Friday, November 20, 2026

ಪ್ರಾಯೋಗಿಕ ಆವೃತ್ತಿ

ಮೈಷುಗರ್ ಕಾರ್ಖಾನೆಯಲ್ಲಿ ಎಥೆನಾಲ್ ಘಟಕ ಪ್ರಾರಂಭಕ್ಕೆ ಆಗ್ರಹ

ಮಂಡ್ಯದ ಮೈಷುಗರ್ ಕಾರ್ಖಾನೆಯಲ್ಲಿ ಎಥೆನಾಲ್ ಘಟಕ ಪ್ರಾರಂಭಿಸಬೇಕೆಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರಯುವ ಮೂಲಕ ಆಗ್ರಹಿಸಿದ್ದಾರೆ.

ಮೈಷುಗರ್ ಕಾರ್ಖಾನೆಯಲ್ಲಿ 100 ಕೆ.ಎಲ್.ಪಿ.ಡಿ.ಯ ಎಥೆನಾಲ್ ಘಟಕವನ್ನು ಪ್ರಾರಂಭಿಸಬಹುದಾಗಿರುತ್ತದೆ. ಕಬ್ಬಿನ ರಸದಿಂದ ನೇರವಾಗಿ ಎಥೆನಾಲ್ ಉತ್ಪಾದಿಸಿದರೆ, ಪ್ರತೀ ಟನ್ ಕಬ್ಬಿನಿಂದ ಸುಮಾರು 67 ರಿಂದ 70 ಲೀಟರ್‌ನಷ್ಟು ಎಥೆನಾಲ್ ಉತ್ಪಾದಿಸಬಹುದಾಗಿದೆ ಎಂದು ಅಂದಾಜು ಮಾಡಲಾಗಿರುತ್ತದೆ.

ಒಂದು ಲೀಟರ್ ಎಥೆನಾಲ್ ಅನ್ನು 60 ರಿಂದ ರೂ.67 ರೂ. ರವರೆಗೆ ಪೆಟ್ರೋಲಿಯಂ ಕಂಪೆನಿಗಳಾದ BPCL, HPCL ಮತ್ತು IOCL ಗಳು ಖರೀದಿ ಮಾಡುತ್ತವೆ. ಪ್ರಸ್ತುತ ದಕ್ಷಿಣ ಕರ್ನಾಟಕದ ಕಾರ್ಖಾನೆಗಳು ಪ್ರತೀ ಟನ್ ಕಬ್ಬಿಗೆ 2,821 ರೂ.ಗಳನ್ನು ನಿಗದಿಪಡಿಸಿದ್ದು, ಅದನ್ನು ಕೂಡ ಜಾರಿಗೊಳಿಸಬೇಕು.

ಒಂದು ಟನ್ ಕಬ್ಬಿನಿಂದ ಸುಮಾರು 70 ಲೀಟರ್ ಎಥೆನಾಲ್ ಉತ್ಪಾದನೆಯಾಗುವುದರಿಂದ ಪ್ರತೀ ಲೀಟರ್ ಎಥೆನಾಲ್‌ಗೆ 67 ರೂ.ರಂತೆ ಸುಮಾರು 4,690 ರೂ.ಗಳಾಗುತ್ತದೆ. ಎಥೆನಾಲ್ ಘಟಕ ಸ್ಥಾಪನೆಯಾದರೆ ರೈತರ ಕಬ್ಬಿಗೆ ವೈಜ್ಞಾನಿಕ ದರವನ್ನು ನೀಡಲು ಸಹಕಾರಿಯಾಗುತ್ತದೆ.

ಮೈಷುಗರ್ ಪ್ರಾರಂಭದಿಂದ ಇಂದಿನವರೆಗೂ ಜಿಲ್ಲೆಯ ಲಕ್ಷಾಂತರ ರೈತ ಕುಟುಂಬಗಳ ಜೀವನ ನಿರ್ವಹಣೆಗೆ ಸಹಕಾರಿಯಾಗಿದೆ. ಈ ಕಾರ್ಖಾನೆಯಲ್ಲಿ ಎಥೆನಾಲ್ ಘಟಕವನ್ನು ಪ್ರಾರಂಭ ಮಾಡುವುದರಿಂದ ರೈತರಿಗೆ ಸುಗಮವಾಗಿ ಹಣ ಪಾವತಿ ಮಾಡಬಹುದಾಗಿದ್ದು, ಕಾರ್ಖಾನೆಯು ಲಾಭಾಂಶದತ್ತ ಹೋಗಿ, ಕಾರ್ಖಾನೆಯ ಕಾರ್ಮಿಕರಿಗೆ ಹಾಗೂ ರೈತರಿಗೆ ಇದರಿಂದ ತುಂಬಾ ಅನುಕೂಲವಾಗುತ್ತದೆ.

ಆದುದರಿಂದ, ಮೈಸೂರು ಸಕ್ಕರೆ ಕಾರ್ಖಾನೆಯಲ್ಲಿ ಎಥೆನಾಲ್ ಘಟಕವನ್ನು ಪ್ರಾರಂಭಿಸಲು ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಈ ಕ್ಷೇತ್ರದ ಪರಿಣಿತರ ಜೊತೆ ಸಭೆ ನಡೆಸಿ ತಾವು ಶೀಘ್ರ ಕ್ರಮಕೈಗೊಳ್ಳಬೇಕೆಂದು ಹಾಗೂ ಕಾರ್ಖಾನೆಗೆ ಬಾಕಿ ಇರುವ 20 ಕೋಟಿ ರೂ.ಗಳ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಗೆ ಸೂಚಿಸಬೇಕೆಂದು ಮಂಡ್ಯ ಜಿಲ್ಲೆಯ ರೈತರ ಪರವಾಗಿ ಮನವಿ ಮಾಡಿದ್ದಾರೆ.

ಈ ಸಂಬಂಧ ಸಕ್ಕರೆ ಸಚಿವರಾದಂತಹ ಶಂಕರ ಬಿ.ಮುನೇನಕೊಪ್ಪರವರಿಗೆ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯನವರು ಮುಖ್ಯಮಂತ್ರಿಗಳ ಜೊತೆ ಸಮಾಲೋಚಿಸಿ ಶೀಘ್ರವಾಗಿ ಮೈಸೂರು ಸಕ್ಕರೆ ಕಾರ್ಖಾನೆಯಲ್ಲಿ ಎಥೆನಾಲ್ ಘಟಕ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ