ಅನಾರೋಗ್ಯಕ್ಕೆ ಒಳಗಾದವರು ಸಕಾಲದಲ್ಲಿ ವೈದ್ಯರ ಚಿಕಿತ್ಸೆ ಪಡೆದು ಅರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು, ಸ್ಥಳೀಯವಾಗಿ ಆಯೋಜಿಸುವ ಉಚಿತ ಆರೋಗ್ಯ ಶಿಬಿರಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮಂಡ್ಯ ವಿಧಾನಸಭಾ ಕ್ಷೇತ್ರ ಬಿಜೆಪಿ ಮುಖಂಡ ಅಶೋಕ್ ಜಯರಾಂ ಹೇಳಿದರು.
ಮಂಡ್ಯ ನಗರದ ಬೀಡಿ ಕಾರ್ಮಿಕರ ಕಾಲೋನಿಯಲ್ಲಿಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಜಿಲ್ಲಾ ಬಿಜೆಪಿ ಪಕ್ಷ, ಕೆಂಪೇಗೌಡ ಆಸ್ಪತ್ರೆ, ಒಕ್ಕಲಿಗರ ಸಂಘ ದಂತ ಕಾಲೇಜು, ಭಾರತೀಯ ದಂತ ವೈದ್ಯಕೀಯ ಸಂಘ, ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಪ್ರಯುಕ್ತ 7 ದಿನಗಳ ಸೇವಾ ಸಪ್ತಾಹ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಆಹಾರವೇ ಔಷಧಿಯಾಗಬೇಕಿದೆ, ಗುಣಮಟ್ಟದ ಆರೋಗ್ಯಕ್ಕಾಗಿ ಚಟುವಟಿಕೆಯಿಂದ ಕೂಡಿದ ಜೀವನ ಶೈಲಿ ಅತ್ಯಗತ್ಯ ಎಂದು ಹೇಳಿದರು.
ನಗರಸಭಾ ಸದಸ್ಯ ಜಾಕೀರ್ಪಾಷಾ ಮಾತನಾಡಿ, ಮಾಜಿ ಸಚಿವ ಎಸ್.ಡಿ. ಜಯರಾಂ ಅವರ ಕಾಲದಲ್ಲಿ ಅಭಿವೃದ್ದಿಗೊಂಡ ಮಂಡ್ಯ ಜಿಲ್ಲೆಯು ಪ್ರಗತಯತ್ತ ಸಾಗುತ್ತಿದೆ, ಹಾಗೇ ಡಾ.ಪರಮೇಶ್ ಅವರ ಕೊಡುಗೆಯನ್ನ ನಾವು ಮರೆಯುವುದಿಲ್ಲ ಎಂದು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ವೈದ್ಯರ ತಂಡವು ಬಿ.ಪಿ., ಶುಗರ್, ದಂತ, ನೇತ್ರ, ಅನಾರೋಗ್ಯ ಸಮಸ್ಯೆಗಳಿಗೆ ಸ್ಥಳದಲ್ಲೇ ಚಿಕಿತ್ಸೆ-ಶಸ್ತ್ರ ಚಿಕಿತ್ಸೆ ನೀಡಿದರು. ಕೆಂಪೇಗೌಡ ಆಸ್ಪತ್ರೆಯ ಸಂಚಾರಿ ದಂತ ಚಿಕಿತ್ಸಾಲಯದಲ್ಲಿ ದಂತ ಆರೋಗ್ಯ ತಪಾಸಣೆ ನಡೆಯಿತು.
ಕಾರ್ಯಕ್ರಮದಲ್ಲಿ ವೈದ್ಯರಾದ ಡಾ.ಅರುಣಾನಂದ, ಡಾ.ಮಾದೇಶ್, ಆರೋಗ್ಯ ಶಿಬಿರ ಆಯೋಜಕರಾದ ಅನಿಲ್, ರವಿ, ನವೀನ್ಕುಮಾರ್ ಪಟೇಲ್, ಸ್ಥಳೀಯ ಮುಖಂಡರಾದ ದಡಖನ್, ಇರ್ಫಾನ್, ಇಂತಿಯಾಜ್, ಸಾಧಿಕ್, ಮಸೀದಿ ಅಧ್ಯಕ್ಷ ಇಲಿಯಾಜ್, ಬಿಜೆಪಿ ಹಿಂದುಳಿದ ಮೋರ್ಚಾ ಅಧ್ಯಕ್ಷ ರಮೇಶ್ವಿಶ್ವಕರ್ಮ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ನಯಾಜ್ಪಾಷಾ ಮತ್ತಿತರರಿದ್ದರು.




