ಇಂದು ಮನುವಾದಿಗಳ ಕುತಂತ್ರದಿಂದ ದೇಶದಲ್ಲಿ ತಲ್ಲಣ ಉಂಟಾಗಿದ್ದು, ದೇಶದ ಪ್ರಜ್ಞಾವಂತ ನಾಗರಿಕರು ಮನುವಾದಿಗಳಿಗೆ ತಿರುಗೇಟು ನೀಡಬೇಕಾಗಿದೆ ಎಂದು ವಿಚಾರವಾದಿ ಕೆ ಮಾಯಿಗೌಡ ಪ್ರಕಟಿಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು, ಮನುವಾದಿಗಳು ಮೌಢ್ಯ, ಮೂಢನಂಬಿಕೆಗಳನ್ನು ಜನರಲ್ಲಿ ಬಿತ್ತಿ ದೇಶದ ಸಾಮರಸ್ಯ ಹಾಳು ಮಾಡುತ್ತಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ವಿಚಾರವಾದಿಗಳ ಪಠ್ಯವನ್ನು ಕಿತ್ತು ಹಾಕಲಾಗಿದೆ. ಸಂವಿಧಾನಕ್ಕೆ ಧಕ್ಕೆ ತರುವ ಯಾವ ಕ್ರಿಯೆಯನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಆಕ್ರೋಶದಿಂದ ನುಡಿದರು.
ವಿಜ್ಞಾನ, ವೈಚಾರಿಕ ತಳಹದಿಯ ಮೇಲೆ ಸಮಾಜವನ್ನು ನಿರ್ಮಿಸಬೇಕು. ಆದರೆ ಮನುವಾದಿಗಳು ನಮ್ಮದೇ ಆಡಳಿತ, ಪೊಲೀಸ್, ಬುಲೆಟ್ ಎಲ್ಲವೂ ಇದೆ ಎನ್ನುತ್ತಾರೆ. ಆದರೆ ನಾವು ಯಾವ ಬುಲೆಟ್ಟಿಗೂ ಅಂಜದೆ ಹಲವಾರು ಹೋರಾಟ ನಡೆಸಿದ್ದೇವೆ. ಮನುವಾದಿಗಳ ಯಾವ ಕ್ರಿಯೆಯನ್ನು ನಾವು ಒಪ್ಪುವುದಿಲ್ಲ, ಕೋಮುವಾದಿ ವಿಚಾರಗಳು ಯುವಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಕಿಡಿಕಾರಿದರು.
ತಾಂಬೂಲ ಪ್ರಶ್ನೆ, ಅಷ್ಟಮಂಗಲ ಪ್ರಶ್ನೆಗಳನ್ನು ಒಪ್ಪುವುದಕ್ಕೆ ಸಾಧ್ಯವೇ ಇಲ್ಲ. ಪ್ರಕೃತಿಯ ಮುಂದೆ ಪವಾಡ ಎಂಬುದು ಯಾವುದು ಇಲ್ಲ. ಮಾಧ್ಯಮಗಳು ಇಂದು ಜನರ ದೇಶದ ಸಮಸ್ಯೆಯ ಬಗ್ಗೆ ಮಾತನಾಡದೆ ಧರ್ಮದ ವಿಚಾರಗಳನ್ನು ಮುಂದಿಟ್ಟುಕೊಂಡು ಜನರ ಭಾವನೆಯನ್ನು ಕೆರಳಿಸುವ ಮಟ್ಟಕ್ಕೆ ಇಳಿದಿದೆ. ಇದು ನಾಚಿಕೆಗೇಡಿನ ಸಂಗತಿ, ಮಾಧ್ಯಮಗಳು ಯುವಜನರನ್ನು ತಪ್ಪು ದಾರಿಗೆ ಎಳೆಯುತ್ತಿವೆ ಎಂದರು.
ಡಾ.ಯಮದೂರು ಸಿದ್ದರಾಜು, ಸುನಂದಾ ಜಯರಾಂ, ಗುರುಮೂರ್ತಿ, ಶಿವಲಿಂಗಯ್ಯ, ಲಂಕೇಶ್, ವಿನಯ್‌ಕುಮಾರ್ ಇತರರಿದ್ದರು.
ಇದನ್ನು ಓದಿ: ಮೇ.28 ಮತ್ತು 29ರಂದು ಯುವ ಸಂಸತ್ ಅಧಿವೇಶನ