Saturday, June 15, 2024

ಪ್ರಾಯೋಗಿಕ ಆವೃತ್ತಿ

‘ಬೆತ್ತಲೆ ಸಂತ’ ಕೃತಿಗೆ ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ

ಬೆಸಗರಹಳ್ಳಿ ರಾಮಣ್ಣ ಅವರ ಎಲ್ಲಾ ಕಥೆಗಳಲ್ಲಿ ಗ್ರಾಮೀಣ ಜೀವನದ ಸೊಗಡು ಪ್ರಾಮು ಖ್ಯತೆ ಪಡೆದಿದ್ದು, ಗ್ರಾಮ ಭಾರತ ಅನಾವರಣ ಗೊಂಡಿದೆ ಎಂದು ನಿವೃತ್ತ ಪ್ರಾಧ್ಯಾಪಕ, ಲೇಖಕ ಡಾ. ಲೋಕೇಶ್ ಅಗಸನಕಟ್ಟೆ ಅಭಿಪ್ರಾಯಪಟ್ಟರು.

ನಗರದ ಅಂಬೇಡ್ಕರ್ ಭವನ ದಲ್ಲಿ ಡಾ.ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ-2021 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗ್ರಾಮ ಭಾರತವನ್ನು ಈ ಹಿಂದಿನ ಲೇಖಕರು ಹಿಡಿದಿಟ್ಟಿರುವ ರೀತಿಗೂ ರಾಮಣ್ಣ ಅವರು ಕಟ್ಟಿ ಕೊಟ್ಟಿರುವ ರೀತಿಗೂ ಅಜಗಜಾಂ ತರ ವ್ಯತ್ಯಾಸವಿದೆ. ರಾಮಣ್ಣನವರ ಗ್ರಾಮ ಜಗತ್ತು ಸೂಕ್ಷವಾದದ್ದಾಗಿದೆ ಎಂದರು.

ಹಳ್ಳಿಯಲ್ಲಿ ಜಾತಿ ಕಾರಣದಿಂದ ಮನುಷ್ಯನನ್ನು ಅವಮಾನಕ್ಕೊಳಪಡಿಸುವ ವ್ಯವಸ್ಥೆಗೆ ವಿರುದ್ಧವಾಗಿದ್ದರು. ದೇಶದ ಎಲ್ಲಾ ಭಾಷೆಯ ಲೇಖಕರ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಎಲ್ಲಾ ಸಿದ್ಧಾಂತದ ಅರಿವನ್ನು ಹೊಂದಿದ್ದರು ಎಂದು ತಿಳಿಸಿದರು.

ಸಮಾಜದಲ್ಲಿ ಕಂಡುಬರುವ ಬಿರುಕನ್ನು ಪ್ರೀತಿಯಿಂದ ಗೆಲ್ಲಬಹುದು ಎಂಬ ವಿಶ್ವಾಸವಿತ್ತು. ಅವರ ಕತೆಗಳಲ್ಲಿ ಈ ಭರವಸೆ ಕಂಡು ಬರುತ್ತದೆ ಎಂದರು.

ರಾಮಣ್ಣ ಕತೆಗಾರನಾಗಿ ಪರಿಹಾರ ಸೂಚಿಸುವುದರ ಜೊತೆಗೆ ನೊಂದವರಿಗೆ ಸದಾ ಕಾಲ ಸ್ಪಂದಿ ಸುವ ಮಾನವೀಯ ಕಾಳಜಿ ಇಟ್ಟು ಕೊಂಡಿದ್ದರು. ಅವರ ಕರುನಾಡು ಬಾ ಬೆಳಕೆ, ಗಾಂಧಿ, ಕಕರನ, ಯುಗಾದಿ ಮುಂತಾದ ಕತೆಗಳಲ್ಲಿ ಈ ಅಂಶ ಕಂಡು ಬರುತ್ತದೆ ಎಂದರು.

ಡಾ.ಬೆಸಗರಹಳ್ಳಿ ರಾಮಣ್ಣ ಟ್ರಸ್ಟ್ ಕಥಾ ಸಂಕಲನ ಪ್ರಶಸ್ತಿ ನೀಡುವುದರ ಜೊತೆಗೆ ರಾಮಣ್ಣನ ವರ ಕತೆಗಳನ್ನು ಓದಿಸಲು ಪ್ರೇರೇಪಿಸುವ ಕೆಲಸ ಮಾಡಿದರೆ ಒಳ್ಳೆಯದು. ಅವರ ಕತೆಯ ಕನ್ನಡಿಯಲ್ಲಿ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು ಎಂದರು.

ರಾಮಣ್ಣ ಯಾವುದೇ ರೀತಿಯ ಸೋಗಲಾಡಿತನ ಇಟ್ಟುಕೊಳ್ಳದ ದಿಟ್ಟ, ನೇರ ವ್ಯಕ್ತಿತ್ವ ಸ್ವಭಾವದ ಲೇಖಕರಾಗಿದ್ದರು. ಕಥಾ ಸಾಹಿತ್ಯದಲ್ಲಿನ ಪ್ರಯೋಗಗಳನ್ನು ತಮ್ಮ ಅನುಭವದೊಂದಿಗೆ ಗಾಢವಾಗಿ ಕಟ್ಟಿಕೊಡುವ ಕೆಲಸ ಮಾಡಿದ್ದಾರೆ ಎಂದು ಬಣ್ಣಿಸಿದರು.

ಸಹಾಯಕ ಪ್ರಾಧ್ಯಪಕ ಹಾಗೂ ವಿಮರ್ಶಕ ಡಾ. ರಂಗನಾಥ ಕಂಟನಕುಂಟೆ ಇಸ್ಮಾಯಿಲ್ ತಳಕಲ್ ಅವರ “ಬೆತ್ತಲೆ ಸಂತ” ಕೃತಿ ಕುರಿತು ಮಾತನಾಡಿ, ಕೇವಲ 8 ಕಥೆಗಳನ್ನು ಹೊಂದಿರುವ ಪುಟ್ಟ ಸಂಕಲನವಾದರೂ ಇದು ಕಟ್ಟಿಕೊಟ್ಟಿರುವ ಸಂದೇಶ ತುಂಬಾ ಪರಿಣಾಮಕಾರಿಯಾಗಿದೆ ಎಂದರು.

ಮೊದಲ ಕಥಾಸಂಕಲನವಾದರೂ ಯಾವುದೇ ವಸ್ತುವನ್ನು ಕಥೆಯಾಗಿಸುವ ಸಂದರ್ಭದಲ್ಲಿ ಇವರ ಸೂಕ್ಷ್ಮ ಕಸುಬುದಾರಿಕೆ ಎದ್ದು ಕಾಣುತ್ತದೆ. ಬಳಸಿರುವ ಭಾಷೆ ತುಂಬಾ ಅಚ್ಚುಕಟ್ಟಾಗಿದೆ. ಭಾಷೆಯ ಲಯ ಕಥೆಗಳ ಯಶಸ್ವಿಗೆ ಪೂರಕವಾಗಿವೆ. ಶಬ್ದಗಳ ದುಂದುವೆಚ್ಚ ಮಾಡಲು ಹೋಗಿಲ್ಲ. ಕಾವ್ಯಾತ್ಮಕ ಭಾಷೆಯಿದೆ ಎಂದು ಹೇಳಿದರು.

ಭಾಷೆಯ ಮೂಲಕ ಬದುಕಿನ ಚಿತ್ರ ಬಿಡಿಸುವ ವಿಚಾರದಲ್ಲಿ ಬಹಳ ಪಳಗಿದ್ದಾರೆ. ಕಥೆಗಳನ್ನು ಓದಿದಾಗ ಇದು ಮೊದಲ ಕಥಾಸಂಕಲನ ಎನ್ನಿಸುವುದಿಲ್ಲ. ಕತೆಯ ಪಾತ್ರಗಳು ಮನದಲ್ಲಿ ಕಾಡಿಸುತ್ತಿರುತ್ತವೆ. ಕಥಾ ಪಾತ್ರಗಳನ್ನು ತುಂಬಾ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಕಥಾ ಸಂಕಲನದಲ್ಲಿರುವ ಬೆತ್ತಲೆ ಸಂತ, ಜಸ್ಟಿಸ್ ಫಾರ್ ದುರ್ಗೆ, ಬೀದಿಗೆ ಬಿದ್ದ ಬೀದಿ, ಬಹಿಷ್ಕಾರ, ಚಾಕಲೇಟ್ ಮುಂತಾದ ಕಥೆಗಳು ಗಮನ ಸೆಳೆಯುತ್ತವೆ ಎಂದರು.

ಇದೇ ಸಂದರ್ಭದಲ್ಲಿ “ಬೆತ್ತಲೆ ಸಂತ” ಕೃತಿಕರ್ತೃ ಇಸ್ಮಾಯಿಲ್ ತಳಕಲ್ ಅವರಿಗೆ ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ. ೨೫ ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಸಮಾರಂಭದ ಅಧ್ಯಕ್ಷತೆಯನ್ನು ಡಾ.ಬೆಸಗರಹಳ್ಳಿ ಪ್ರತಿಷ್ಠಾನದ ಅಧ್ಯಕ್ಷೆ ಹೆಚ್.ಆರ್.ಸುಜಾತ ವಹಿಸಿದ್ದರು. ಪ್ರತಿಷ್ಠಾನದ ಆಜೀವ ಸದಸ್ಯೆ ಡಿ.ಪಿ.ರಾಜಮ್ಮ ರಾಮಣ್ಣ, ಬಳ್ಳಾರಿ ಲೋಹಿಯ ಪ್ರಕಾಶನದ ಚನ್ನಬಸವಣ್ಣ, ರವಿಕಾಂತೇಗೌಡ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!