮ್ಮ ಕನ್ನಡ ನಾಡಿಗೆ ಒಂದು ಹೊಸ ಅಲೋಚನೆಯನ್ನೆ ಕೊಟ್ಟಂತಹ ಬಹುದೊಡ್ಡ ಕವಿ ಚಿಂತಕರು ಆಗಿರುವಂತಹ ಮಹಾಕವಿ ಕುವೆಂಪುರವರ ಬಗೆಗೆ ಅವಹೇಳನೆ ಇತ್ತೀಚೆಗೆ ನಡೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಇಂತಹ ಸಂದರ್ಭದಲ್ಲಿ, ಕುವೆಂಪುರವರ ಪ್ರಭಾವದಲ್ಲಿ, ಸೂರ್ತಿಯಲ್ಲಿ  ಬೆಳೆದಂತಹ ನಾವು ಕುವೆಂಪುರವನ್ನು ನಾವು ಹೇಗೆ ಉಳಿಸಿಕೊಳ್ಳಬೇಕು, ಅವರಿಲ್ಲದಿದ್ದರೆ ಈ ಸಮಾಜವು ಹೇಗಿರುತ್ತೆ, ಕುವೆಂಪುರವರ ಪ್ರತಿಪಾದನೆ ಹೇಗಿತ್ತು, ಕುವೆಂಪುರವರು ಯಾವುದನ್ನು ತಿರಸ್ಕರಿಸಿದ್ದರು, ಪುರಸ್ಕರಿಸಿದ್ದರು ಅವರ ಕಟ್ಟಿದ ಹೊಸ ಕನ್ನಡ ನಾಡು ಹೇಗಿತ್ತು ಎಲ್ಲಾ ಪರಿಕಲ್ಪನೆಯೊಂದಿಗೆ ನಾವು ಇವತ್ತು ಚರ್ಚೆ ಮಾಡುತ್ತಿದ್ದೇವೆ. ಕುವೆಂಪು ಅವರನ್ನು ಅವಹೇಳನಾ ಮಾಡಿರುವಂತಹ ಪಠ್ಯ ಪರಿಷ್ಕರಣೆಯ ಅಧ್ಯಕ್ಷರಾಗಿರತಕ್ಕಂತಹ ರೋಹಿತ್ ಚಕ್ರತೀರ್ಥ  2017 ರಲ್ಲಿ ಕುವೆಂಪು ರವರು ರಚಿಸಿರುವ ನಾಡಗೀತೆಯನ್ನು ಅತ್ಯಂತ ಅವಹೇಳನಾಕಾರಿಯಾಗಿ ತಮ್ಮ ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದರು ಮತ್ತು ಲಕ್ಷಣ ಕಾರ್ಕಳ  ಎಂಬುವವ ವಾಟ್ಸ್ ಅಪ್ ನಲ್ಲಿ ಅತ್ಯಂತ ನೀಚ ಪೋಸ್ಟ್ ನ್ನು ಕುವೆಂಪುರವರ ಬಗೆಗೆ ಅವಹೇಳನಾ ಕಾರಿಯಾಗಿ ಬರೆದಿದ್ದಾನೆ ಎಂದು ಕಿಡಿಕಾರಿದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ,ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಸೋಮಶೇಖರ್, ಕೆ. ಆರ್. ಜಯರಾಂ, ಚಾಶಿ ಜಯಕುಮಾರ್,ಬಡ್ತಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಿ.ಆರ್. ರಮೇಶ್, ಕಟ್ಟೆ ಮಹೇಶ್,ಶೀಳನೆರೆ ಸಿದ್ದೇಶ್,ಹೊಸಹೊಳಲು ವಿಶ್ವನಾಥ್,ಮಂಜೇಗೌಡ ಪದ್ಮನಾಭ,ಜಯಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಹೊನ್ನೇನಹಳ್ಳಿ ಸೋಮಶೇಖರ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!