Tuesday, June 25, 2024

ಪ್ರಾಯೋಗಿಕ ಆವೃತ್ತಿ

ಕನ್ನಡದ ಕೆಲಸಕ್ಕೆ ಪೋಲಿಸರು ಕೈ ಜೋಡಿಸಬೆಕು

ಪೊಲೀಸ್‌ ಇಲಾಖೆಯಲ್ಲಿಯೂ ಕನ್ನಡ ಸಾಹಿತ್ಯ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಕನ್ನಡ ಕಟ್ಟವ ಕೆಲಸಕ್ಕೆ ಪೋಲಿಸರು ಕೈ ಜೋಡಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯ ಘಟಕದ ಅಧ್ಯಕ್ಷ ಡಾ.ಮಹೇಶ್‌ ಜೋಷಿ ಸಲಹೆ ನೀಡಿದರು.

ಮಂಡ್ಯ ನಗರದ ಜಿಲ್ಲಾ ವಾರ್ತಾ ಮತ್ತು ಪ್ರಚಾರ ಇಲಾಖೆಯ ಬಳಿ ಕಸಾಪ ನಡೆಸಿಕೊಂಡು ಬರುತ್ತಿರುವ ಗ್ರಂಥಾಲಯ, ವಾಚನಾಲಯದ ಕಟ್ಟಡದ ವಿಷಯವಾಗಿ ನಿವೃತ್ತ ಪೊಲೀಸರು ಮತ್ತು ಕಸಾಪ ನಡುವಿನ ವಿವಾದದ ಬಗ್ಗೆ ಬುಧವಾರ ಆಯೋಜಿಸಿದ್ದ ಸಾಹಿತಿಗಳು ಮತ್ತು ವಿಚಾರವಾದಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪೊಲೀಸರು ಹಾಗೂ ಕಸಾಪ ನಡುವಿನ ಮನಸ್ತಾಪ ಸರಿಯಲ್ಲ. ಸಮಾಜಕ್ಕೆ ಪೊಲೀಸರು ಮತ್ತು ಕನ್ನಡ ಸಾಹಿತ್ಯ ಪರಿಷತ್ ಎರಡು ಮುಖ್ಯವಾದವುಗಳೇ. ಕನ್ನಡ ತೇರನ್ನು ಎಳೆಯುವವರಿಗೆ ಸಹಕಾರ ನೀಡಬೇಕು. ಪರಿಷತ್‌ ಕಾರ್ಯಕ್ರಮಗಳನ್ನು ಮಾಡಬೇಕಾದರೆ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಮಹತ್ತರ ಪಾತ್ರ ವಹಿಸಲಿದೆ. ಅವರ ಸಹಕಾರ ಅತ್ಯಗತ್ಯವಾಗಿದೆ ಇದನ್ನು ಮನಗಂಡು ಸಂಘರ್ಷಕ್ಕೆ ಇಳಿಯುವುದು ಬೇಡ ಎಂದರು.

ಕಳೆದ ಒಂಬತ್ತು ವರ್ಷಗಳಿಂದ ಕಸಾಪದಿಂದ ವಾಚನಾಲಯ ಹಾಗೂ ಇತರೆ ಕನ್ನಡ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರಲಾಗುತ್ತಿದೆ ಎಂಬುದು ಗಮನಕ್ಕೆ ಬಂದಿದೆ. ಈ ಸಂಬಂಧ ಸ್ಥಳದ ಬಗ್ಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜೊತೆಯೂ ಮಾತನಾಡಿದ್ದು, ಕನ್ನಡದ ಕೆಲಸಕ್ಕಾಗಿ ಸ್ಥಳ ಸಿಗುತ್ತದೆ. ಇದರಲ್ಲಿ ಅನುಮಾನ ಬೇಡ ಎಂದು ಭರವಸೆ ನೀಡಿದರು.

ನಿಮ್ಮೆಲ್ಲರ ಸಹಕಾರದಿಂದ ಜಾಗ ಪಡೆಯಲು ಪ್ರಯತ್ನ ಮಾಡುವೆ. ಆಗಲಿಲ್ಲ ಎಂದ ಮಾತ್ರಕ್ಕೆ ಇಷ್ಟಕ್ಕೆ ಬಿಡುವುದಲ್ಲ, ಜಿಲ್ಲಾಡಳಿತದ ಮೇಲ್ಪಟ್ಟ ಹಾಗೂ ಅದಕ್ಕೂ ಮಿಗಿಲಾಗಿ ಸರ್ಕಾರದ ಗಮನಕ್ಕೆ ತಂದು ಕೆಲಸ ಮಾಡಿಸಿಕೊಳ್ಳೋಣ ಎಂದು ಭರವಸೆ ವ್ಯಕ್ತಪಡಿಸಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಮಾತನಾಡಿ, ಜಾಗವನ್ನು ಪಡೆದುಕೊಳ್ಳಲು ನ್ಯಾಯವಾದ ದಾರಿಯಲ್ಲಿ ಹೋಗೋಣ. ಜಿಲ್ಲೆಯಲ್ಲಿ ಸಂಸದರು, ಸಚಿವರು, ಶಾಸಕರು ಎಲ್ಲರೂ ಇದ್ದಾರೆ, ಅವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು ಅನಿವಾರ್ಯ, ರಾಜ್ಯ ಸರ್ಕಾರದ ಮೇಲೆ ಪ್ರಭಾವ ಬೀರುವ ನಿಟ್ಟಿನಲ್ಲಿ ಸಾಗೋಣ, ಕಸಾಪದ ಘನತೆಗೆ ತಕ್ಕಂತೆ ನಡೆದುಕೊಳ್ಳೋಣ ಎಂದು ಸಲಹೆ ನೀಡಿದರು.

ಕಸಪಾ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ, ಕಳೆದ ಒಂಬತ್ತು ವರ್ಷಗಳ ಹಿಂದೆ ಅಂದಿನ ಜಿಲ್ಲಾಧಿಕಾರಿ ಕೃಷ್ಣಯ್ಯ ಅವರು ನನ್ನ ಅಧಿಕಾರದ ಅವಧಿಯಲ್ಲಿ ಈಗ ವಿವಾದವಿರುವ ಸರ್ಕಾರದ ಸ್ಥಳವನ್ನು ಕಸಾಪ ಚಟುವಟಿಕೆಗಳಿಗೆ ಕೊಟ್ಟಿದ್ದರು. ಇದರಿಂದ ವಾಚನಾಲಯ ಮಾಡಿಕೊಂಡಿದ್ದು, ವಿದ್ಯಾರ್ಥಿಗಳಿಗೆ ಮತ್ತು ಓದುಗರಿಗೆ ಅನುಕೂಲವಾಗುತ್ತಿದೆ. ಇದರ ನಡುವೆ ಪೊಲೀಸ್‌ ನಿವೃತ್ತ ಸಂಘದವರು ಒಂದು ಕೊಠಡಿ ಕೇಳಿದ್ದರು. ಅದರಂತೆ ಒಂದು ಕೊಠಡಿ ನೀಡಲಾಗಿತ್ತು, ಈಗ ಇಡೀ ಸ್ಥಳವೇ ನಮ್ಮದು ಎಂದು ಹೇಳುವುದು ಸರಿಯಲ್ಲ. ಕನ್ನಡದ ಕೆಲಸಗಳಿಗೆ ಸಹಕಾರ ಕೊಡಬೇಕೇ ಹೊರತು ಅಡ್ಡಿ ಪಡಿಸಬಾರದು ಎಂದರು.

ಸಾಹಿತಿ ಜಿ.ಟಿ.ವೀರಪ್ಪ ಮಾತನಾಡಿ, ಒಂಬತ್ತು ವರ್ಷಗಳ ಹಿಂದೆಯೇ ಅಂದಿನ ಜಿಲ್ಲಾಡಳಿತ ಕಸಾಪ ಚಟುವಟಿಕೆಗಳಿಗೆ ಸ್ಥಳ ನೀಡಿದೆ. ಇದನ್ನು ನಮ್ಮದು ಎಂಬ ನಿವೃತ್ತ ಪೊಲೀಸರ ನಡೆ ಖಂಡನೀಯ. ಈ ಸ್ಥಳವನ್ನು ನೀಡದೇ ಹೋದರೆ ಬದಲಿಗೆ ಒಂದು ಎಕರೆ ಸ್ಥಳವನ್ನು ನಗರದ ಹತ್ತಿರದಲ್ಲೇ ಪರಿಷತ್‌ಗೆ ನೀಡಬೇಕು ಎಂದು ಆಗ್ರಹಿಸಿದರು.

ಕಸಾಪ ಮಾಜಿ ಅಧ್ಯಕ್ಷ ಪ್ರೊ.ಹೆಚ್.ಎಸ್. ಮುದ್ದೇಗೌಡ, ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ ಚಾಮಲಾಪುರ, ಕಸಾಪ ಮಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ, ರಾಜ್‌ಕುಮಾರ ಸಂಘದ ರವೀಂದ್ರಕುಮಾರ್‌, ಹುಸ್ಕೂರು ಕೃಷ್ಣೇಗೌಡ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!