Friday, April 19, 2024

ಪ್ರಾಯೋಗಿಕ ಆವೃತ್ತಿ

ಶಾಂತಿಯ ತೋಟಕ್ಕೆ ಬೆಂಕಿ ಹಚ್ಚಲು ಬಿಡಲ್ಲ : ಕೆ.ಎಲ್. ಅಶೋಕ್

ಕುವೆಂಪುರವರ ಆಶಯವಾದ ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಕರ್ನಾಟಕಕ್ಕೆ ಬೆಂಕಿ ಹಚ್ಚಲು ಬಿಡುವುದಿಲ್ಲ ಎಂದು ಸಾಮಾಜಿಕ ಹೋರಾಟಗಾರ ಕೆ.ಎಲ್. ಅಶೋಕ್ ಕೋಮುವಾದಿಗಳಿಗೆ ಎಚ್ಚರಿಕೆ ನೀಡಿದರು.

ಇಂದು ಇಡೀ ದೇಶದಲ್ಲಿ ಕೋಮು ಸೌಹಾರ್ದತೆಯನ್ನು ನಾಶ ಮಾಡುವ ಘಟನೆಗಳು ನಡೆಯುತ್ತಿವೆ. ಇನ್ಣೂ ಸಾವಿರ ವರ್ಷ ಕಳೆದರೂ ಬುದ್ಧ ಬಸವ,ಅಂಬೇಡ್ಕರ್, ಟಿಪ್ಪು ಸುಲ್ತಾನ್ ಇರುತ್ತಾರೆ. ಅವರ ವಿಚಾರಗಳು ಇರುತ್ತವೆ. ನೀವೆಂದು ಅವನ್ನು ನಾಶಪಡಿಸಲು ಎಂದಿಗೂ ಸಾಧ್ಯವಿಲ್ಲ.ಈ ದೇಶದಲ್ಲಿ ಇರುವ ದಲಿತರು, ಶೂದ್ರರು, ಹಿಂದೂಗಳು ಎಂದೆಂದಿಗೂ ಮುಸ್ಲಿಮರ ಜೊತೆ ಇದ್ದಾರೆ ಎಂದರು.

ನೀವು ಎಷ್ಟೇ ಬೆಂಕಿ ಹಚ್ಚುವ ಕೆಲಸ ಮಾಡಿದರೂ ಅದಕ್ಕಿಂತ ಹೆಚ್ಚು ಸಾಮರಸ್ಯ ಕಾರ್ಯಕ್ರಮ ಮಾಡುತ್ತೇವೆ. ಈ ಬಾರಿ ಅತಿ ಹೆಚ್ಚು ಇಫ್ತಾರ್ ಕೂಟಗಳು ನಡೆದಿದೆ. ಹಿಂದೂ ಮದುವೆ ಮನೆಯಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು.

ಶೀಘ್ರ ಬಹು ಭಾರತದ ಅನಾವರಣ ರಾಜ್ಯ ಮತ್ತು ದೇಶದಲ್ಲಿ ನಡೆಯಲಿದೆ ಎಂದರು. ಮೇ 14 ರಂದು ಉಡುಪಿಯಲ್ಲಿ ಸಾಮರಸ್ಯ ನಡಿಗೆ ನಡೆಯುತ್ತಿದೆ. ಅಂದು ಬಹು ಭಾರತ, ಬಹು ಭಾಷೆ, ಬಹು ಧರ್ಮಗಳು ಸೇರಿ ಸಾಮರಸ್ಯ ನಡಿಗೆ ಕಾರ್ಯಕ್ರಮ ಮಾಡುತ್ತಿವೆ.ಒಂದು ಉಡುಗೆ,ಧ್ವನಿವರ್ಧಕ,ವ್ಯಾಪಾರ, ಮಾಂಸಕ್ಕೆ ಗಲಾಟೆ ಎಬ್ಬಿಸುತ್ತೀರಿ. ದೇಶದ ಜನರಿಗೆ ಉದ್ಯೋಗ, ಭೂಮಿ,ಶಿಕ್ಷಣ, ಆರೋಗ್ಯ, ವಸತಿ, ಆಸ್ಪತ್ರೆ ಮಾಡಿ,ಅದು ಬಿಟ್ಟು ಬಂಡವಾಳಶಾಹಿಗಳ, ಬ್ರಾಹ್ಮಣಶಾಹಿಗಳ ಚಮಚಾಗಿರಿ ಮಾಡೋದನ್ನು ಬಿಡಿ ಎನ್ನುವ ಸಂದೇಶವನ್ನು ಉಡುಪಿಯ ಸಾಮರಸ್ಯ ನಡಿಗೆ ಮುಖಾಂತರ ಸಾರಲಿದ್ದೇವೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಸುಜಯ್ ಕುಮಾರ್ ಮಾತನಾಡಿ, ಟಿಪ್ಪುವಿನ ಬಗ್ಗೆ ಸತ್ಯವನ್ನು ಹೇಳದೆ ವ್ಯವಸ್ಥಿತವಾಗಿ ಸುಳ್ಳು ಹೇಳಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಟಿಪ್ಪು ಬಗ್ಗೆ ದ್ವೇಷ ಹುಟ್ಟುವಂತೆ ಮಾಡಲಾಗಿದೆ. ಆದರೆ ಇತಿಹಾಸ ಎಂದಿಗೂ ಟಿಪ್ಪುವಿನ ಬಗ್ಗೆ ಸತ್ಯವನ್ನೇ ತಿಳಿಸಿದೆ ಎಂದರು.

ವಕೀಲ ಲಕ್ಷ್ಮಣ್ ಚೀರನಹಳ್ಳಿ ಮಾತನಾಡಿ, ಸಾಮರಸ್ಯ ಕಾರ್ಯಕ್ರಮ ಮಾಡದಂತೆ ಹಲವರು ತೊಂದರೆಗಳನ್ನು ಕೊಟ್ಟರೂ ಕಾರ್ಯಕ್ರಮ ಮಾಡಿ ಸೌಹಾರ್ದತೆ ಹೇಳಿಕೊಟ್ಟಿದ್ದೇವೆ ಎಂದು ತಿಳಿಸಿದರು. ಟಿಪ್ಪುಸುಲ್ತಾನ್ ಪ್ರಪಂಚದ ರಾಜರುಗಳಲ್ಲಿ ಬಹಳ ಭಿನ್ನವಾಗಿದ್ದ. ಆತ ಮಾಡಿದ ಸುಧಾರಣೆಗಳನ್ನು ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಈಗಲೂ ಮಾಡಲಾಗಿಲ್ಲ.

ಬಹುಪಾಲು ರಾಜರು ಸುಖಲೋಲುಪತೆ ಯಿಂದ ಆಡಳಿತ ನಡೆಸಿದರೆ,ಟಿಪ್ಪುಸುಲ್ತಾನ್ ಭೂ ಸುಧಾರಣೆ, ಮದ್ಯಪಾನ ನಿಷೇಧ, ದೇವದಾಸಿ ಪದ್ಧತಿ ನಿರ್ಮೂಲನೆ ಮಾಡಿದ ಎಂದರು. ಕಾವೇರಿ ನದಿಗೆ ಅಣೆಕಟ್ಟು ನಿರ್ಮಾಣಕ್ಕೆ ಮೊದಲು ಯೋಜನೆ ರೂಪಿಸಿದ್ದೇ ಟಿಪ್ಪು ಸುಲ್ತಾನ್. ಆತ ತಂದ ಜನಪರ ಕಾರ್ಯಕ್ರಮಗಳು ಇಂದಿಗೂ ಚರಿತ್ರೆಯಲ್ಲಿ ಸ್ಥಾನ ಪಡೆದಿದ್ದು ಟಿಪ್ಪು ಇತಿಹಾಸವಿರುವವರೆಗೂ ಅಜರಾಮರ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!