ಮದ್ದೂರಿನಲ್ಲಿ ಜೂನ್ 5 ರಂದು ಬೃಹತ್ ರಕ್ತದಾನ ಶಿಬಿರ ಮತ್ತು ಶಾಲಾ ಮಕ್ಕಳಿಗೆ ಪಠ್ಯ ಪರಿಕರ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಕದಲೂರು ಉದಯ್ ಟ್ರಸ್ಟ್ ನ ಅಧ್ಯಕ್ಷ ಕೆ.ಎಂ.ಉದಯ್ ತಿಳಿಸಿದರು.
ಶಿವಪುರದ ಟ್ರಸ್ಟ್ ಕಛೇರಿ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಬುಧವಾರ ಮಾತನಾಡಿದರು.
ಮದ್ದೂರು ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಮವಸ್ತ್ರ ಹಾಗೂ ಪಠ್ಯ ಪರಿಕರಗಳನ್ನು ಉಚಿತವಾಗಿ ನೀಡಲಾಗುವುದೆಂದು ತಿಳಿಸಿದರು.
ಜೂ.5 ರಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸೋಮನಹಳ್ಳಿಯ ತಿಮ್ಮದಾಸ್ ಹೋಟೆಲ್ ಬಳಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ.ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು ಎಂದರು.
ಪೌರಕಾರ್ಮಿಕರಿಗೆ, ಕಟ್ಟಡ ಕಾರ್ಮಿಕರಿಗೆ, ಶಾಲಾ ಅಡುಗೆ ಸಹಾಯಕರಿಗೆ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ, ಸವಿತಾ ಸಮಾಜ ಹಾಗೂ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ, ಸಹಾಯ ಹಸ್ತ ನೀಡಲಾಗುವುದು ಎಂದು ತಿಳಿಸಿದರು.
ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ 2020-21 ನೇ ಸಾಲಿನಲ್ಲಿ ಅತೀ ಹೆಚ್ಚು ಅಂಕ ಪಡೆದ ಮೊದಲ 25 ವಿದ್ಯಾರ್ಥಿಗಳಿಗೆ, ಕ್ರೀಡಾ ಪಟುಗಳ ಜೊತೆಗೆ ಸಮಾಜ ಸೇವಕರಿಗೆ, ಶಿಕ್ಷಣ, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರಿಗೆ, ರಂಗಭೂಮಿ ಹಾಗೂ ಗ್ರಾಮೀಣ ಕಲಾವಿದರಿಗೆ, ಮಾಜಿ ಸೈನಿಕರು, ಪ್ರಗತಿಪರ ರೈತರು ಹಾಗೂ ತಾಲೂಕಿನ ಹೋರಾಟಗಾರರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳುವ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಸುತ್ತೂರು ಮಠದ ಶ್ರೀಗಳು ವಹಿಸಲಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಮಾಜಿ ಸೈನಿಕ ಸಿಪಾಯಿ ಶ್ರೀನಿವಾಸ್, ಕದಲೂರು ರವಿ, ತಿಮ್ಮೇಗೌಡ ಮತ್ತಿತರರಿದ್ದರು.