ಪಾಂಡವಪುರ ತಾಲ್ಲೂಕಿನ ಕನಗನಮರಡಿ ಗ್ರಾಮದ ಕಲ್ಲು ಗಣಿಗಾರಿಕೆ ವಿರೋಧಿಸಿ ನಡೆಯುತ್ತಿದ್ದ ಹೋರಾಟದ ಸ್ಥಳಕ್ಕೆ ಕನಿಷ್ಟ ಸೌಜನ್ಯಕ್ಕೂ ಭೇಟಿ ನೀಡದ ಜಿಲ್ಲಾಧಿಕಾರಿ ವರ್ತನೆ ಖಂಡನೀಯ. ಗಣಿಗಾರಿಕೆ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆ ಎಂದು ಡಾ.ಹೆಚ್.ಎನ್.ರವೀಂದ್ರ ಬೆಂಬಲಿಗರು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಅಶ್ವತಿ ಅವರು ಜನರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಆಡಳಿತ ನಡೆಸುತ್ತಿಲ್ಲ. ಕನಗನಮರಡಿ ಗ್ರಾಮದ ಸಮೀಪ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಸ್ಥಳದಲ್ಲಿ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ಡಾ.ರವೀಂದ್ರ ಸೇರಿದಂತೆ ನೂರಾರು ಹೋರಾಟಗಾರರನ್ನು ಪೊಲೀಸರು ಯಾರದ್ದೋ ಕುಮ್ಮಕ್ಕಿನಿಂದ ವಶಕ್ಕೆ ತೆಗೆದುಕೊಂಡು ಹೋರಾಟವನ್ನು ಸ್ಥಗಿತಗೊಳಿಸಲು ಮುಂದಾಗಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಲ್ಲು ಗಣಿಗಾರಿಕೆಗೆ ಕೆಲ ಇಲಾಖೆಯಿಂದ ಅನುಮತಿ ಪಡೆಯದೇ ಕಾನೂನು ಬಾಹಿರವಾಗಿ ಅನುಮತಿ ನೀಡಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ಹಾಗೂ ಕಲ್ಲು ಗಣಿಗಾರಿಕೆ ರದ್ದು ಪಡಿಸುವ ಸಂಬಂಧ ಕಾನೂನು ರೀತಿ ಹೋರಾಟ ನಡೆಸಲು ನಾವು ಸಿದ್ದರಾಗಿದ್ದೇವೆ.
ಅಧಿಕಾರದ ದರ್ಪ ನಡೆಯುತ್ತದೆಯೋ ಅಥವಾ ಜನಪರ ಕಾಳಜಿಯ ಹೋರಾಟ ಗೆಲ್ಲುತ್ತೋ ನೋಡೋಣ, ನಾವು ಸಿದ್ದರಾಗಿದ್ದೇವೆ ಎಂದು ಡಾ.ಎಚ್.ಎನ್.ರವೀಂದ್ರ ಅಭಿಮಾನಿ ಬಳಗದ ಮುಖಂಡರಾದ ದಯಾನಂದ್, ಮಹದೇಶ್ವರಪುರ ಮಹದೇವ್, ಶ್ಯಾದನಹಳ್ಳಿ ಬಾಬು, ಚಿನಕುರಳಿ ಮಂಜುನಾಥ್, ಕೆನ್ನಾಳು ಸೊಸೈಟಿ ನಿರ್ದೇಶಕ ದಯಾನಂದ್, ಚಿಕ್ಕಾಡೆ ರಮೇಶ್ ಒಗ್ಗೂಡಿ ಎಚ್ಚರಿಸಿದರು.