ಜೆಡಿಎಸ್ ಶಾಸಕರು ದಿಶಾ ಸಭೆಗೆ ಬರಬಾರದು ಅಂತಲೇ ಅಧಿವೇಶನದ ಸಂದರ್ಭದಲ್ಲಿ ಸಂಸದೆ ಸುಮಲತಾ ಅವರು ದಿಶಾ ಸಭೆ ನಡೆಸಿದ್ದಾರೆ ಎಂದಿರುವ ಶಾಸಕ ಸುರೇಶ್ ಗೌಡ ಅವರು, ಅಕ್ಕನ ಬಗ್ಗೆ ಏನೇ ಮಾತಾಡಿದ್ರೂ ಅವರು ಅದನ್ನೇ ಬಂಡವಾಳ ಮಾಡ್ಕೊತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಮದ್ದೂರು ತಾಲ್ಲೂಕಿನ ಕೊಪ್ಪ ಹೋಬಳಿಯ ಹುರಗಲವಾಡಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ದಿಶಾ ಸಭೆಗೆ ಬರಬಾರದು ಅಂತಲೇ, ವಿಧಾನಸಭೆ ಅಧಿವೇಶನ ನಡೆಯುವ ಸಂದರ್ಭದಲ್ಲಿ ಸಂಸದೆ ಸುಮಲತಾ ಅಂಬರೀಷ್ ದಿಶಾ ಸಭೆ ಮಾಡಿದ್ದಾರೆ.
ಡಿಸೆಂಬರ್ ಗೆ ಮತ್ತೆ ಕರೆಯುತ್ತಾರೆ, ಆ ಸಂದರ್ಭದಲ್ಲಿ ಬೆಳಗಾವಿ ಅಧಿವೇಶನ ಇರುತ್ತೆ. ಮತ್ತೆ ಫೆಬ್ರವರಿ, ಮಾರ್ಚಿಗೆ ಕರೆಯುತ್ತಾರೆ ಅವಾಗ ಇನ್ನೊಂದು ಅಧಿವೇಶನ ಇರುತ್ತೆ ಎಂದರು. ನಾವು ಅವರ ಸಭೆಗೆ ಹೋಗಬಾರದು ಅನ್ನೊ ಉದ್ದೇಶ ಸುಮಲತಾ ಅವರದ್ದು. ಆದರೆ ನಾವು ಎಲ್ಲಾ ಸಭೆಯಲ್ಲಿ ಭಾಗವಹಿಸಿದ್ದೇವೆ ಎಂದರು.
ಕಮೀಷನ್ ದಂಧೆ
ಅಧಿವೇಶನದಲ್ಲಿ ನಮಗೆ ಚರ್ಚೆ ಮಾಡಲು ಅವಕಾಶವೇ ಸಿಗೋಲ್ಲ. ಸಿಗುವ ಒಂದು ನಿಮಿಷದಲ್ಲಿ ಚರ್ಚೆ ಮಾಡಬೇಕು. ನಮ್ಮ ಅವಕಾಶಕ್ಕಾಗಿ ನಾವು ಅಧಿವೇಶನದಲ್ಲಿ ಕಾಯಬೇಕು. ಕಾಂಗ್ರೆಸ್ ನವರಿಗೆ ಹೆಚ್ಚು ಸಮಯ ಹೋಗುತ್ತೆ. ನಾವು ಅಲ್ಲಿಯೂ ಇರಬೇಕು. ಸುಮಲತಾ ಅವರು ಆ ಸಂದರ್ಭದಲ್ಲಿ ಸಭೆ ಮಾಡ್ತಾರೆ. ನಾವು
ಲೆಟರ್ ಕೊಟ್ಟಿದ್ದೇವೆ, ನಾವು ಸಭೆಗೆ ಭಾಗವಹಿಸಬೇಕು ಎಂಬ ಕಾಳಜಿ ಇದ್ದರೆ, ಶನಿವಾರ ಕರೆಯಬೇಕಿತ್ತು.
ಅವಾಗ ನಾವು ಬರಲಿಲ್ಲವಾದ್ರೆ ತಪ್ಪಾಗುತ್ತಿತ್ತು. ಉದ್ದೇಶ ಪೂರ್ವಕವಾಗಿ ಸಭೆ ಮಾಡಿದ್ದಾರೆ ಎಂದು ಕಿಡಿಕಾರಿದರು ಅವರು ಸಹೋದರಿ ಸುಮಲತಾ ಅವರು, ನಾವು ಏನು ಹೇಳಿದ್ರು ಬಂಡವಾಳ ಮಾಡ್ಕೊತಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ಕಮಿಷನ್ ದಂಧೆ ನಡೆಸಿವೆ, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಮೀಷನ್ ಕೇಳಿಲ್ಲ. ರೇವಣ್ಣ ಅವರು ಕೂಡ ಕೇಳಿಲ್ಲ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ತಿಳಿಸಿದ್ದಾರೆ. ಹಾಗಾಗಿ ಯಾರ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಿದ್ದಾರೆ ಎಂದು ಜನ ತೀರ್ಮಾನ ಮಾಡಲಿ ಎಂದರು.
ರಾಷ್ಟ್ರೀಯ ಪಕ್ಷಗಳ ಹಣೆ ಬರಹವೇ ಇಷ್ಟು, ಜನ ಬದಲಾವಣೆ ಬಯಸಿದ್ದಾರೆ ಮುಂದಿನ ದಿನಗಳಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರುತ್ತದೆ. ಅಧಿವೇಶನದಲ್ಲಿ ಜನ ಸಾಮಾನ್ಯರ ಸಮಸ್ಯೆಗಳು ಚರ್ಚೆ ಆಗುತ್ತಿಲ್ಲ. ಆಡಳಿತ ಪಕ್ಷ ತಮ್ಮ ಶಾಸನಗಳನ್ನು ಮಂಡನೆ ಮಾಡಿ ಅನುಮೋದನೆ ಪಡೆಯಲಷ್ಟೇ ಸದನ ಮಾಡುತ್ತಿದೆ ಎಂದರು.
ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ 2 ಮುಖಗಳಿದ್ದಂತೆ, ಮೊದಲೇ ಇಬ್ಬರೂ ಪರಸ್ಪರ ಮಾತಾಡಿಕೊಂಡು ಸದನದಲ್ಲಿ ಮಾತನಾಡುತ್ತಾರೆ. ಇಂಥವರಿಂದ ಯಾವುದೇ ಬದಲಾವಣೆ ಸಾಧ್ಯ ಇಲ್ಲ. ಸದನದಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಚರ್ಚೆ ಮಾಡಲು ನಮಗೆ ಅವಕಾಶವನ್ನೇ ನೀಡುವುದಿಲ್ಲ. ಕಾಟಾಚಾರಕ್ಕೆ ಅಧಿವೇಶನ ನಡೆಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಬಿದರಕೋಟೆ ಬಿ.ಎಂ.ಕುಶ, ಜಿಲ್ಲಾ ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷ ಕೆ.ಟಿ. ಪ್ರದೀಪ್ ಗೌಡ, ಹರಳಕೆರೆ ಚಂದ್ರು, ತಮ್ಮಣ್ಣನಾಯಕ ಸಿದ್ದಲಿಂಗಯ್ಯ ಹುರುಗಲವಾಡಿ ಉಮೇಶ್ ಸೇರಿದಂತೆ ಇತರರಿದ್ದರು.




