ಜೂ.13ರಂದು ನಡೆಯಲಿರುವ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ರೈತಸಂಘದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಪ್ರಸನ್ನ ಎನ್ ಗೌಡರನ್ನು ಭಾರತ ಕಮ್ಯುನಿಸ್ಟ್ ಪಕ್ಷ ಬೆಂಬಲಿಸುತ್ತಿದ್ದು, ಜನ ಚಳುವಳಿಗಳ ಧ್ವನಿಗಾಗಿ ಅವರನ್ನು ಪದವೀಧರ ಮತದಾರರು ಬೆಂಬಲಿಸಬೇಕೆಂದು ಸಿಪಿಐ(ಎಂ) ಪಕ್ಷದ ಕಾರ್ಯದರ್ಶಿ ಕೃಷ್ಣೇಗೌಡ ಮನವಿ ಮಾಡಿದರು.
ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪ್ರಸನ್ನ ಎನ್.ಗೌಡರ ಗೆಲುವಿಗಾಗಿ ಸಿಪಿಐ(ಎಂ) ಪ್ರಯತ್ನಿಸುತ್ತದೆ ಮತ್ತು ಎಲ್ಲಾ ಪದವೀಧರ ಮತದಾರರು ಪ್ರಸನ್ನ ಎನ್. ಗೌಡರಿಗೆ ಪ್ರಥಮ ಪ್ರಾಶಸ್ತ್ಯ ದ ಮತ ನೀಡಬೇಕು ಮತ್ತು ಸೌಹಾರ್ದ ಕರ್ನಾಟಕವನ್ನು ಕೋಮುವಾದದ ಪ್ರಯೋಗಶಾಲೆ ಮಾಡಲು ಹೊರಟಿರುವ ಸಂವಿಧಾನದ ಮೌಲ್ಯಗಳನ್ನು ಬುಡಮೇಲು ಮಾಡುತ್ತಿರುವ ಬಿಜೆಪಿಯ ಸೋಲನ್ನು ಖಾತ್ರಿಪಡಿಸಬೇಕೆಂದು ಮನವಿ ಮಾಡಿದರು.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ನಂತರ ರಾಜ್ಯ ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಬ್ರಹ್ಮಾಂಡ ಭ್ರಷ್ಟಾಚಾರ, ಅದಕ್ಷತೆ ಈ ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ, ನಿರುದ್ಯೋಗ ಮತ್ತು ಬೆಲೆ ಏರಿಕೆಗೆ ಯಾವುದೇ ಪರಿಹಾರಗಳನ್ನು ರೂಪಿಸದ ಬಿಜೆಪಿ ಸರ್ಕಾರ ಪದವೀಧರರನ್ನು ನಿರ್ಲಕ್ಷಿಸಿ ಬೀದಿ ಪಾಲು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿಕ್ಷಕರ ಹುದ್ದೆಗಳೂ ಸೇರಿದಂತೆ ಎಲ್ಲಾ ಹುದ್ದೆಗಳನ್ನು ಅತಿಥಿ, ಗುತ್ತಿಗೆ ಎಂಬ ಹೆಸರಿನಲ್ಲಿ ನೇಮಕ ಮಾಡಿಕೊಂಡು ಮೂರು ಕಾಸಿನ ಅನಿಶ್ಚಿತ ವೇತನಕ್ಕೆ ದುಡಿಸಿಕೊಳ್ಳಲಾಗುತ್ತಿದೆ. ಇವುಗಳ ಬಗ್ಗೆ ಮಾತನಾಡದಂತೆ ಯುವ ಜನರಿಗೆ ಕೋಮುವಾದದ ಅಮಲು ಭರಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಕಿಡಿ ಕಾರಿದರು.
ಪಿಎಸ್‌ಐ ಸೇರಿದಂತೆ ಎಲ್ಲಾ ನೇಮಕಾತಿಗಳಲ್ಲಿ ಭ್ರಷ್ಟಾಚಾರ, ಶೇಕಡಾ 40 ಗುತ್ತಿಗೆ ಕಮಿಷನ್ ಮುಂತಾದ ಎಲ್ಲಾ ಅನೈತಿಕ ಹಾಗೂ ಅವ್ಯವಹಾರಗಳಿಗೆ ರಾಜ್ಯ ಸರ್ಕಾರದ ಮೇಲೆ ಸಂವಿಧಾನೇತರ ಶಕ್ತಿಗಳು ಸವಾರಿ ಮಾಡುತ್ತಿರುವುದು ಕಾರಣವಾಗಿದೆ ಎಂದು ಆರೋಪ ಮಾಡಿದರು.
ರಾಜ್ಯದ ಪ್ರಮುಖ ಜಾತ್ಯಾತೀತ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಕೋಮುವಾದಿ ಶಕ್ತಿಗಳ, ಆಟಾಟೋಪ ನಿಯಂತ್ರಿಸಲು ಯಾವುದೇ ರಾಜಕೀಯ ಕ್ರಮಗಳನ್ನು ವಹಿಸುತ್ತಿಲ್ಲ. ತಮ್ಮ ಹೊಣೆಗಾರಿಕೆ ಮರೆತು ಪರಸ್ಪರ ಕಚ್ಚಾಟದಲ್ಲಿ ತೊಡಗಿವೆ. ಸದನದಲ್ಲಾಗಲಿ ಹಾಗೂ ಸದನದ ಹೊರಗಡೆಯಲ್ಲಾಗಲಿ ಕೋಮುವಾದಿ ಶಕ್ತಿಗಳನ್ನು ದೃಢವಾಗಿ ಎದುರಿಸುವ ಯಾವುದೇ ಜವಾಬ್ದಾರಿಯನ್ನು ತೋರಿಸುತ್ತಿಲ್ಲ. ಜನ ಚಳವಳಿಗಳು ತಳಮಟ್ಟದಲ್ಲಿ ಕೋಮುವಾದದ ವಿರುದ್ಧ ಪ್ರತಿರೋಧ ರೂಪಿಸಲು ಸಿಪಿಐ(ಎಂ) ಯೋಜಿಸುತ್ತಿದೆ. ಅದಕ್ಕೆ ಪೂರಕವಾಗಿ ಪ್ರಸನ್ನ ಗೌಡರನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಕಾರ್ಯಕಾರಿ ಮಂಡಳಿ ಸದಸ್ಯರಾದ ಪುಟ್ಟಮಾದು, ಟಿ.ಯಶವಂತ್, ಸಿ.ಕುಮಾರಿ ಉಪಸ್ಥಿತರಿದ್ದರು