ಗಾಝಾದ ಮೇಲೆ ಮಿಲಿಟರಿ ಆಕ್ರಮಣದ ಮೂಲಕ ಇಸ್ರೇಲ್ ನರಮೇಧ ನಡೆಸುತ್ತಿದೆ ಎಂದು ದಕ್ಷಿಣ ಆಫ್ರಿಕಾ ಯುಎನ್ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಇಸ್ರೇಲ್ ವಿರುದ್ಧ ಮೊಕದ್ದಮೆಯನ್ನು ಹೂಡಿದೆ ಮತ್ತು ಅರ್ಜಿಯ ತ್ವರಿತ ವಿಲೇವಾರಿಗೆ ಆಗ್ರಹಿಸಿದೆ.
ಇಸ್ರೇಲ್ ದಕ್ಷಿಣ ಆಫ್ರಿಕಾದ ಆರೋಪಗಳನ್ನು ತಿರಸ್ಕರಿಸಿ ಸುಳ್ಳು ಆರೋಪ ಎಂದು ಕರೆದಿದ್ದು ಮೊಕದ್ದಮೆಯನ್ನು ತಿರಸ್ಕರಿಸಲು ಯುಎನ್ ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ (ICJ) ಒತ್ತಾಯಿಸಿದೆ. ಐಸಿಜೆಯಲ್ಲಿ ಯಾವುದೇ ಪ್ರಕರಣವು ಪರಿಹರಿಸಲು ವರ್ಷಗಟ್ಟಲೆ ತೆಗೆದುಕೊಳ್ಳುವ ಸಾಧ್ಯತೆಯಿದೆ. ಆದರೆ ಕದನ ವಿರಾಮಕ್ಕೆ ಕರೆ ನೀಡುವ ಮಧ್ಯಂತರ ಆದೇಶಗಳನ್ನು ಹೊರಡಿಸಲು ಶೀಘ್ರ ವಿಚಾರಣೆಗೆ ನ್ಯಾಯಾಲಯಕ್ಕೆ ದಕ್ಷಿಣ ಆಫ್ರಿಕಾ ಆಗ್ರಹಿಸಿದೆ. ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ದಕ್ಷಿಣ ಆಫ್ರಿಕಾವು ಇಸ್ರೇಲ್‌ನ ಕೃತ್ಯಗಳನ್ನು ನರಮೇಧ ಎಂದು ಹೇಳಿದ್ದು, ಗಾಝಾದಲ್ಲಿ ಪ್ಯಾಲೆಸ್ತೀನ್ ನಾಗರಿಕರನ್ನು ಇಸ್ರೇಲ್ ನಾಶಮಾಡುವ ಉದ್ದೇಶ ಹೊಂದಿದೆ ಎಂದು ಹೇಳಿದೆ.
ಮುಂದಿನ ದಿನಗಳಲ್ಲಿ ಅಥವಾ ವಾರಗಳಲ್ಲಿ ಆ ಅರ್ಜಿಯ ವಿಚಾರಣೆಯ ಸಾಧ್ಯತೆಯಿದೆ. ಪ್ರಕರಣವು ಮುಂದುವರಿದರೆ ವರ್ಷಗಳು ಬೇಕಾಗುತ್ತದೆ, ಆದರೆ ವಾರಗಳಲ್ಲಿ ಮಧ್ಯಂತರ ಆದೇಶವನ್ನು ನೀಡಬಹುದು. ಮಾ.2022ರಲ್ಲಿ ‘ಐಸಿಜೆ’ ಯುಕ್ರೇನ್ ಮೇಲಿನ ತನ್ನ ಆಕ್ರಮಣವನ್ನು ನಿಲ್ಲಿಸಲು ರಷ್ಯಾಕ್ಕೆ ಆದೇಶ ನೀಡಿತ್ತು. ಆದರೆ ರಷ್ಯಾ ಆದೇಶವನ್ನು ಕಡೆಗಣಿಸಿತ್ತು.
ಇಸ್ರೇಲ್ ಸರ್ಕಾರವು ನರಮೇಧದ ಆರೋಪಗಳನ್ನು ತಿರಸ್ಕರಿಸಿದೆ. ದಕ್ಷಿಣ ಆಫ್ರಿಕಾದ ಆರೋಪವು ಕಾನೂನಿನ ಸಮರ್ಥನೆ ಹೊಂದಿಲ್ಲ ಎಂದು ಹೇಳಿದೆ. ಹಮಾಸ್‌ಗೆ ಇಸ್ರೇಲ್ ಮೇಲೆ ದಾಳಿಗೆ ದಕ್ಷಿಣ ಆಫ್ರಿಕಾ ಸಹಕರಿಸುತ್ತಿದೆ ಎಂದು ಇಸ್ರೇಲ್ ಪ್ರತ್ಯಾರೋಪ ಮಾಡಿದೆ.
ಗಾಝಾದ ಮೇಲಿನ ಇಸ್ರೇಲ್‌ನ ಸೇನಾ ಕಾರ್ಯಾಚರಣೆಯನ್ನು ದಕ್ಷಿಣ ಆಫ್ರಿಕಾ ತೀವ್ರವಾಗಿ ಟೀಕಿಸುತ್ತಾ ಬಂದಿದೆ. ಅಧ್ಯಕ್ಷ ಸಿರಿಲ್ ರಾಮಫೋಸಾ ಸೇರಿದಂತೆ ಆಫ್ರಿಕಾದ ಹಲವು ಮುಖಂಡರು ಗಾಝಾ ಮತ್ತು ವೆಸ್ಟ್ ಬ್ಯಾಂಕ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ನರಮೇಧ ಎಂದು ಕರೆದಿದ್ದಾರೆ.
ಇಸ್ರೇಲ್ ಗಾಝಾ ಮೇಲೆ ಕಳೆದ ಮೂರು ತಿಂಗಳಿನಿಂದ ನಡೆಸುತ್ತಿರುವ ಯುದ್ಧದಲ್ಲಿ 24,000ಕ್ಕೂ ಅಧಿಕ ಮಂದಿ ಪ್ಯಾಲೆಸ್ತೀನ್ ನಾಗರಿಕರು ಮೃತಪಟ್ಟಿದ್ದಾರೆ. ಇವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ. 10,000ಕ್ಕೂ ಅಧಿಕ ಮಕ್ಕಳು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಲಕ್ಷಾಂತರ ಪ್ಯಾಲೆಸ್ತೀನ್ ನಾಗರಿಕರು ಗಾಯಗೊಂಡಿದ್ದು, ಸಾವಿರಾರು ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. ಪ್ಯಾಲೆಸ್ತೀನ್‌ನಲ್ಲಿ ಇಸ್ರೇಲ್ ಹತ್ಯಾಕಾಂಡವನ್ನು ನಡೆಸುತ್ತಿದೆ ಎಂದು ವಿವಿಧ ರಾಷ್ಟ್ರಗಳು ಕದನ ವಿರಾಮಕ್ಕೆ ಆಗ್ರಹಿಸುತ್ತಿದೆ. ಆದರೆ ಇಸ್ರೇಲ್ ಮಾತ್ರ ಗಾಝಾದಲ್ಲಿ ಅಮಾಯಕರ ಮೇಲೆ ತಮ್ಮ ಕ್ರೌರ್ಯವನ್ನು ಮುಂದುವರಿಸಿದೆ. ಅಮೆರಿಕ, ಬ್ರಿಟನ್‌ನಂತಹ ರಾಷ್ಟ್ರಗಳು ಈ ಕೃತ್ಯಕ್ಕೆ ಬೆಂಬಲಿಸುತ್ತಿದೆ.