-
ಕೆಲವರ ಜಮೀನಿಗೆ ಎಕರೆಯೊಂದಕ್ಕೆ 52 ಲಕ್ಷ ರೂ.ಗಳ ಬೆಲೆ ನಿಗದಿ
- ಮತ್ತೆ ಕೆಲವರಿಗೆ ಎಕರೆಯೊಂದಕ್ಕೆ ಕೇವಲ 7 ಲಕ್ಷ ರೂ. ನಿಗದಿ
- ಬೆಲೆ ನಿಗದಿಯಲ್ಲಿ ಭಾರಿ ತಾರತಮ್ಯ : ಪ್ರತಿಭಟನಕಾರರ ಆಕ್ರೋಶ
ಮಂಡ್ಯ ತಾಲ್ಲೂಕಿನ ತೂಬಿನಗೆರೆ ಗ್ರಾ.ಪಂ.ವ್ಯಾಪ್ತಿಯ ಎಲೆಚಾಕನಹಳ್ಳಿ ಗ್ರಾಮದ ಸಮೀಪ ಕರ್ನಾಟಕ ಗೃಹ ಮಂಡಳಿಯು ಹೊಸ ಬಡಾವಣೆ ನಿರ್ಮಾಣಕ್ಕೆ ಪರಿಶಿಷ್ಟ ಜಾತಿಗೆ ಸೇರಿದ ತೋಟಿ ಇನಾಂ ಭೂಮಿಯನ್ನು ಸ್ವಾಧೀನ ಮಾಡಿಕೊಂಡಿರುವುದನ್ನು ಕೈಬಿಡಬೇಕೆಂದು ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಮತ್ತು ಡಾ.ಬಾಬೂಜಿ ಮತ್ತು ಡಾ.ಭೀಮ್ ರಾವ್ ಯುವಕರ ಸಂಘದ ನೇತೃತ್ವದಲ್ಲಿ ಗ್ರಾಮಸ್ಥರು ಉದ್ದೇಶಿತ ಬಡಾವಣೆಯ ಸ್ಥಳದಲ್ಲೆ ಪ್ರತಿಭಟನೆ ನಡೆಸಿದರು.
ಎಲೆಚಾಕನಹಳ್ಳಿ ಗ್ರಾಮದ ಬಳಿ ಸುಮಾರು 200 ಎಕರೆ ಪ್ರದೇಶದಲ್ಲಿ ಗೃಹ ಮಂಡಳಿಯು ಬಡಾವಣೆ ನಿರ್ಮಿಸಲು ಉದ್ದೇಶಿಸಿದ್ದು, ಈ ಪೈಕಿ ಸುಮಾರು 50 ಎಕರೆ ಕೃಷಿ ಯೋಗ್ಯ ಜಮೀನು ಪರಿಶಿಷ್ಟ ಜಾತಿಗೆ ಸೇರಿದ ತೋಟಿ ಇನಾಂ ಭೂಮಿಯಾಗಿದೆ. ಈ ಭೂಮಿಯನ್ನೆ ನಂಬಿಕೊಂಡು ಸುಮಾರು 20 ಪರಿಶಿಷ್ಟ ಜಾತಿಯ ಕುಟುಂಬಗಳು ಜೀವನ ನಡೆಸುತ್ತಿದ್ದು, ಈ ಭೂಮಿಯನ್ನು ಕಿತ್ತುಕೊಂಡರೇ ನಮಗೆ ಬೇರ್ಯಾವುದೆ ಆಧಾರವಿಲ್ಲ ಎಂದು ಅಳಲು ವ್ಯಕ್ತಪಡಿಸಿದರು.
ಬೆಲೆ ನಿಗದಿಯಲ್ಲಿ ಭಾರಿ ತಾರತಮ್ಯ
ಕರ್ನಾಟಕ ಗೃಹ ಮಂಡಳಿಯು ಒಂದೆ ಬಡಾವಣೆಗೆ ಆಯ್ಕೆ ಮಾಡಿಕೊಂಡಿರುವ ಜಮೀನಿಗೆ ಬೆಲೆ ನಿಗದಿಯಲ್ಲಿ ತಾರತಮ್ಯ ಮಾಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ಧಾರೆ.
ಕೆಲವರ ಜಮೀನಿಗೆ ಎಕರೆಯೊಂದಕ್ಕೆ 52 ಲಕ್ಷ ರೂ.ಗಳ ಬೆಲೆ ನಿಗದಿ ಮಾಡಿದ್ದರೆ, ಮತ್ತೆ ಕೆಲವರಿಗೆ ಎಕರೆಯೊಂದಕ್ಕೆ ಕೇವಲ 7 ಲಕ್ಷ ರೂ. ನಿಗದಿ ಮಾಡುವ ಮೂಲಕ ರೈತರನ್ನು ವಂಚಿಸಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಗುತ್ತಿಗೆದಾರರು ಕೆಲಸ ಪ್ರಾರಂಭಿಸಲು ಯಂತ್ರಗಳೊಂದಿಗೆ ಸ್ಥಳಕ್ಕೆ ಆಗಮಿಸಿದ್ದು, ಇದಕ್ಕೆ ಅಡ್ಡಿಪಡಿಸಿದ ಪ್ರತಿಭಟನಾಕಾರರು ಸ್ಥಳಕ್ಕೆ ಗೃಹ ಮಂಡಳಿಯ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳು ಭೇಟಿ ನೀಡಿ ನಮ್ಮ ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡುವವರೆಗೆ ಕಾಮಗಾರಿ ನಡೆಯಲು ಬಿಡುವುದಿಲ್ಲ ಎಂದು ಸ್ಥಳದಲ್ಲೇ ಶಾಮಿಯಾನ ಹಾಕಿ ಧರಣಿ ಆರಂಭಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಕೆ.ಹೆಚ್.ಬಿ. ಸಹಾಯಕ ಕಾರ್ಯಪಾಲಕ ಅಭಿಯಂತರ ಲಾರೆನ್ಸ್, ಮತ್ತೊಬ್ಬ ಅಧಿಕಾರಿ ವೇಣುಗೋಪಾಲ್ ಪ್ರತಿಭಟನಾಕಾರರ ಬೇಡಿಕೆಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಸ್ವಾಮಿ, ದಿನೇಶ್, ಗವಿ, ಬೋರಯ್ಯ, ಜವರಯ್ಯ ಸಾಗರ್ ಮತ್ತಿತರರು ಭಾಗವಹಿಸಿದ್ದರು.




