Wednesday, September 11, 2024

ಪ್ರಾಯೋಗಿಕ ಆವೃತ್ತಿ

ದೂರು ಕೊಟ್ಟ ದಿನವೇ ಶೋಕಾಸ್ ನೋಟೀಸ್| ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ ಎಂದ ಸಿದ್ದರಾಮಯ್ಯ

ರಾಜ್ಯಪಾಲರು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಹಾಗೂ ಬಿಜೆಪಿ, ಜೆಡಿಎಸ್ ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ಪ್ರವಾಹ ಪರಿಸ್ಥಿತಿ ಅಧ್ಯಯನಕ್ಕೆ ತೆರಳುವ ಮುನ್ನ ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶೋಕಾಸ್ ನೋಟೀಸು ಕೊಟ್ಟಿರುವುದು ಕಾನೂನುಬಾಹಿರವಾಗಿದೆ, ಸಂವಿಧಾನಕ್ಕೆ ವಿರುದ್ಧವಾಗಿದೆ. ಕೇಂದ್ರ ಸರ್ಕಾರ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ದೂರಿದರು.

ಪ್ರಾಸಿಕ್ಯೂಶನ್ ಗೆ ಅನುಮತಿ ಕೊಟ್ಟಿರುವ ಸಂದರ್ಭದಲ್ಲಿ ಏನು ಬೆಳವಣಿಗಳಾಗಿವೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ನಿನ್ನೆ ನಡೆದ ಸಚಿವ ಸಂಪುಟ ಸಭೆಗೆ ಕೆಟ್ಟ ಸಾಂಪ್ರದಾಯವಾಗುತ್ತದೆ ಎಂದು ಸಭೆಗೆ ಹೋಗದೇ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸಚಿವ ಸಂಪುಟ ಸಭೆ ನಡೆಸಲು ನೇಮಿಸಲಾಗಿತ್ತು. ಶೋಕಾಸ್ ನೋಟಿಸ್ ಬಗ್ಗೆ ಸುದೀರ್ಘ ಚರ್ಚೆ ಮಾಡಿ, ನೋಟೀಸು ನೀಡಿರುವುದು ಕಾನೂನು ಬಾಹಿರವಾಗಿದ್ದು, ನೋಟೀಸನ್ನು ಅದನ್ನು ಹಿಂಪಡೆಯಬೇಕೆಂದು ನಿರ್ಧರಿಸಲಾಗಿದೆ ಎಂದರು.

ಕೆ. ಜೆ.ಅಬ್ರಹಾಂ ಒಬ್ಬ ಬ್ಲಾಕ್ ಮೇಲರ್

ಕೆ. ಜೆ.ಅಬ್ರಹಾಂ ಒಬ್ಬ ಬ್ಲಾಕ್ ಮೇಲರ್. ಆತನ ದೂರಿನ ಮೇಲೆ ಕ್ರಮ ಕೈಗೊಂಡಿರುವುದು ಕಾನೂನು ಬಾಹಿರವಾದ ವಿಚಾರ. ಆತ ಈ ರೀತಿ ಅನೇಕ ಜನರ ಮೇಲೆ ದೂರುಗಳನ್ನು ನೀಡಿದ್ದಾರೆ. ನಾನು ಯಾವುದೇ ಅಪರಾಧವನ್ನು ಮಾಡಿಲ್ಲ. ದಿನಾಂಕ : 26-7.2024 ರಂದು 11.30 ಗೆ ದೂರು ನೀಡಿದ್ದು, ಅಂದೇ ರಾಜ್ಯಪಾಲರು ಶೋಕಾಸ್ ನೋಟಿಸ್ ಕೊಟ್ಟಿದ್ದಾರೆ. ಒಂದೇ ದಿನದಲ್ಲಿ ಕಾನೂನು ವಿಷಯವನ್ನು ಒಳಗೊಂಡ ವಿಚಾರವನ್ನು, 136 ಜನ ಶಾಸಕರನ್ನು ಜನ ಆಶೀರ್ವಾದ ಮಾಡಿ ಕಳಿಸಿರುವ ಚುನಾಯಿತ ಸರ್ಕಾರದ ಮುಖ್ಯಮಂತ್ರಿಗೆ ನೋಟೀಸು ಕೊಡುವಾಗ ಎಲ್ಲಾ ಕಾನೂನನ್ನು ಕೂಲಂಕುಷವಾಗಿ ಪರಿಶೀಲಿಸಬೇಕು. ಏನು ನೋಡದೇ ಆತುರವಾಗಿ ಕೆಲಸ ಮಾಡಿದ್ದಾರೆ. ಅಂದೇ ನೋಟೀಸು ನೀಡಿ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರಿಗೆ ವಿಶೇಷ ಕರ್ತವ್ಯಾಧಿಕಾರಿ ಪ್ರಭು ಶಂಕರ್ ಎಂಬುವರು ಕರೆ ಮಾಡಿ ಶೋಕಾಸ್ ನೋಟಿಸ್ ಸಿದ್ಧವಿದೆ ತೆಗೆದುಕೊಳ್ಳಬೇಕು ಎಂದಿದ್ದಾರೆ. ರಾತ್ರಿಯಾಗಿರುವುದರಿಂದ ಅದನ್ನು ಪಡೆಯಲಾಗಲಿಲ್ಲ. ಮಾರನೇ ದಿನ 2.00 ಗಂಟೆಗೆ ನೋಟೀಸನ್ನು ಆತುರವಾಗಿ ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ಧನ್ ರೆಡ್ಡಿಯವರುಗಳ ಮೇಲೆ ವರ್ಷಗಟ್ಟಲೇ ದೂರಿದೆ. ಅವರ ಮೇಲೆ ಏಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ಏನೂ ಇಲ್ಲದೆ ಅನಗತ್ಯವಾಗಿ ಈ ರೀತಿ ಮಾಡುತ್ತಿದ್ದಾರೆ ಎಂದರು .

ರಾಜ್ಯಪಾಲರಿಗೆ ಸಲಹೆ ನೀಡಬೇಕಿರುವುದು ನಮ್ಮ ಮಂತ್ರಿ ಮಂಡಲದವರು. ನಾವು ಸಲಹೆ ನೀಡಿಲ್ಲ. ಮುಖ ಕಾರ್ಯದರ್ಶಿಗಳು ವಿವರವಾದ ಪತ್ರವನ್ನು ಜುಲೈ 26 ರಂದು ಸಂಜೆ 6.30 ಗಂಟೆಗೆ ರಾಜ್ಯಪಾಲರಿಗೆ ತಲುಪಿಸಿದ್ದಾರೆ. ಅದನ್ನೂ ಅವರು ನೋಡಿಲ್ಲ . ಮೂಡಾ ಪ್ರಕರಣದ ಬಗ್ಗೆ ನ್ಯಾಯಾಂಗ ಆಯೋಗವನ್ನು ಜುಲೈ 14 ರಂದು ಸರ್ಕಾರ ರಚಿಸಿದೆ. ಆಯೋಗದ ವರದಿಯನ್ನು ನಿರೀಕ್ಷಿಸಲಾಗಿದೆ. ತನಿಖೆ ನಡೆಸಿ ತಪ್ಪುಗಳಾಗಿದ್ದರೆ ವರದಿ ಸಲ್ಲಿಸುತ್ತಾರೆ. ಅದನ್ನೂ ಪರಿಗಣಿಸದೆ ರಾಜ್ಯಪಾಲರು ನೋಟೀಸು ನೀಡಿದ್ದಾರೆ ಎಂದರು.

ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಕೊಡಲಾಗಿದೆ. ಅವರಿಗೆ ವಸ್ತುಸ್ಥಿತಿ ಅರ್ಥವಾಗಿದೆ ಎಂದರು.

ರಾಜ್ಯಪಾಲರು ನೋಟೀಸ್ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಹೆದರಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅಶೋಕ್ ಅವರು ಹೆದರಿರಬಹುದು, ನನಗೆ ಯಾಕೆ ಹೆದರಿಕೆಯಾಗಬೇಕು. ಕಾನೂನಿನ ರೀತ್ಯಾ ಅವರು ನೋಟೀಸು ನೀಡಿಲ್ಲ. ತಪ್ಪು ಮಾಡಿದ್ದರೆ ಹೆದರಬೇಕು. ನಾನು ತಪ್ಪು ಮಾಡಿಲ್ಲ ಎಂದರು.

ಅಭ್ಯಂತರವಿಲ್ಲ

ಬಿಜೆಪಿ ಪಾದಯಾತ್ರೆ ಮಾಡುವ ಬಗ್ಗೆ ಅಭ್ಯಂತರವಿಲ್ಲ ಎಂದ ಮುಖ್ಯಮಂತ್ರಿಗಳು, ಕೇಂದ್ರ ಸಚಿವ ಹಾಗೂ ಜೆಡಿಎಸ್ ಅಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಈ ಪ್ರಕರಣದಲ್ಲಿ ಏನೂ ಇಲ್ಲ ಎಂದು ಪಾದಯಾತ್ರೆ ಬೇಡ ಎಂದರು. ಮಳೆ ಹೆಚ್ಚಾಗಿದೆ , ಜಲಾಶಯಗಳು ತುಂಬಿ ಪ್ರವಾಹ ಬಂದಿದೆ ಅದರ ಕಡೆಗೆ ಗಮನ ನೀಡಬೇಕೆಂದು ಹೇಳಿದರು. ಈಗ ಅದು ಮರೆತುಹೋಯಿತೇ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಅಂದರೆ ಅವರ ಸ್ವ ಇಚ್ಛೆ ಯಿಂದ ಮಾಡುತ್ತಿಲ್ಲ ಎಂದಾಯಿತು ಎಂದರು.

ಮಳೆಯಿಂದ ಮನೆ ಬಿದ್ದಿರುವುದು, ರಸ್ತೆ ಹಾಳಾಗಿರುವುದು, ಸೇತುವೆಗಳು, ವಿದ್ಯುತ್ ಕಂಬಗಳು ಬಿದ್ದಿರುವುದ್ದರ ಬಗ್ಗೆ ವರದಿ ತರಿಸುತ್ತಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಮನೆಗಳನ್ನು ಕಟ್ಟಿಕೊಡುವುದು ಹಾಗೂ ಪರಿಹಾರ ಕೊಡುತ್ತೇವೆ ಎಂದು ಕಂದಾಯ ಸಚಿವರು ಹೇಳಿರುವುದು ಗೊಂದಲ ಮೂಡಿಸಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು, ಎಸ್.ಡಿ.ಆರ್. ಎಫ್ ಮಾರ್ಗಸೂಚಿ ಪ್ರಕಾರ ಎಷ್ಟು ಕೊಡಬೇಕೋ ಅಷ್ಟು ಪರಿಹಾರ ನೀಡಿ ಮನೆಯನ್ನೂ ಕಟ್ಟಿಕೊಡಲಾಗುವುದು ಎಂದರು.

ನಾಳೆ ಬೆಳಿಗ್ಗೆ ನಂಜನಗೂಡಿಗೆ ತೆರಳುತ್ತಿದ್ದು, ಇಂದು ಕೊಡಗು ಜಿಲ್ಲೆಯಲ್ಲಿ ಮಳೆಯಿಂದಾಗಿರುವ ಅನಾಹುತಗಳನ್ನು ಪರಿಶೀಲಿಸಲಾಗುವುದು ಎಂದರು.

ಪ್ರವಾಹ ಬಂದಿರುವ ಸ್ಥಳಗಳಿಗೆ ಎಲ್ಲಾ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಜನರನ್ನು ಭೇಟಿ ಮಾಡುತ್ತಿದ್ದಾರೆ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!