ಮನುಷ್ಯ ಆರೋಗ್ಯವಾಗಿರಲು ನೀರು, ಗಾಳಿ, ಪೌಷ್ಠಿಕ ಆಹಾರ ಹಾಗೂ ಸ್ವಚ್ಛವಾದ ಪರಿಸರ ಇವುಗಳು ಮುಖ್ಯ.ಬಹು ಜನರು ಇವುಗಳನ್ನು ಪಡೆಯದೆ ಒಂದು ಬಗೆಯ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದು ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಹೇಳಿದರು.
ಶ್ರೀರಂಗಪಟ್ಟಣ ತಾಲ್ಲೂಕಿನ ಕೊಡಿಯಾಲ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ,”ಗ್ರಾಮ ಆರೋಗ್ಯ ಪೌಷ್ಠಿಕ ದಿನ”ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಯಿ ಕಾರ್ಡ್ ಮಹತ್ವ ಹಾಗೂ ಟಿ ಡಿ ಲಸಿಕೆಯ ಬಗ್ಗೆ ತಿಳಿಸಿದ ಅವರು ರಕ್ತ ಹೀನತೆ ಕಡೆಗಣಿಸಬೇಡಿ, ಗರ್ಭಿಣಿಯರು ನಿಗದಿತ ಸಮಯದಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು.ವೈದ್ಯರು ಸೂಚಿಸಿದ ಹಾಗೆ ಕಬ್ಬಿಣಾಂಶ ಮಾತ್ರೆ ಮತ್ತು ಪೋಲಿಕ್ ಮಾತ್ರೆಗಳನ್ನು ತಪ್ಪದೆ ಸೇವಿಸಿ ಎಂದು ಸಲಹೆ ನೀಡಿದರು.
ನಿತ್ಯ ಸೇವಿಸುವ ಆಹಾರದಲ್ಲಿ ಕಬ್ಬಿಣಾಂಶ ಹೇರಳವಾಗಿರುವ ಸ್ಥಳೀಯವಾಗಿ ಸಿಗುವ ಹಸಿರು ಸೊಪ್ಪು, ತಾಜಾ ತರಕಾರಿ, ಕಡಲೆ ಬೀಜ, ಮೊಳಕೆ ಬರಿಸಿದ ಕಾಳು, ರಾಗಿ, ಬೆಲ್ಲ, ಹಾಲು, ಮೊಟ್ಟೆ ಹೆಚ್ಚಾಗಿ ಸೇವಿಸಿ ರಕ್ತ ಹೀನತೆ ತಡೆಗಟ್ಟಿ ಎಂದು ಗರ್ಭಿಣಿಯರಿಗೆ ಸಲಹೆ ನೀಡಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್. ಡಿ. ಬೆನ್ನೂರ ಮಾತನಾಡಿ, ಮಗು ಜನಿಸಿದ ಒಂದು ಗಂಟೆಯೊಳಗೆ ತಾಯಿ ಎದೆ ಹಾಲು ಕುಡಿಸಿ,ಎರಡು ವರ್ಷದವರೆಗೆ ಮುಂದುವರೆಸಬೇಕು.
ತಾಯಿ ಎದೆ ಹಾಲು ಅಮೃತಕ್ಕೆ ಸಮಾನ ಮಗುವಿಗೆ 6 ತಿಂಗಳಾಗುವರೆಗೆ ಕೇವಲ ತಾಯಿ ಹಾಲನ್ನು ಮಾತ್ರ ಕುಡಿಸಿ 6 ತಿಂಗಳ ನಂತರ ತಾಯಿ ಎದೆ ಹಾಲಿನ ಜೊತೆ ಪೂರಕ ಆಹಾರ ಪ್ರಾರಂಭಿಸಿ.ತಾಯಿಯ ಎದೆ ಹಾಲು ಕುಡಿದ ಮಕ್ಕಳು ಚುರುಕಾಗಿ ರುತ್ತಾರೆ ಮತ್ತು ಹೆಚ್ಚು ಬುದ್ದಿವಂತರಾಗಿರುತ್ತಾರೆಂದು ತಿಳಿಸಿದರು. ಪೌಷ್ಠಿಕ ಆಹಾರದ ವಿವಿಧ ಬಗೆಯ ಸೊಪ್ಪು ತರಕಾರಿ, ಹಣ್ಣು ಹಂಪಲು, ಮೊಳಕೆ ಕಾಳುಗಳನ್ನು ಪ್ರದರ್ಶಿಸಲಾಯಿತು.
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಎಂ. ರತ್ನಮ್ಮ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಪಿ. ಪುಷ್ಪ,ಅಂಗನವಾಡಿ ಕಾರ್ಯಕರ್ತೆಯರಾದ ಸಾವಿತ್ರಮ್ಮ, ರಾಧಾ, ಮಂಜುಳಾ, ಆಶಾ ಕಾರ್ಯಕರ್ತೆಯರಾದ ಶಾಂತಾ, ಶಾರದ, ಪದ್ಮಾವತಿ,ಗರ್ಭಿಣಿಯರು, ಮಕ್ಕಳ ತಾಯಂದಿರು ಹಾಜರಿದ್ದರು.