Wednesday, September 11, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು ಜನತೆಯ ಮನಸೆಳೆದ ಉದಯಯಾನ

ಮದ್ದೂರು ತಾಲೂಕಿನ ಇತಿಹಾಸದಲ್ಲಿ ಒಂದು ಐತಿಹಾಸಿಕ, ಸಾಮಾಜಿಕ ಸೇವೆಗಳ ಚರಿತ್ರೆಗೆ ಸಾಕ್ಷಿಯಾದ ಉದಯ ಯಾನ ಜನತೆಯ ಮನಸೆಳೆಯಿತು

ರೈತನಾಯಕನಿಗೆ ನಮನ

ಮೊದಲಿಗೆ ಮದ್ದೂರಿನ ರೈತ ಸಭಾಂಗಣದ ಮುಂಭಾಗದಲ್ಲಿರುವ ರೈತ ನಾಯಕ ಪ್ರೊ.ನಂಜುಂಡಸ್ವಾಮಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿ ಉದಯಯಾನಕ್ಕೆ ಸಮಾಜ ಸೇವಕ ಕದಲೂರು ಉದಯ್ ಗೌಡ ಚಾಲನೆ ನೀಡಿದರು.

ತಾಲೂಕಿನ ಬಹುತೇಕ ಹಳ್ಳಿಗಳಿಂದ ಸುಮಾರು ಎಂಟು ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

ಹರಿದು ಬಂದ ಜನಸಾಗರ

ಉದಯಯಾನ ಕಾರ್ಯಕ್ರಮಕ್ಕೆ ಸಾಗರೋಪಾದಿಯಲ್ಲಿ ಜನ ಸಾಗರ ಹರಿದು ಬಂದಿತು.

ಮದ್ದೂರಿನ ಪ್ರಮುಖ ರಸ್ತೆಗಳಲ್ಲಿ ತೆರೆದ ವಾಹನದಲ್ಲಿ ದಾರಿಯುದ್ದಕ್ಕೂ ಜನಸಾಗರದ ಮಧ್ಯೆ ಕದಲೂರು ಉದಯ್ ಅವರಿಗೆ ಬೃಹತ್ ಹಾರ ಹಾಗೂ ಸೇಬಿನ ಹಾರ ಹಾಕಿ ಹೂ ಮಳೆಗೈದ ಅವರ ಅಭಿಮಾನಿಗಳು ಸೋಮನಹಳ್ಳಿಯ ತಿಮ್ಮದಾಸ್ ಹೋಟೆಲ್ ಆವರಣದಲ್ಲಿ ಹಾಕಲಾಗಿದ್ದ ಬೃಹತ್ ವೇದಿಕೆಗೆ ಕರೆತಂದರು.ಅಭಿಮಾನಿಗಳ ಹಾಗೂ ಮದ್ದೂರು ಕ್ಷೇತ್ರದ ಜನರ ಅಭಿಮಾನದ ಹೊಳೆಯಲ್ಲಿ ಮಿಂದೆದ್ದ ಉದಯ್ ಭಾವುಕರಾದರು.

ತಿಮ್ಮದಾಸ್ ಹೋಟೆಲ್ ಬಳಿ ಭವ್ಯವಾದ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಬೃಹತ್ ಪೆಂಡಾಲಿನಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಜನತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಣ್ತುಂಬಿಕೊಂಡರು.

ಸ್ವಾಮೀಜಿಗಳ ಆಶೀರ್ವಾದ

ಶ್ರೀ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮಿಗಳು, ಶ್ರೀ ಕ್ಷೇತ್ರ ಕಾಗಿನೆಲೆ ಮಠದ ಪೀಠಾಧ್ಯಕ್ಷ ನಿರಂಜನಂದಾ ಮಹಾ ಸ್ವಾಮಿಗಳು, ಮೈಸೂರು ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನ ಪ್ರಕಾಶ್ ಮಹಾ ಸ್ವಾಮಿಗಳು ,ರೇಣುಕಾನಂದ ಸ್ವಾಮಿಗಳು ಸಾನಿಧ್ಯ ವಹಿಸಿ ಭತ್ತದ ರಾಶಿಗೆ ಭತ್ತವನ್ನೇರುವುದರ ಮೂಲಕ ಕಾರ್ಯಕ್ರಮಕ್ಕೆ ಆಶೀರ್ವದಿಸಿದರು.ಭತ್ತದ ಒಕ್ಕಣೆಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನ ಸ್ವಾಮೀಜಿಗಳು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಮಾತನಾಡಿ, ಸಮಾಜದಲ್ಲಿ ಹಣವಂತರು ಇರುತ್ತಾರೆ. ಆದರೆ ಸಾಮಾಜಿಕ ಸೇವಾ ಮನೋಭಾವ ಇರುವ ವ್ಯಕ್ತಿಗಳು ಹಾಗೂ ಸಮಾಜದಲ್ಲಿ ಸಹಕಾರ ಮನೋಭಾವಯುಳ್ಳ ವ್ಯಕ್ತಿಗಳು ಸಿಗುವುದು ಅತಿ ವಿರಳ.

ಸಮಾಜ ಸೇವೆ ಮೂಲಕ ಸಮಾಜದ ಹಾಗೂ ಬಡವರ ಧ್ವನಿಯಾಗುತ್ತಿರುವ ಕದಲೂರು ಉದಯ್ ರವರ ಸೇವಾಕಾರ್ಯ ಶ್ಲಾಘನೀಯ. ಇನ್ನು ಹಲವಾರು ಜನಪರ ಕೆಲಸಗಳಲ್ಲಿ ತೊಡಗಿಸಿ ಕೊಳ್ಳಲಿ ಎಂದು ಆಶೀರ್ವದಿಸಿದರು.

ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಉದಯ್ ಮಾತನಾಡಿ, ನಾನು ಸಹ ಬಾಲ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಕಷ್ಟ ಸುಖಗಳನ್ನು ಅನುಭವಿಸಿ ಜೀವನೋಪಾಯಕ್ಕಾಗಿ ನಗರ ಪ್ರದೇಶಕ್ಕೆ ಹೋಗಿ ಅಲ್ಲಿ ಸಂಪಾದನೆ ಮಾಡಿ ನನ್ನ ತವರು ಮದ್ದೂರು ತಾಲೂಕಿನ ಜನತೆಗೆ ಸಮಾಜ ಸೇವೆ ಮಾಡುವ ಸಂಕಲ್ಪದಿಂದ ಬಂದಿದ್ದೇನೆ. ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತೇನೆ. ತಾಲೂಕಿನ ಜನತೆಯ ಯಾವುದೇ ಕಷ್ಟ ಇದ್ದರೂ ನನ್ನ ಮನೆ, ಮನಸ್ಸು ಯಾವಾಗಲೂ ತೆರೆದಿರುತ್ತದೆ ಎಂದರು.

ಇಷ್ಟೊಂದು ಜನ ಸೇರಿರುವುದು ನನಗೆ ಮತ್ತಷ್ಟು ಧೈರ್ಯ ತಂದಿದೆ. ನಿಮ್ಮ ಸೇವೆ ಮಾಡುವ ಅವಕಾಶ ಕೊಡಿ ಎಂದರು.

ಉದಯ್ ಅವರ ಪತ್ನಿ ವಿನುತಾ ಉದಯ್ ಮಾತನಾಡಿ, ನನ್ನ ಪತಿ ಈ ರೀತಿ ಸಮಾಜ ಸೇವೆ ಮಾಡುತ್ತಿರುವುದು ನನಗೆ ಸಂತಸ ತಂದಿದೆ.ಈ ಬೃಹತ್ ವೇದಿಕೆಯಲ್ಲಿ ಇಷ್ಟೊಂದು ಜನ ಸಾಗರ ಸೇರುತ್ತದೆ ಎಂದು ನಾನು ಕನಸಿನಲ್ಲೂ ಅಂದು ಕೊಂಡಿರಲಿಲ್ಲ. ಕ್ಷೇತ್ರದ ಜನರು ಅವರ ಮೇಲಿಟ್ಟಿರುವ ಅಭಿಮಾನಕ್ಕೆ ನಮ್ಮ ಕುಟುಂಬ ಚಿರ ಋಣಿಯಾಗಿರುತ್ತೆವೆ ಎಂದು ಭಾವುಕರಾದರು.

ನಿವೃತ್ತ ಪ್ರಾಂಶುಪಾಲ ಕೃಷ್ಣ ರವರು ಮಾತನಾಡಿ, ಇತಿಹಾಸ ತಿಳಿದವನು ಮಾತ್ರ ಇತಿಹಾಸ ಸೃಷ್ಟಿಸಬಲ್ಲ ಅನ್ನುವ ಹಾಗೆ ಮದ್ದೂರು ಜನರ ನಾಡಿ ಮಿಡಿತ ಗೊತ್ತಿದ್ದ ಉದಯ್ ಅವರು ಹಿಂದೆಂದಿಗೂ ಯಾರೂ ಕೂಡ ಮಾಡಿರದ ರೀತಿ ಎಲ್ಲಾ ವಿಷಯದಲ್ಲೂ ದಾಖಲೆ ಸೃಷ್ಟಿಸಿದ್ದಾರೆ.ಅವರು ವ್ಯಕ್ತಿ ಅಲ್ಲ ಒಂದು ಶಕ್ತಿ ಎಂಬುದಕ್ಕೆ ಇಲ್ಲಿ ನೆರದಿರುವ ಜನಸ್ತೋಮವೇ ಸಾಕ್ಷಿ.ಇಂತಹವರು ನಮ್ಮ ಊರಿನ ಮಗ ಎಂದು ಹೇಳಿಕೊಳ್ಳಲು ತುಂಬಾ ಹೆಮ್ಮೆ ಎನಿಸುತ್ತದೆ ಎಂದು ಬಣ್ಣಿಸಿದರು.

ದಾಖಲೆಯ ರಕ್ತದಾನ

ಕಾರ್ಯಕ್ರಮದಲ್ಲಿ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು, ಸುಮಾರು 1964 ಯೂನಿಟ್ ರಕ್ತ ಸಂಗ್ರಹಿಸಲಾಯಿತು.ಉದಯ್ ಅವರ ಸಹಸ್ರಾರು ಅಭಿಮಾನಿಗಳು ರಕ್ತದಾನ ಮಾಡುವ ಮೂಲಕ ದಾಖಲೆ ನಿರ್ಮಿಸಿದರು.

ಆಹಾರ ಕಿಟ್-ಸೀರೆ ವಿತರಣೆ

ಕಾರ್ಮಿಕರು,ಆಟೋ ಟಾಕ್ಸಿ ಚಾಲಕರು,ಆಶಾ ಕಾರ್ಯಕರ್ತೆಯರು,ಅಂಗನವಾಡಿ ,ಅಕ್ಷರ ದಾಸೋಹ ಕಾರ್ಯಕರ್ತರು ಹಾಗೂ ಅಸಂಘಟಿತ ಕಾರ್ಮಿಕರು ಸೇರಿದಂತೆ ಸುಮಾರು 15 ಸಾವಿರ ಜನತೆಗೆ ಆಹಾರ ಕಿಟ್ ಗಳನ್ನು ಹಾಗೂ 10 ಸಾವಿರ ಜನತೆಗೆ ಸೀರೆಗಳನ್ನು ವಿತರಿಸಲಾಯಿತು. ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಅಭಿಮಾನಪೂರ್ವಕವಾಗಿ ಗೌರವಿಸಲಾಯಿತು.

ವಿಜಯ್ ಪ್ರಕಾಶ್ ಗಾಯನ

ಕನ್ನಡ ಚಿತ್ರರಂಗದ ಖ್ಯಾತ ಹಿನ್ನಲೆ ಗಾಯಕ ವಿಜಯ್ ಪ್ರಕಾಶ್,ಶಮಿತ ಮಲ್ನಾಡ್ ತಂಡದವರಿಂದ ನಡೆದ ಸಂಗೀತ ಕಾರ್ಯಕ್ರಮ ನೆರೆದಿದ್ದ ಜನರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಕಿರುತರೆಯ ಖ್ಯಾತ ನಿರೂಪಕಿ ಅನುಶ್ರೀ ಕಾರ್ಯಕ್ರಮವನ್ನು ನಿರೂಪಿಸಿ ಕಾರ್ಯಕ್ರಮದಲ್ಲಿ ನೆರೆದಿದ್ದ ಭಾರಿ ಜನಸ್ತೋಮವನ್ನು ರಂಜಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಟ್ರಸ್ಟಿಗಳಾದ ಕದಲೂರು ರವಿ ,ಸಿಪಾಯಿ ಶ್ರೀನಿವಾಸ್,
ದಿನೇಶ್ ಸೇರಿದಂತೆ ನೂರಾರು ಉದಯ್ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!