ರಾಷ್ಟ್ರಕವಿ ಕುವೆಂಪು ಅವರನ್ನು ನಿಂದಿಸಿ, ನಾಡಗೀತೆಗೆ ಅಪಮಾನ ಮಾಡಿರುವವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯ ಕಾರ್ಯದರ್ಶಿ ಸಿ.ಆರ್.ರಮೇಶ್ ಅವರು ತಿಳಿಸಿದ್ದಾರೆ.
ಪಾಂಡವಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಡೀ ಜಗತ್ತಿಗೆ ವಿಶ್ವಮಾನವ ಸಂದೇಶ ಸಾರಿದ, ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಲು ಸಾಹಿತ್ಯದ ಮೂಲಕ ಅರ್ಥಗರ್ಭಿತ ಪ್ರಯತ್ನ ಮಾಡಿದ ಕುವೆಂಪು ಅವರ ಸಾಹಿತ್ಯ ತಿರುಚುವ ಮೂಲಕ ಪಠ್ಯ ಪುಸ್ತಕ ಪರಿಷ್ಕರಣೆ ನೆಪದಲ್ಲಿ ಬಿಜೆಪಿ ಸರ್ಕಾರ ಇಡೀ ಪಠ್ಯವನ್ನು ಕೇಸರೀಕರಣ ಮಾಡಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರಕವಿ ಕುವೆಂಪು ಅವರ ಕುರಿತು ಅವಹೇಳನಕಾರಿ ಮಾತುಗಳನ್ನು ಆಡಿರುವ ಹಾಗೂ ನಾಡಗೀತೆಯನ್ನು ತಿರುಚಿ ಬರೆದ ರೋಹಿತ್ ಚಕ್ರತೀರ್ಥ ಅವರ ವಿರುದ್ಧ ಕ್ರಮ ಜರುಗಿಸುವುದರ ಜೊತೆಗೆ ತಕ್ಷಣವೇ ಎಚ್ಚೆತ್ತು ಪಠ್ಯ ಪುಸ್ತಕದಲ್ಲಿ ಆರ್‌ಎಸ್‌ಎಸ್ ಮುಖಂಡರ ವಿಷಯಗಳ ಕುರಿತು ಚರ್ಚಿಸಲು ರಾಷ್ಟ್ರಕವಿ ಕುವೆಂಪು ಸಾಹಿತ್ಯವನ್ನು ಜೋಡಿಸಬೇಕು. ಇಲ್ಲದಿದ್ದರೆ ಆದಿಚುಂಚನಗಿರಿ ಮಠಾಧೀಶರಾದ ಶ್ರೀ ಡಾ.ನಿರ್ಮಲಾನಂದಸ್ವಾಮೀಜಿ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಯಿತು ಎಂದು ಎಚ್ಚರಿಸಿದರು.
ನೇಗಿಲ ಯೋಗಿ ಮುಖಂಡ ಕಸಾಪ ಮಾಜಿ ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್ ಮಾತನಾಡಿ, ಜಗದ ಕವಿ, ಯುಗದ ಕವಿ, ಈ ನಾಡು ಕಂಡ ಅಪ್ರತಿಮ ಮಹಾಕವಿ ಕುವೆಂಪು ಅವರಿಗೆ ಹೆಚ್ಚಿನ ಗೌರವ ಸಲ್ಲಿಸುವ ಕಾರ್ಯ ಆಗಬೇಕು. ಅವರ ಸಾಹಿತ್ಯವನ್ನು ಓದುವವರು ಯಾರು ಚಕಾರ ಎತ್ತುವ ಧೈರ್ಯವನ್ನು ಹೊಂದಿದ್ದಾರೆ. ಯಾರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲವೋ ಅಂತಹವರು ಮಾತ್ರ ಅಡ್ಡದಾರಿ ಹಿಡಿದು ಅವರ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡುತ್ತಾರೆ.
ಕುವೆಂಪು ಅವರು ಸಾಮಾಜಿಕ, ಧಾರ್ಮಿಕ, ಆರ್ಥಿಕ, ಅಸಮಾನತೆಯನ್ನು ಮತ್ತು ಲಿಂಗಭೇದವನ್ನು ನಿವಾರಿಸಿಕೊಂಡು ಈ ಜಗತ್ತು ಸರ್ವಜನಾಂಗದ ಶಾಂತಿಯ ತೋಟವಾಗಬೇಕೆಂದು ಕನಸು ಕಂಡ ಶ್ರೇಷ್ಠ ದಾರ್ಶನಿಕರು. ಅವರ ಪುಸ್ತಕಗಳನ್ನು ಬಹಳ ಗೌರವದಿಂದ, ಭಕ್ತಿಯಿಂದ ಓದಬೇಕು. ಯಾವುದೇ ಸಾಹಿತಿಯನ್ನು ಟೀಕಿಸುವ ಮೊದಲು ಅವರ ಸಾಹಿತ್ಯದ ಸಾರ-ಸರ್ವವನ್ನು ಅರಿತುಕೊಳ್ಳಬೇಕು. ಇದನ್ನು ಬಿಟ್ಟು ಅವರ ಸಾಹಿತ್ಯ ತಿರುಚುವ ಹಾಗೂ ಅವಹೇಳನಕಾರಿಯಾಗಿ ಮಾತನಾಡುವ ಕೆಲಸ ಮಾಡಬಾರದು ಎಂದರು.
ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯ ತಿರುಚಿರುವವರು ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ನೇಗಿಲಯೋಗಿ ಮುಖಂಡ ಕೋ.ಪು.ಗುಣಶೇಖರ್ ಇತರರು ಇದ್ದರು.