ಮಂಡ್ಯ ನಗರದಿಂದ 5 ಕಿ.ಮೀ.ದೂರದಲ್ಲಿರುವ ಶ್ರೀನಿವಾಸಪುರ ಗೇಟ್ ಬಳಿ ಸ್ಯಾಂಜೋ ಆಸ್ಪತ್ರೆಯ ಮುಂಭಾಗ ರಾಜ್ಯ ಒಕ್ಕಲಿಗರ ಸಂಘ ನಿರ್ಮಿಸಿರುವ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ.
ಒಕ್ಕಲಿಗ ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ರಾಜ್ಯ ಒಕ್ಕಲಿಗರ ಸಂಘ ಸುಮಾರು ಐದಾರು ಕೋಟಿ ರೂ.ವೆಚ್ಚದಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯ ನಿರ್ಮಿಸಿತ್ತು.
ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರೇ ಹಾಸ್ಟೆಲ್ ಕಟ್ಟಡ ಉದ್ಘಾಟಿಸಿದ್ದರೂ, ಕೆಲವೊಂದು ಕಾರಣಗಳಿಂದ ವಿದ್ಯಾರ್ಥಿನಿಲಯ ಆರಂಭವಾಗಿರಲಿಲ್ಲ.
ಕಳೆದ 2 ವರ್ಷಗಳ ಹಿಂದೆ ಕೋವಿಡ್ ಹಿನ್ನಲೆಯಲ್ಲಿ ಹಾಸ್ಟೆಲ್ ಅನ್ನು ಜಿಲ್ಲಾಡಳಿತ ಬಾಡಿಗೆ ನೀಡಿ ತನ್ನ ಸುಪರ್ದಿಗೆ ತೆಗೆದುಕೊಂಡು ಕೋವಿಡ್ ಕೇರ್ ಸೆಂಟರ್ ಆರಂಭಿಸಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿತ್ತು.
ಆದರೆ ಕಳೆದ ಒಂದು ವರ್ಷಗಳ ಹಿಂದೆಯೇ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾದರೂ ವಿದ್ಯಾರ್ಥಿನಿಲಯವನ್ನು ಜಿಲ್ಲಾಡಳಿತ ಬಿಟ್ಟು ಕೊಟ್ಟಿರಲಿಲ್ಲ.
ಒಕ್ಕಲಿಗ ಸಮುದಾಯದ ಮಕ್ಕಳ ಶಿಕ್ಷಣಕ್ಕಾಗಿ ಕಟ್ಟಿದ್ದ ವಿದ್ಯಾರ್ಥಿನಿಲಯ ಮೂಲ ಉದ್ದೇಶಕ್ಕೆ ಬಳಕೆಯಾಗುವ ಬದಲು ಅನ್ಯ ಉದ್ದೇಶಕ್ಕೆ ಬಳಕೆಯಾಗುತ್ತಿರುವುದರ ಬಗ್ಗೆ ಒಕ್ಕಲಿಗ ಸಮುದಾಯದ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರು.
ಕೋವಿಡ್ ಪ್ರಕರಣ ಜಿಲ್ಲೆಯಲ್ಲಿ ಸಂಪೂರ್ಣ ಕಡಿಮೆಯಾದ ಕಾರಣ ವಿದ್ಯಾರ್ಥಿನಿಲಯನ್ನು ಸಮುದಾಯದ ಮಕ್ಕಳಿಗೆ ನೀಡುವಂತೆ ಸಮುದಾಯದ ಹಲವರು ಹಾಗೂ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ಸಿ.ಮಂಜುನಾಥ್ ಆಗ್ರಹಿಸಿದ್ದರು.
ಒಕ್ಕಲಿಗರ ಸಂಘದ ನೂತನ ನಿರ್ದೇಶಕರಾದ ಅಶೋಕ್ ಜಯರಾಮ್, ರಾಘವೇಂದ್ರ, ಮೂಡ್ಯ ಚಂದ್ರು, ನೆಲ್ಲಿಗೆರೆ ಬಾಲು ಆಯ್ಕೆಯಾದ ನಂತರ ನಡೆದ ಸಂಘದ ಸಭೆಗಳಲ್ಲಿ ವಿದ್ಯಾರ್ಥಿ ನಿಲಯ ಆರಂಭಿಸುವ ವಿಚಾರ ಚರ್ಚೆಗೆ ಬಂದಿತ್ತು.
ನಿರ್ದೇಶಕ ಅಶೋಕ್ ಜಯರಾಮ್ ಅವರು ಮೂಲ ಉದ್ದೇಶಕ್ಕೆ ವಿದ್ಯಾರ್ಥಿನಿ ನಿಲಯ ಬಳಸಬೇಕೆಂದು ಹಲವು ಬಾರಿ ಒಕ್ಕಲಿಗರ ಸಂಘದ ಸಭೆಗಳಲ್ಲಿ ಅಧ್ಯಕ್ಷರನ್ನು ಒತ್ತಾಯಿಸಿದ್ದರು.
ಇದಕ್ಕೆ ಮಂಡ್ಯದಿಂದ ಆಯ್ಕೆಯಾದ ಎಲ್ಲಾ ನಿರ್ದೇಶಕರು ದನಿಗೂಡಿಸಿದ್ದರು. ಅದರಂತೆ ಈ ಶೈಕ್ಷಣಿಕ ವರ್ಷದಿಂದ(2022-2023) ವಿದ್ಯಾರ್ಥಿನಿಲಯ ಆರಂಭಿಸುವುದಾಗಿ ಒಕ್ಕಲಿಗ ಸಂಘದ ಅಧ್ಯಕ್ಷರೂ ಶಾಸಕರಾದ ಸಿ.ಎನ್. ಬಾಲಕೃಷ್ಣ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಕೊನೆಗೂ ಒಕ್ಕಲಿಗ ಸಮುದಾಯದ ಮಕ್ಕಳ ಉತ್ತಮ ಶಿಕ್ಷಣ ಪಡೆದು ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡಲಿ ಎಂಬುದು ನುಡಿ ಕರ್ನಾಟಕ.ಕಾಮ್ ಆಶಯವಾಗಿದೆ.
ಹಾಸ್ಟೆಲ್ ಆರಂಭ ಸಂತಸ ತಂದಿದೆ
ನುಡಿ ಕರ್ನಾಟಕ.ಕಾಂ ಜೊತೆ ಮಾತನಾಡಿದ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಸುಮಾರು 4 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಹಾಸ್ಟೆಲ್ ಎರಡು ವರ್ಷಗಳ ಹಿಂದೆಯೇ ಪ್ರಾರಂಭಗೊಳ್ಳಬೇಕಿತ್ತು.
ಕೋವಿಡ್ ಹಿನ್ನಲೆಯಲ್ಲಿ ಜಿಲ್ಲಾಡಳಿತಕ್ಕೆ ನೀಡಿದ್ದರಿಂದ ಸಾಧ್ಯವಾಗಿರಲಿಲ್ಲ.
ಈಗ ಸಂಘದ ಸುಪರ್ದಿಗೆ ನೀಡಿರುವುದರಿಂದ ಹಾಸ್ಟೆಲ್ ಈ ವರ್ಷದಿಂದ ಆರಂಭವಾಗುತ್ತಿರುವುದು ಸಂತಸ ತಂದಿದೆ. ಕಟ್ಟಡದಲ್ಲಿ ಒಟ್ಟು 88 ರೂಂಗಳಿವೆ.312 ವಿದ್ಯಾರ್ಥಿಗಳಿಗೆ ಅವಕಾಶ ಮಾಡುವ ಮೂಲಕ ಹಾಸ್ಟೆಲ್ ಕಾರ್ಯಾರಂಭಕ್ಕೆ ನಿರ್ಧರಿಸಲಾಗಿದೆ.
ಈಗಾಗಲೇ ದ್ವಿತೀಯ ಪಿಯುಸಿ ಫಲಿತಾಂಶಗಳು ಹೊರ ಬಿದ್ದಿರುವುದರಿಂದ ವಿದ್ಯಾರ್ಥಿಗಳ ಪದವಿ ವ್ಯಾಸಂಗಕ್ಕೆ ಅನುಕೂಲವಾಗುವಂತೆ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ.
ಬಿ.ಇ, ಮೆಡಿಕಲ್ ಸೇರಿದಂತೆ ಯಾವುದೇ ಪದವಿ ವಿದ್ಯಾರ್ಥಿಗಳಿಗೆ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ನಲ್ಲಿ ಅವಕಾಶ ಮಾಡಿಕೊಡಲಾಗುವುದು.
2022-23 ರ ಶೈಕ್ಷಣಿಕ ವರ್ಷದ ಪದವಿ ಕಾಲೇಜುಗಳು ಆರಂಭವಾಗುವ ವೇಳೆಗೆ ಹಾಸ್ಟೆಲ್ ಸೌಲಭ್ಯ ದೊರಕಲಿದೆ.ನಗರದ ಹೊರವಲಯದಲ್ಲಿರುವ ಕಾರಣದಿಂದ ವಿದ್ಯಾರ್ಥಿನಿಯರ ಬದಲು ಬಾಲಕರ ಹಾಸ್ಟೆಲ್ ಆರಂಭಿಸಲು ಸಂಘ ನಿರ್ಧರಿಸಿದ್ದು,ಈ ಬಗ್ಗೆ ಸಂಘದ ಅಧ್ಯಕ್ಷರೇ ಕೆಲದಿನಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟಪಡಿಸಲಿದ್ದಾರೆ.ನಂತರ ಬಾಲಕರು ಹಾಸ್ಟೆಲ್ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದು.ಆರಂಭಿಕವಾಗಿ 100 ಮಂದಿಗೆ ಅವಕಾಶ ಮಾಡಿಕೊಡಲಾಗುವುದು.