Wednesday, September 11, 2024

ಪ್ರಾಯೋಗಿಕ ಆವೃತ್ತಿ

ಶರಣರ ಕಗ್ಗೊಲೆ ಮಾಡಿ ವಚನಕಟ್ಟುಗಳ ಸುಟ್ಟವರ ಸಂತತಿಯಿಂದ ವಚನ ದರ್ಶನ ಅಭಿಯಾನ!

ಡಾ.ಜೆ.ಎಸ್.ಪಾಟೀಲ್

ಕಳೆದ ಒಂದು ತಿಂಗಳಿಂದ ಮನುವಾದಿ ವಿಕೃತ ಮನಸ್ಥಿತಿಗಳು ವಚನ ದರ್ಶನ ಎನ್ನುವ ಪುಸ್ತಕವೊಂದನ್ನು ಬರೆದು ಕರ್ನಾಟಕದ ವಿವಿಧ ನಗರಗಳಲ್ಲಿ ಅದರ ಪ್ರಚಾರ ಅಭಿಯಾನ ಮಾಡುತ್ತಿವೆ. ಕಾಲಕಾಲಕ್ಕೆ ಸನಾತನಿ ವಿಕೃತಿಗಳಿಗೆ ಸವಾಲಾಗಿ ಕಾಡಿದ ಬಂಡಾಯದ ಚಳವಳಿಗಳನ್ನು ಭಕ್ತಿಯ ಚಳವಳಿಯಾಗಿ ಬಿಂಬಿಸುವ ವೈದಿಕತೆಯ ಕುಕೃತ್ಯ  ಹಾಗು ಹುನ್ನಾರಗಳ ಯತ್ನ ಹೊಸದೇನಲ್ಲ.

ಇಲ್ಲಿ ಬಸವದ್ರೋಹಿ ವೈದಿಕರೊಂದಿಗೆ ಬಸವದ್ರೋಹಿ ಆಗಮಿಕ ವೀರಶೈವ ಶಕ್ತಿಗಳೂ ಕೈಜೋಡಿಸಿವೆ. ಆ ಪುಸ್ತಕದಲ್ಲಿ ಬಸವಣ್ಣನವರನ್ನು ಸನಾತನ ಸಂಸ್ಕೃತಿಯ ಚಿಂತಕ ಎನ್ನುವಂತೆ ಚಿತ್ರಿಸುವ ವ್ಯರ್ಥ, ವಿಕೃತ ಪ್ರಯತ್ನ ಮಾಡಲಾಗಿದೆ. ಆ ಇಡೀ ಸಂಪಾದನಾ ಕಸದ ರಾಶಿಯಲ್ಲಿ ಶರಣ ದರ್ಶನದ ರಸ ಎಲ್ಲೂ ಕಾಣಸಿಗುವುದಿಲ್ಲ. ಏಕೆಂದರೆ ಅಲ್ಲಿ ಲೇಖನಗಳನ್ನು ಬರೆದಿರುವ ಲೇಖಕರೆಲ್ಲರೂ ವಚನ ಚಳವಳಿ ಮತ್ತು ಬಸವಣ್ಣನವರ ಬಂಡಾಯದ ಕುರಿತು ಪೂರ್ವಾಗ್ರಹ ಹೊಂದಿರುವ ಬಲಪಂಥೀಯ ಜೀವವಿರೋಧಿ ಹಿನ್ನೆಲೆಯರು. ಪುಸ್ತಕ ಬಿಡುಗಡೆಯ ನೆಪದಲ್ಲಿ ಆರಂಭಿಸಿದ ಅಭಿಯಾನದಲ್ಲಿ ಭಾಗವಹಿಸುತ್ತಿರುವವರು ಮತ್ತು ಆ ಪುಸ್ತಕದ ಕುರಿತು ಪತ್ರಿಕೆಗಳಲ್ಲಿ ಬರೆಯುತ್ತಿರುವವರೆಲ್ಲರ ಹಿನ್ನೆಲೆಯೂ ಅದೇ ಆಗಿದೆ ಎಂದು ಬೇರೆ ಹೇಳುವ ಅಗತ್ಯವಿಲ್ಲ.

ಶರಣರಕಗ್ಗೊಲೆ ಮಾಡಿˌ ವಚನಕಟ್ಟುಗಳ ಸುಟ್ಟವರ ಸಂತತಿಯಿಂದ ವಚನ ದರ್ಶನ ಅಭಿಯಾನ ನಡೆಯುತ್ತಿರುವುದು ಒಂದು ಕುಚೋದ್ಯದ ಸಂಗತಿ. ಸನಾತನಿಗಳು ಯಾವ ಸಿದ್ಧಾಂತಕ್ಕೆ ಹೆಚ್ಚು ಹೆದರುತ್ತಾರೋ ಅದೇ ಸಿದ್ಧಾಂತವನ್ನು ತಿರುಚಿ ಹೆಚ್ಚು ಪ್ರಚಾರ ಮಾಡುವುದು ಹಳೆಯ ಸಂಗತಿ. ಅದಕ್ಕಾಗಿ ಅವರು ಕಾಲಾಳುಗಳನ್ನಾಗಿ ಬಳಸಿಕೊಳ್ಳುವುದು ಅದೇ ಸಿದ್ಧಾಂತಕ್ಕೆ ಸೇರಿದ ಸ್ವಾರ್ಥಿ, ಸ್ವಾಭಿಮಾನಹೀನ ಗುಲಾಮ ಮನಸ್ಥಿತಿಗಳನ್ನು. ದ್ರಾವಿಡ ಶಿವನಿಗೆ ಜನಿವಾರ ತೊಡಿಸಿದ್ದು ಮತ್ತು ಬುದ್ದನನ್ನು ವಿಷ್ಣುವಿನ ಕಾಲ್ಪನಿಕ ಅವತಾರಕ್ಕೆ ಸಿಲುಕಿಸಿದ್ದು ಸನಾತನಿಗಳಿಗಿರುವ ಜೀವಪರ ಸಿದ್ಧಾಂತಗಳ ಕುರಿತ ಭಯದಿಂದ.

ಬಸವಣ್ಣನವರು ಕಲ್ಯಾಣದಲ್ಲಿ ಆರಂಭಿಸಿದ ವಚನ ಚಳವಳಿಯು ಒಂದು ಭಕ್ತಿ ಚಳವಳಿ ಮತ್ತು ಅದರ ಉದ್ದೇಶ ಸಾಧಕನ ಆತ್ಮೋನ್ನತಿ ಎಂದು ಪ್ರತಿಪಾದಿಸುವುದೇ ಒಂದು ಮಹಾನ್ ಷಡ್ಯಂತ್ರ. ಜೀವವಿರೋಧಿ ಬಲಪಂಥಿಯ ವಿದ್ವಂಸಕರು ಕೆಲವು ಆಗಮಿಕ ವೀರಶೈವ ಆರಾಧ್ಯರನ್ನು ಮುಂದಿಟ್ಟುಕೊಂಡು ವಚನ ಚಳವಳಿ ಒಂದು ಅಧ್ಯಾತ್ಮ ಅಥವಾ ಭಕ್ತಿ ಚಳವಳಿ ಎಂದು ಸಾಧಿಸಲು ಹೆಣಗಾಡುತ್ತಿದ್ದಾರೆ. ತಮಿಳುನಾಡಿನಲ್ಲಿ ಪುರಾತನರು/ನಾಯನ್ಮಾರರು ಆರಂಭಿಸಿದ ಚಳವಳಿಯನ್ನು ಭಕ್ತಿ ಚಳವಳಿ ಎಂದು ಈಗಾಗಲೆ ಬಿಂಬಿಸಿರುವ ಸನಾತನಿಗಳು ವಚನ ಚಳವಳಿ ಕೂಡ ಅದೇ ಮಾದರಿಯ ಭಕ್ತಿ ಚಳವಳಿ ಎನ್ನುವ ಮುಖೇನ ಆ ಚಳವಳಿ ಪ್ರತಿಪಾದಿಸಿರುವ ಅವೈದಿಕ ಸಿದ್ಧಾಂತವನ್ನು ನಗಣ್ಯಗೊಳಿಸಲು ಹವಣಿಸುತ್ತಿವೆ. ಪುರಾತನರ ಚಳವಳಿಯು ವಿಷ್ಣುವಿಗೆ ಪರ್ಯಾಯವಾಗಿ ದ್ರಾವಿಡ ಶಿವ ಪಾರಮ್ಯವನ್ನು ಮೆರೆಸಲು ಹಾಗು ವಿದೇಶಿ ಆರ್ಯ ಸಂಸ್ಕೃತಿಗೆ ವಿರುದ್ಧವಾಗಿ ದ್ರಾವಿಡ ಶಿವ ಸಂಸ್ಕೃತಿಯನ್ನು ಪ್ರಚುರಪಡಿಸಲು ಹೆಣೆದ ಚಳವಳಿಯಾಗಿತ್ತು.

ವಚನ ಚಳವಳಿಯು ಒಂದು ಸರ್ವಾಂಗೀಣ ಚಳವಳಿಯಾಗಿತ್ತು ಎನ್ನುವ ಡಾ. ಎಂ. ಎಂ. ಕಲಬುರ್ಗಿಯವರುˌ ಶರಣರ ಮೇಲೆ ಪ್ರಭಾವ ಬೀರಿದ್ದು ತಮಿಳುನಾಡಿನ ಪುರಾತನರು ಎಂದು ಸ್ಪಷ್ಟವಾಗಿ ಬರೆದಿದ್ದಾರೆ. ಸನಾತನಿಗಳು ಹಾಗು ವೀರಶೈವ ಆಗಮಿಕರು ವಚನಗಳು ವೇದ ಆಗಮಗಳ ಮೂಲದಿಂದ ರೂಪಿತವಾಗಿವೆ ಎಂದು ಪ್ರಲಾಪಿಸುತ್ತಿದ್ದಾರೆ. ಕೆಲವು ಪ್ರಕ್ಷುಬ್ಧ ಹಾಗು ಖೊಟ್ಟಿ ವಚನಗಳನ್ನು ಆಗಮಗಳಿಗೆ ಸಮೀಕರಿಸಿ ಶರಣ ತತ್ವವನ್ನು ವೈದಿಕೀಕರಣಗೊಳಿಸಿ ಒಂದು ಕಲ್ಪಿತ ವಾದವನ್ನು ಮುಂದಿಡುವ ವಿಫಲ ಪ್ರಯತ್ನ ವೈದಿಕ/ಆಗಮಿಕ ಶಕ್ತಿಗಳು ಮಾಡುತ್ತಿವೆ. ಶರಣರ ವಿಚಾರಗಳು ಯಾವುದೇ ವೈದಿಕ ಹಾಗು ಸಂಸ್ಕೃತ ಸಾಹಿತ್ಯದಿಂದ ಪ್ರೇರಣೆ ಪಡೆಯಲಿಲ್ಲ. ವಚನಗಳಲ್ಲಿನ ತತ್ವ ಸಿದ್ಧಾಂತಗಳು ಸ್ವಲ್ಪ ಮಟ್ಟಿಗೆ ತಮಿಳಿನ ಪುರಾತನರು ಮತ್ತು ಜಾತ್ಯತೀತವಾಗಿದ್ದ ಪ್ರಾಚೀನ ನಾಥ ಪಂಥೀಯ ಸಿದ್ಧಾಂತಗಳಿಂದ ಪ್ರೇರೇಪಿತವಾಗಿವೆ.

ಹತ್ತನೇ ಶತಮಾನದ ಸುತ್ತಮುತ್ತ ಆರಂಭಗೊಂಡಿದ್ದ ತಮಿಳುನಾಡಿನ 63 ಶೈವ ಪುರಾತನರಲ್ಲಿ ಅನೇಕರು ಹಿಂದುಳಿದ ಮತ್ತು ದಲಿತ ಸಮುದಾಯದವರಾಗಿದ್ದು ಅವರು ವೈದಿಕತೆಗೆ ವಿರುದ್ಧವಾಗಿ ತಮಿಳು ಶೈವ ಪರಂಪರೆಯನ್ನು ಬೆಳೆಸಿದರು ಎನ್ನುತ್ತಾರೆ ಡಾ. ಕಲಬುರ್ಗಿಯವರು. ತಮಿಳು ಪುರಾತನರು ರಚಿಸಿದ ‘ತೆವಾರಂ’ ಎಂಬ ಹೆಸರಿನ ತಮಿಳು ಸಾಹಿತ್ಯವನ್ನು ತಮಿಳು ವೈಷ್ಣವ ಆಚಾರ್ಯರು ಉಪೇಕ್ಷಿಸಿ ಸಂಸ್ಕೃತದಲ್ಲಿ ಆಗಮ ಆಧಾರಿತ ಸಾಹಿತ್ಯ ಬೆಳೆಸಿದರಂತೆ. ಅನೇಕ ಶಾಸನಗಳ ಪ್ರಕಾರ ಬಸವವಾದಿ ಶಿವಶರಣರು ತಮ್ಮ ಅನೇಕ ವಚನಗಳಲ್ಲಿ ಪುರಾತನರನ್ನು ಸ್ಮರಿಸುತ್ತಾ ಆಚಾರ್ಯರ ಆಗಮನಿಷ್ಠ ಸಂಸ್ಕೃತ ಸಾಹಿತ್ಯವನ್ನು ಮನ್ನಿಸದೆ ಅದರ ಬದಲಿಗೆ ತಮಿಳು ಪುರಾತನರ ದೇಶೀ ಸಾಹಿತ್ಯದಿಂದ ಪ್ರಭಾವಿತರಾಗಿದ್ದರು ಎನ್ನುತ್ತಾರೆ ಡಾ. ಕಲಬುರ್ಗಿಯವರು. ಅರ್ಜುನವಾಡ ಶಾಸನದಲ್ಲಿ ಬಸವಣ್ಣನವರ ವಂಶಸ್ಥ ಹಾಲ ಬಸವಿದೇವನು ಅತ್ಯಂತ ಭಕ್ತಿಯಿಂದ ಪುರಾತನರನ್ನು ಸ್ಮರಿಸಿರುವ ಕುರಿತು ಅವರು ಉಲ್ಲೇಖಿಸಿದ್ದಾರೆ.

ವಚನ ಚಳವಳಿಯಲ್ಲಿ ಭಕ್ತಿ/ಅಧ್ಯಾತ್ಮ ಅಥವಾ ಅನುಭಾವವು ಕೇವಲ ಒಂದು ಆಕರ್ಷಕ ಅಂಶವಾಗಿದ್ದು ಅದು ತಮಿಳು ಪುರಾತನರಿಂದ ಪ್ರಭಾವಿಸಲ್ಪಟ್ಟಿತ್ತೇ ಹೊರತು ವೈದಿಕರ ವೇದ-ಆಗಮ ಅಥವಾ ಉಪನಿಷತ್ತುಗಳಿಂದಲ್ಲ. ವಚನ ಚಳವಳಿಯು ಭಕ್ತಿ ಚಳವಳಿಯೇ ಆಗಿದ್ದರೆ ಅದು ವೈದಿಕರ ಕೆಂಗಣ್ಣಿಗೆ ಗುರಿಯಾಗಿ ರತ್ತಪಾತದಲ್ಲಿ ಕೊನೆಯಾಯಿತೇಕೆ? ಹಾಗಾಗಿ ಬಸವಣ್ಣನವರು ಆರಂಭಿಸಿದ ವಚನ ಚಳವಳಿಯು ಸಂಪೂರ್ಣವಾಗಿ ಒಂದು ಸರ್ವಾಂಗೀಣ ಚಳವಳಿಯಾಗಿತ್ತು. ವಚನ ಚಳವಳಿಯಲ್ಲಿ ಭಕ್ತಿಯನ್ನು ಒಂದು ಕಾರ್ಯತಂತ್ರದ ಭಾಗವಾಗಿ ಬಳಸಿ ದೇವರು ಮತ್ತು ಧರ್ಮವನ್ನು ವೈದಿಕ ಮಧ್ಯವರ್ತಿಗಳಿಂದ ಮುಕ್ತಗೊಳಿಸಲಾಯಿತು. ಬಸವಣ್ಣನವರು ವೈದಿಕರ ಢಾಂಬಿಕತೆಯನ್ನು “ಭಕ್ತಿಯೆಂಬುದು ತೋರುಂಬ ಲಾಭ” ಎಂದು ವಿಡಂಬಿಸಿರುವುದು ಅದೆ ನೆಲೆಯಲ್ಲಿ. ಹಾಗಾಗಿ ವಚನಗಳನ್ನು ವೈದಿಕ ವಿಕೃತ ವ್ಯವಸ್ಥೆಯ ವಿರುದ್ಧದ ಬಂಡಾಯದ ನೆಲೆಯಲ್ಲಿ ಓದಬೇಕೆ ಹೊರತು ವಚನ ದರ್ಶನದ ರೂವಾರಿಗಳ ಪ್ರಕಾರ ಮನುವಾದದ ಕನ್ನಡಕ ಹಾಕಿಕೊಂಡಲ್ಲ.

ಲೌಕಿಕ ಬದುಕಿನಲ್ಲಿ ದೇವರು ಹಾಗೂ ಧರ್ಮಗಳು ವ್ಯಕ್ತಿಯ ಖಾಸಗಿ ನಂಬಿಕೆಗಳು. ಅಧ್ಯಾತ್ಮˌಭಕ್ತಿ ಅಥವಾ ಅನುಭಾವಗಳು ವ್ಯಕ್ತಿಯ ತೀರ ಖಾಸಗಿ ಆಚರಣೆಗಳು. ಬಸವಯುಗದಲ್ಲಿ ಸನಾತನಿಗಳು ದೇವರು ಮತ್ತು ಧರ್ಮವನ್ನು ವ್ಯಾಪಾರದ ಸರಕಾಗಿಸಿಕೊಂಡು ಹೊಟ್ಟೆ ಹೊರೆಯುತ್ತಿದ್ದರು ಹಾಗು ಭಕ್ತಿ ಮತ್ತು ಅಧ್ಯಾತ್ಮಗಳು ರಸ್ತೆಯ ಮೇಲೆ ಮಾರಲ್ಪಡುವ ವಸ್ತುಗಳಾಗಿಸಿದ್ದರು. ದೇವಾಲಯಗಳಂತೂ ದೇವರುˌ ಧರ್ಮˌ ಸಂಸ್ಕೃತಿ ಹಾಗೂ ಆಚರಣೆಗಳ ಹೆಸರಿನಲ್ಲಿ ನಡೆಯುವ ದೊಡ್ಡ ದೊಡ್ಡ ವ್ಯಾಪಾರˌವ್ಯಭಿಚಾರˌಅನಾಚಾರಗಳ ಕೇಂದ್ರಗಳಾಗಿದ್ದವು. ಮೇಲ್ವರ್ಗದವರು, ಉಳ್ಳವರ ಸಹಾಯದಿಂದ ಪುರೋಹಿತ ಪುಂಡರು ತಳವರ್ಗದವರು ಮತ್ತು ಬಡವರನ್ನು ಅಮಾನುಷವಾಗಿ ಶೋಷಿಸುತ್ತಿದ್ದರು. ಭಾರತಿಯರು ತೀರ ಭಾವುಕರು ಹಾಗು ಹುಟ್ಟು ಆಸ್ತಿಕರು. ಅವರಲ್ಲಿ ದೇವರು ಮತ್ತು ಧರ್ಮದ ಕುರಿತು ಆಳವಾಗಿ ಬೇರೂರಿಸಲ್ಪಟ್ಟಿದ್ದ ಭಯˌ ಮೌಢ್ಯಗಳು ಹಾಗು ಅಂಧಶ್ರದ್ಧೆಗಳಿಂದ ಅವರನ್ನು ಮುಕ್ತಗೊಳಿಸುವುದು ಅತ್ಯಂತ ಕಠಿಣ ಕೆಲಸವಾಗಿತ್ತು. ಆ ಮಟ್ಟಿಗೆ ಅವರನ್ನು ವೈದಿಕರು ಮಿದುಳು ಮಜ್ಜನ ಮಾಡಿದ್ದರು. ಅದರಿಂದ ಜನರು ತಮಗರಿವಿಲ್ಲದಂತೆ ಶೋಷಣೆಗೆ ಒಳಗಾಗುತ್ತಿದ್ದರು.

ದೇವರು ಮತ್ತು ಧರ್ಮದ ಅಸ್ತಿತ್ವವನ್ನು ಹಲವು ಮಾರ್ಪಾಡುಗಳೊಂದಿಗೆ ಉಳಿಸಿಕೊಂಡು ಅವುಗಳಿಗೆ ವೈಜ್ಞಾನಿಕ, ವೈಚಾರಿಕ ಸ್ವರೂಪವನ್ನು ನೀಡುವ ಮೂಲಕ ಬಸವಣ್ಣನವರು ಭಕ್ತಿಯನ್ನು ತಮ್ಮ ಚಳವಳಿಯ ಒಂದು ಆಕರ್ಷಕ ಕಾರ್ಯತಂತ್ರವಾಗಿ, ಪ್ರಯೋಗಾತ್ಮಕವಾಗಿ ಬಳಸಿಕೊಂಡರು. ಹಾಗೆಯೇ ಭಕ್ತಿ ಅಥವಾ ಅಧ್ಯಾತ್ಮವನ್ನು ಅವರು ಅನುಭಾವ ಎನ್ನುವ ಹೊಸ ಪಾರಿಭಾಷಿಕ ಶಬ್ದದಿಂದ ಕರೆದರು. ಅನುಭಾವವು ಕೇವಲ ಒಂದು ಪರ್ಯಾಯ ಶಬ್ದವಾಗಿರದೇ ಅದು ಸಾಮಾನ್ಯ ವೈದಿಕ ಪ್ರಣೀತ ಭಕ್ತಿ ಹಾಗು ಅಧ್ಯಾತ್ಮಕ್ಕಿಂತ ವಿಭಿನ್ನ ಅರ್ಥವ್ಯಾಪ್ತಿ ಹೊಂದಿದ್ದು ಅದನ್ನು ಕೇವಲ ಸಾಧಕನೊಬ್ಬನ ವೈಯಕ್ತಿಕ ಸಾಧನೆ ಅಥವಾ ಆತ್ಮೋನ್ನತಿಗೆ ಸಿಮಿತಗೊಳಿಸದೆ ಸಮಾಜೋನ್ನತಿಯ ಸೋಪಾನವಾಗಿ ವಿನೂತನ ರೀತಿಯಲ್ಲಿ ಬಳಸಲ್ಪಟ್ಟಿತು. ಹಾಗಾಗಿ ಭಕ್ತಿಯನ್ನು ಒಬ್ಬ ವ್ಯಕ್ತಿಯ ವೈಯಕ್ತಿಕ ಅಭ್ಯುದಯದ ಜೊತೆಜೊತೆಗೆ ಸಮಗ್ರ ಸಮಾಜದ ಒಳಿತಿನ ಸಾಧನವನ್ನಾಗಿ ವಚನ ಚಳವಳಿ ಬಳಸಿಕೊಂಡಿದೆ. ಸಮಾಜಕ್ಕೆ ಕಿಂಚಿತ್ ಪ್ರಯೋಜನವಿಲ್ಲದ ವೈದಿಕ ಪ್ರಣೀತ ವ್ಯಕ್ತಿಗತ ಭಕ್ತಿಯನ್ನು ಅತ್ಯಂತ ತೀಕ್ಷ್ಣ ಪದಗಳಲ್ಲಿ ಶರಣರು ವಿಡಂಬಿಸಿದ್ದಾರೆ.

ಬಸವಪೂರ್ವದಲ್ಲಿ ಭಕ್ತಿಗಾಗಿಯೆ ಒಂದು ಚಳವಳಿ ಘಟಿಸಿದ ಉದಾಹರಣೆ ಕಾಣಸಿಗುವುದಿಲ್ಲ. ಏಕೆಂದರೆ ಭಕ್ತಿ ಯಾವತ್ತಿಗೂ ಒಂದು ಚಳವಳಿಯಾಗಿ ಗುರುತಿಸಿಕೊಳ್ಳುವುದಿಲ್ಲ. ಹಾಗಾಗಿ ವಚನ ಚಳವಳಿಯನ್ನು ಒಂದು ಭಕ್ತಿ ಚಳವಳಿ ಎಂದು ಬಿಂಬಿಸುವುದೇ ಕುಚೋದ್ಯದ ಕೃತ್ಯ. ಬಸವೋತ್ತರ ಯುಗದಲ್ಲಿ ಮಹಾರಾಷ್ಟ್ರದಲ್ಲಿ ಬಸವಣ್ಣನವರ ಪ್ರಭಾವದಿಂದ ಹುಟ್ಟುಪಡೆದ ವಾರಕರಿ ಚಳವಳಿಯನ್ನು ಕೂಡ ಪಟ್ಟಭದ್ರರು ಭಕ್ತಿ ಚಳವಳಿ ಅಂತಲೆ ಬಿಂಬಿಸಿದ್ದಾರೆ. ಕಲ್ಯಾಣದ ಕ್ರಾಂತಿಯು ವೈದಿಕರ ಪ್ರತಿಕ್ರಾಂತಿಯಿಂದ ರಕ್ತಪಾತದಲ್ಲಿ ಕೊನೆಗೊಂಡ ನಂತರದ ಐವತ್ತರಿಂದ ನೂರು ವರ್ಷಗಳ ಅವಧಿಯಲ್ಲಿ ಪಕ್ಕದ ಮಹಾರಾಷ್ಟ್ರದಲ್ಲಿ ಹುಟ್ಟಿದ ನಾಮದೇವ ಎನ್ನುವ ಕ್ರಾಂತಿಕಾರಿಯೊಬ್ಬನ ತಾಯಿಯ ತವರು ಮನೆ ಬಸವಕಲ್ಯಾಣವಾಗಿತ್ತು. ಆತ ಚಿಕ್ಕಂದಿನಲ್ಲಿ ಆಗಾಗ ತನ್ನ ತಾಯಿಯ ತವರು ಮನೆಗೆ ಬಂದುಹೋಗಿ ಮಾಡುತ್ತಿದ್ದಾಗ ಕಲ್ಯಾಣದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ವಚನಕ್ರಾಂತಿಯ ಕುರಿತು ಕುತೂಹಲದಿಂದ ಕೇಳಿ ತಿಳಿದಿದ್ದ. ಅದರಿಂದ ಪ್ರಭಾವಿತನಾಗಿ ಆತ ಮುಂದೆ ಮಹಾರಾಷ್ಟ್ರದಲ್ಲಿ ವಾರಕರಿ ಚಳವಳಿ ಆರಂಭಿಸುತ್ತಾನೆ.

ಮುಂದಿನ ದಿನಮಾನಗಳಲ್ಲಿ ಸಂತ ಜ್ಞಾನದೇವ ವಾರಕರಿ ಚಳವಳಿಯನ್ನು ಸೇರಿಕೊಳ್ಳುತ್ತಾನೆ. ಆದರೆ ಈಗ ಇತಿಹಾಸ ತಿರುಚುಕೋರರು ಬ್ರಾಹ್ಮಣನಾಗಿದ್ದ ಜ್ಞಾನದೇವನೆ ವಾರಕರಿ ಚಳವಳಿಯ ಸ್ಥಾಪಕ ಎಂದು ಪ್ರತಿಪಾದಿಸುತ್ತಿದ್ದಾರೆ. ವಾರಕರಿ ಚಳವಳಿಯು ಭಕ್ತ ಪುಂಡಲೀಕ ಹಾಗು ಪಾಂಡುರಂಗರ ಕಾಲದಲ್ಲಿ ಆರಂಭವಾಗಿರಬಹುದು ಎನ್ನುತ್ತಾರೆ ಕೆಲವು ಸಂಶೋಧಕರು. ಅವರಿಬ್ಬರ ಕಾಲ ಸರಿಯಾಗಿ ತಿಳಿದುಬಂದಿಲ್ಲ. ಆದರೆ ಈ ಚಳವಳಿ ನಾಮದೇವನ ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂದದ್ದಂತೂ ಸತ್ಯ. ನಾಮದೇವ ವೈದಿಕ ಆಚರಣೆಗಳಿಗಿಂತ ವಿಭಿನ್ನವಾದ ಭಾಗವತ ಪಂಥವನ್ನು ಜಾತ್ಯಾತೀತ ನೆಲೆಯಲ್ಲಿ ಕಟ್ಟಿದಾಗ ಮಹಾರಾಷ್ಟ್ರದ ತಳಸಮುದಾಯದ ಜನರು ಆ ಕಡೆ ಆಕರ್ಶಿತರಾಗುತ್ತಾರೆ. ಬ್ರಾಹ್ಮಣರ ಜಾತಿಯತೆˌದೇವರು ಮತ್ತು ಧರ್ಮದ ಹೆಸರಿನಲ್ಲಿನ ಶೋಷಣೆಯ ವಿರುದ್ಧ ಹುಟ್ಟಿಕೊಂಡ ವಾರಕರಿ ಚಳವಳಿ ಶರಣರ ವಚನಗಳ ಮಾದರಿಯಲ್ಲಿ ಅಭಂಗಗಳು ತನ್ನ ಪ್ರಚಾರದ ಮಾಧ್ಯಮವಾಗಿ ಬಳಸುತ್ತದೆ. ಕಲ್ಯಾಣದ ಚಳವಳಿಯು ವೈದಿಕರ ಕ್ರೌರ್ಯಕ್ಕೆ ಬಲಿಯಾಗಿದ್ದ ಸಂಗತಿಯನ್ನು ಕೇಳಿ ತಿಳಿದಿದ್ದ ನಾಮದೇವ ವಾರಕರಿ ಚಳವಳಿಯನ್ನು ಸಾಂಘಿಕವಾಗಿ ರೂಪಿಸದೆ ಬಿಡಿಬಿಡಿಯಾಗಿ ಹಾಗು ಭಕ್ತಿಯ ಮುಖವಾಡದಲ್ಲಿ ರಕ್ಷಣಾತ್ಮವಾಗಿ ರೂಪಿಸುತ್ತಾನೆ.

ಆದರೆ ಇಡೀ ಚಳವಳಿ ಬ್ರಾಹ್ಮಣರ ಧಾರ್ಮಿಕ ಹಾಗು ಸಾಮಾಜಿಕ ಶೋಷಣೆಯ ವಿರುದ್ಧ ಹೋರಾಡುತ್ತದೆ. ವಾರಕರಿ ಚಳವಳಿಯು ಮಹಾರಾಷ್ಟ್ರದಲ್ಲಿ ಒಂದು ಹೊಸ ಧಾರ್ಮಿಕ ಪಂಥವನ್ನು ಹುಟ್ಟುಹಾಕುವ ಮೂಲಕ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಕಾರ್ಯತಂತ್ರ ಮಾಡಿದೆ. ಶಿವಭಕ್ತಿಯ ತಾಣವಾಗಿದ್ದ ಮರಾಠಿಗರ ನೆಲದಲ್ಲಿ ಬ್ರಾಹ್ಮಣರು ಕ್ರಮೇಣವಾಗಿ ವಿಷ್ಣುವನ್ನು ಪ್ರತಿಷ್ಠಾಪಿಸಿದ್ದರು. “ಮೂಲತಃ ಮಹಾರಾಷ್ಟ್ರವು ಶಿವಭಕ್ತಿಯ ತಾಣ. ಶಂಕರನ ದೇಗುಲಗಳಿಲ್ಲದ ಒಂದೇ ಒಂದು ಊರು ಮಹಾರಾಷ್ಟ್ರದಲ್ಲಿ ನೋಡಲು ಸಿಗುವುದಿಲ್ಲ. ಖಂಡೋಬಾˌಮಲ್ಹಾರಿˌಇವೆಲ್ಲವುಗಳು ಶಿವನ ರೂಪಗಳೇ ಆಗಿವೆ. ಮಹಾರಾಷ್ಟ್ರದಲ್ಲಿ ಬಹುತೇಕ ಶಿವಮಂದಿರಗಳೇ ಇವೆ” ಎನ್ನುತ್ತಾರೆ ಭೀಮಾಶಂಕರ ಬಿರಾದಾರ ಅವರು ತಮ್ಮ ಸಂಶೋಧನಾ ಕೃತಿಯಲ್ಲಿ. ಮಹಾರಾಷ್ಟ್ರಿಗರ ಜನಮಾನಸದಲ್ಲಿ ಆಳವಾಗಿ ನೆಲೆಗೊಂಡಿರುವ ವಾರಕರಿ ಪಂಥವು ತನ್ನ ಅಭಂಗಗಳ ಮೂಲಕ ತಳವರ್ಗದ ಎಲ್ಲಾ ಜಾತಿಯ ಜನರನ್ನು ಒಳಗೊಳ್ಳುವಂತೆ ಮಾಡಿದೆ. ವೈದಿಕರ ಭೇದಪ್ರಧಾನ ಆಚರಣೆಗಳನ್ನು ಹುಡಿಗೊಳಿಸಿ ಸಮಾನತೆಯ ಮಂತ್ರವನ್ನು ವಾರಕರಿ ಪಂಥೀಯರು ಬಿತ್ತಿದ್ದಾರೆ.

ಜ್ಞಾನೇಶ್ವರಿ, ಏಕನಾಥೀ ಭಾಗವತ, ತುಕಾರಾಮ ಗಾಥಾ ಇವು ವಾರಕರಿ ಚಳವಳಿಯ ಆಧಾರ ಗ್ರಂಥಗಳಾಗಿದ್ದು ಇದರ ಜೊತೆಗೆ ನಾಮದೇವˌಹಾಗೂ ಸಂತ ತುಕಾರಾಮರು ಬರೆದ ಅಭಂಗಗಳು ಪ್ರಗತಿಪರ ಚಿಂತನೆಗಳನ್ನು ಪ್ರತಿಪಾದಿಸುತ್ತವೆ. ಇಡೀ ವಾರಕರಿ ಚಳವಳಿಯು ವಚನ ಚಳವಳಿಯ ದಟ್ಟ ಪ್ರಭಾವಕ್ಕೆ ಸಿಲುಕಿದ್ದನ್ನು ಗಮನಿಸಬಹುದು. ತುಕಾರಾಮನ ಪ್ರಖರ ವಿಚಾರಗಳಿಂದ ಜನಜಾಗೃತಿ ಹೆಚ್ಚಿದಾಗ ಬೆಚ್ಚಿದ ಸಾಂಪ್ರದಾಯವಾದಿ ಬ್ರಾಹ್ಮಣರು ಆತನನ್ನು ಇಂದ್ರಾಣಿ ನದಿಯಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದು ಶರಣರ ಹತ್ಯೆಯ ಮುಂದುವರಿದ ಭಾಗ. ನಾಲ್ಕು ಸಾವಿರ ವರ್ಷಗಳ ಹಿಂದೆ ಗಂಗಾತೀರದಲ್ಲಿ ಹುಟ್ಟಿದ ಆರ್ಯ-ದ್ರಾವಿಡರ ಸಂಘರ್ಷˌ ಬೌದ್ದ-ಆರ್ಯರ ಕದನ ಹಾಗು ಹನ್ನೆರಡನೆ ಶತಮಾನದಲ್ಲಿ ನಡೆದ ಲಿಂಗಾಯತ ಶರಣರು ಮತ್ತು ಬ್ರಾಹ್ಮಣರ ನಡುವಿನ ಹೋರಾಟ ಮುಂದೆ ಮಹಾರಾಷ್ಟ್ರದಲ್ಲಿ ವಾರಕರಿ ಚಳವಳಿಗೆ ಜನ್ಮ ನೀಡಿತು. ವಾರಕರಿ ಚಳವಳಿಯಿಂದ ಪ್ರಭಾವಿತಗೊಂಡು ಉತ್ತರದಲ್ಲಿ ರವಿದಾಸ ಮತ್ತು ಕಬೀರದಾಸರ ಪ್ರಗತಿಪರ ಚಳವಳಿಯು ಕೊನೆಗೆ ಪಶ್ಚಿಮೋತ್ತರದಲ್ಲಿ ಗುರು ನಾನಕರಿಂದ ಸಿಖ್ ಧರ್ಮ ಚಳವಳಿಯವರೆಗೆ ಸಾಗಿ ಬಂದಿದೆ. ಇಂದಿಗೂ ಸಿಖ್ಖರು ನಾಮದೇವನನ್ನು ವಿಶೇಷವಾಗಿ ಗೌರವಿಸುತ್ತಾರೆ.

ಹಾಗಾಗಿˌಬಲಪಂಥೀಯ ವಿದ್ವಾಂಸಕರು ಪ್ರಸ್ತುತ ಕರ್ನಾಟಕದಲ್ಲಿ ವಚನ ದರ್ಶನ ಎನ್ನುವ ವಿಕೃತ ಪುಸ್ತಕವನ್ನು ರಚಿಸಿ ಅದನ್ನು ಒಂದು ಅಭಿಯಾನದ ರೂಪದಲ್ಲಿ ಪ್ರಚಾರ ಮಾಡುತ್ತಿರುವುದು ಅವರ ಪ್ರಕ್ಷಿಪ್ತ ಹಾಗು ಪ್ರಕ್ಷುಬ್ಧ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಭಾರತದಲ್ಲಿ ಹುಟ್ಟಿದ ಜೈನˌಬುದ್ದˌನಾಥˌಆರೂಢˌಅಚಲˌಅವಧೂತˌಸಿದ್ಧˌಶೂನ್ಯˌಶೈವˌಶರಣ ಈ ದರ್ಶನಗಳೆಲ್ಲವೂ ಸನಾತನ ವೈದಿಕ ವಿಕೃತ ಪರಂಪರೆಯ ವಿರುದ್ಧ ಹುಟ್ಟಿದಂತಹ ಅವೈದಿಕ ಚಳವಳಿಯ ಉತ್ಪನ್ನಗಳು. ಯಾವ ಸಾಂಸ್ಕೃತಿಕ ಹಿನ್ನೆಲೆಯೂ ಇಲ್ಲದ ವಿದೇಶಿ ಸನಾತನ ಮತ ಈ ನೆಲದಲ್ಲಿ ಹುಟ್ಟಿದ ಅವೈದಿಕ ದರ್ಶನಗಳನ್ನೇ ಕಾಲಕಾಲಕ್ಕೆ ಹೈಜಾಕ್ ಮಾಡಿ ಅವು ಸನಾತನ ಸಂಸ್ಕೃತಿಯ ಮುಂದುವರಿಕೆ ಎಂದು ಪ್ರಲಾಪಿಸುವುದು ಸನಾತನಿಗಳ ಬೌದ್ದಿಕ ದಾರಿದ್ರ್ಯವನ್ನು ಸಾಂಕೇತಿಸುತ್ತದೆ. ರಷ್ಯಾದ ಸ್ಲಾವಿಕ್ ಆರ್ಯನ್ನರ ವೇದಗಳನ್ನು ಕದ್ದು ವೇದ ಶಾಸ್ತ್ರಗಳನ್ನು ˌ ಬೌದ್ಧರ ಜಾತಕ ಕತೆಗಳನ್ನು ಕದ್ದು ಮಹಾಕಾವ್ಯ ಹಾಗೂ ಪುರಾಣಗಳನ್ನು ಕಲ್ಪಿಸಿ ಟಂಕಿಸಿದ ಸನಾತನಿಗಳು ಈ ನೆಲಕ್ಕೆ ಬಂದದ್ದು ಬರಿಗೈಯಿಂದ ಎನ್ನುವುದನ್ನು ನಾವು ಮರೆಯಬಾರದು. ಸನಾತನಿಗಳು ಎಷ್ಟೆ ಗಂಟಲು ಹರಿದುಕೊಂಡು ಕೂಗಾಡಿದರೂ ವಚನ ಚಳವಳಿಯು ಸನಾತನಿಗಳ ವಿರುದ್ಧ ಹುಟ್ಟುಪಡೆದ ಬಂಡಾಯ ಚಳವಳಿ ಎನ್ನುವ ಸತ್ಯವನ್ನು ಅಳಿಸಲಾಗದು.

ಉಲ್ಲೇಖ: 1. ‘ತಮಿಳು ಪುರಾತನ ಶೈವ ಪಂಥ – ನಾಥ ಪಂಥ-ಶರಣ ಪಂಥ’: ಡಾ. ಎಂ. ಎಂ. ಕಲಬುರ್ಗಿ; ಮಾರ್ಗ ಸಂಪುಟ – 7. 2. ಸಂತ ತುಕಾರಾಮ ಮತ್ತು ಬಸವೇಶ್ವರರ ಭಕ್ತಿ ಕಾವ್ಯ: ತುಲನಾತ್ಮಕ ಅಧ್ಯಯನˌ ಮರಾಠಿ ಮೂಲ: ಡಾ. ಭೀಮಾಶಂಕರ ಬಿರಾದಾರˌ ಕನ್ನಡಕ್ಕೆ: ಡಾ. ವಿಠ್ಠಲರಾವ್ ಟಿ ಗಾಯಕ್ವಾಡ್. ಪು. 11.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!