ಇಂದಿನ ವಿದ್ಯಾರ್ಥಿಗಳು ಪಠ್ಯದೊಂದಿಗೆ ಸಾಹಿತ್ಯಾದ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕಿದೆ, ಸಾಹಿತ್ಯವು ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರಣೇಂದ್ರಯ್ಯ ಹೇಳಿದರು.
ಮಂಡ್ಯ ನಗರದ ಕಾವೇರಿ ನಗರದಲ್ಲಿರುವ ಮಂಡ್ಯ ಎಜುಕೇಶನ್ ಸೊಸೈಟಿ ಶಾಲೆ ಆವರಣದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯ ಘಟಕ ಆಯೋಜಿಸಿದ್ದ ಜೀವನದಿ ಕಾವೇರಿ ಕುರಿತ ಪ್ರಬಂಧ ಸ್ಪರ್ಧೆ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳನ್ನು, ಸಾಧಕರನ್ನು ಅಭಿನಂದಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಸಾಹಿತ್ಯ ಓದುವ ಮತ್ತು ಕಟ್ಟಿಕೊಡುವ ಮನೋಭಾವ ದೂರವಾಗುತ್ತಿದೆ. ಸಾಹಿತ್ಯದ ಸಭೆ, ಸಮಾರಂಭಗಳಿಗೆ ಜನರೇ ಬರದಷ್ಟು ನಿರಾಸಕ್ತರಾಗಿದ್ದಾರೆ. ಸಾಹಿತ್ಯದ ಸಾರವನ್ನು ಅರಿಯದವವರು ಮನುಷ್ಯನಾಗಿರಲು ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಗುರುಕುಲ ಪ್ರತಿಷ್ಠಾನ ಅಧ್ಯಕ್ಷೆ ಸುಮನ್‌ರಾವ್ ಮಾತನಾಡಿ, ಪ್ರಬಂಧವನ್ನು ರಚಿಸುವ ಕೌಶಲ್ಯ ಜ್ಞಾನ ಹೆಚ್ಚಿಸಿಕೊಳ್ಳಬೇಕಿದೆ. ಪೀಠಿಕೆ ವಿಷಯ, ಸಾರಾಂಶಗಳ ಬಗ್ಗೆ ಜಾಗೃತಿ ವಹಿಸಬೇಕಿದೆ, ಪ್ರೌಢಿಮೆಯ ಬರಹಗಳು ಹೆಚ್ಚು ಪ್ರಭಾವ ಬೀರುತ್ತವೆ ಎಂದು ಕಿವಿಮಾತೇಳಿದರು.
ಇದೇ ಸಂದರ್ಭದಲ್ಲಿ ಜೀವನದಿ ಕಾವೇರಿ ಕುರಿತು ಪ್ರಬಂಧ ಬರೆದು ವಿಜೇತರಾದ ಸ್ಪರ್ಧಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ಬಳಿಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವವರಿಗೆ ಕಾವೇರಿ ಸಿರಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ವೇದಿಕೆಯಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯ ಘಟಕ ರಾಜ್ಯಾಧ್ಯಕ್ಷ ಪೋತೇರ ಮಹದೇವು, ಮೈಸೂರು ಅಧ್ಯಕ್ಷೆ ಮಂಜುಳಾ, ಎಂ.ಇ.ಎಸ್.ಶಾಲೆ ಕಾರ್ಯದರ್ಶಿ ಎಂ.ಎಸ್.ಸುದರ್ಶನ್ ಬಾಬು, ಖಜಾಂಚಿ ಸೋಮಶೇಖರ್, ಸಾಹಿತಿ ಅಲಮೇಲಮ್ಮ, ರತ್ನಚಂದ್ರಶೇಖರ್, ಜ್ಯೋತಿಷಿ ಸುದೀಪ್ ಆರಾಧ್ಯ, ಶಿವಪ್ರಸಾದಸ್ವಾಮಿ ಮತ್ತಿತರರಿದ್ದರು.