Saturday, November 21, 2026

ಪ್ರಾಯೋಗಿಕ ಆವೃತ್ತಿ

ಸಹಕಾರಿ ಕ್ಷೇತ್ರಕ್ಕೆ ಕೆ.ವಿ.ಶಂಕರಗೌಡ-ಹೆಚ್.ಡಿ.ಚೌಡಯ್ಯ ಅವರ ಕೊಡುಗೆ ಅದ್ವಿತೀಯ

ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ನಿತ್ಯ ಸಚಿವ ಕೆ.ವಿ.ಶಂಕರಗೌಡ ಹಾಗೂ ಸಹಕಾರಿ ಧುರೀಣ ಡಾ.ಹೆಚ್.ಡಿ.ಚೌಡಯ್ಯ ಅವರಿಬ್ಬರೂ ಉಭಯ ಸೂರ್ಯರ ಹಾಗೆ ಮಾದರಿಯಾಗುವಂತಹ ಅದ್ಬುತ ಸಾಧನೆ ಮಾಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಡ್ಯ ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ಲೇಸ್‌ಮೆಂಟ್ ಸಭಾಂಗಣದಲ್ಲಿ ಜನತಾ ಶಿಕ್ಷಣ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಡಾ.ಹೆಚ್.ಡಿ.ಚೌಡಯ್ಯರವರ 95ನೇ ಜನ್ಮದಿನೋತ್ಸವ ಹಾಗೂ 2022ನೇ ಸಾಲಿನ ರಾಜ್ಯಮಟ್ಟದ ಡಾ.ಹೆಚ್.ಡಿ.ಚೌಡಯ್ಯ ಸಹಕಾರ, ಸಮಾಜ ಸೇವೆ ಮತ್ತು ಗ್ರಾಮೀಣಾಭಿವೃದ್ಧಿ ಪ್ರಶಸ್ತಿಗಳ ಪ್ರದಾನ ಹಾಗೂ ಪ್ರತಿಭಾ ವಿದ್ಯಾರ್ಥಿ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಿತ್ಯ ಸಚಿವ ಕೆ.ವಿ.ಶಂಕರಗೌಡ ಅವರು ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡುವ ದೃಷ್ಟಿಯಿಂದ ಜನತಾ ಶಿಕ್ಷಣ ಟ್ರಸ್ಟ್ ಸ್ಥಾಪಿಸಿ, ಆದರ್ಶ ಪ್ರಾಯರಾಗಿದ್ದು, ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದರು.

ದಕ್ಷಿಣ ಕನ್ನಡ ಜಿಲ್ಲೆ ಸಹಕಾರಿ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದೆ. ಇಂತಹ ನೆಲದಲ್ಲಿ ಡಾ.ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು 45 ವರ್ಷಗಳ ಕಾಲ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ 28 ವರ್ಷಗಳ ಕಾಲ ಅಧ್ಯಕ್ಷರಾಗಿ ವಿನೂತನ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸಾಧನೆ ಅಭಿನಂದನಾರ್ಹ ಎಂದು ಪ್ರಶಂಸಿಸಿದರು. ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿರುವ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೆಚ್.ಡಿ.ಚೌಡಯ್ಯ ಸಮಾಜ ಸೇವೆ ಪ್ರಶಸ್ತಿ ಪಡೆದಿರುವ ಮೀರಾ ಶಿವಲಿಂಗಯ್ಯ ಅವರು ಸಾಹಿತ್ಯ, ಶಿಕ್ಷಣ, ಸಮಾಜ ಸೇವೆಯಲ್ಲಿ ತಮ್ಮನ್ನು ಧನಾತ್ಮಕವಾಗಿ ತೊಡಗಿಸಿಕೊಂಡು ಸಂಚಲನ ಉಂಟು ಮಾಡಿದ ಮಹಿಳೆಯಾಗಿದ್ದು, ಸಾಮಾನ್ಯರಲ್ಲಿ ಸಾಮಾನ್ಯರಾಗಿ ಗುರುತಿಸಿಕೊಂಡಿದ್ದಾರೆ. ಮುಂದೆಯೂ ಸಹ ಜನಸಮುದಾಯದ ಸೇವೆ ಮುಂದುವರೆಸಿಕೊಂಡು ಹೋಗಲಿ ಎಂದರು.

ಪ್ರತಿಭಾ ಪುರಸ್ಕಾರ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳು ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ವ್ಯಾಸಂಗ ಮಾಡುವ ಮೂಲಕ ಸಮಾಜದ ಉತ್ತಮ ನಾಗರೀಕರಾಗಿ ಹೊರಹೊಮ್ಮಬೇಕು. ಈ ಸಮಾಜದಲ್ಲಿ ಅದೃಷ್ಟವಂತ ಅವಕಾಶಗಳನ್ನು ಬಳಸಿಕೊಂಡರೆ, ಬುದ್ದಿವಂತ ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಾನೆ. ಅದೇ ರೀತಿ ನೀವು ಸಹ ಮುಂದೆ ಬನ್ನಿ ಎಂದು ಕಿವಿಮಾತು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಡಾ.ಹೆಚ್.ಡಿ.ಚೌಡಯ್ಯ ಸಹಕಾರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಅಧಿಕಾರ ಸಿಕ್ಕಿದಾಗ ಇನ್ನೊಬ್ಬರನ್ನು ಬೆಳೆಸುವುದರ ಜೊತೆಗೆ ಗ್ರಾಮದ ಅಭಿವೃದ್ಧಿಯತ್ತ ಮನಸ್ಸಿಟ್ಟು ಕೆಲಸ ಮಾಡಬೇಕು. ಇಂದಿನ ಪುರುಷ ಸಮಾಜದಲ್ಲಿ ಮಹಿಳೆಯರನ್ನು ಸ್ವಾವಲಂಬಿಗಳಾಗಿ ಮಾಡುವ ನಿಟ್ಟಿನಲ್ಲಿ ಅವಕಾಶ ಒದಗಿಸಿಕೊಡಬೇಕೆಂದರು.

1952ರಲ್ಲಿ 180 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಜನತಾ ಶಿಕ್ಷಣ ಸಂಸ್ಥೆ ಇಂದು 7000 ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ. ಇದರಿಂದ  ಕೆ.ವಿ.ಶಂಕರಗೌಡರು ಶಿಕ್ಷಣಕ್ಕೆ ಕೊಟ್ಟ ಮಹತ್ವದ ಬಗ್ಗೆ ಅರಿವಾಗುತ್ತದೆ. ಇಂತಹ ಶಿಕ್ಷಣ ಸಂಸ್ಥೆಯಲ್ಲಿ ಹೆಚ್.ಡಿ.ಚೌಡಯ್ಯ ಅವರ ಹೆಸರಿನಲ್ಲಿ ನೀಡಿದ ಪ್ರಶಸ್ತಿ ನನಗೆ ವಿಶೇಷ ಗೌರವ ತಂದುಕೊಟ್ಟಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಮಾತನಾಡಿ, ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ಸಾಮಾನ್ಯ ಜ್ಞಾನ ಬೆಳೆಸಿಕೊಂಡು ಜೀವನದಲ್ಲಿ ಒಂದು ಗುರಿ ಇಟ್ಟುಕೊಂಡು ಸಾಧನೆ ಮಾಡಿ, ದೇಶ ಕಟ್ಟುವಲ್ಲಿ ಯುವಕರ ಪಾತ್ರ ಪ್ರಮುಖವಾದುದು. ಹಿರಿಯರ ಪರಿಶ್ರಮದಿಂದ ಬೆಳೆದು ಬಂದಿರುವ ಈ ಸಂಸ್ಥೆಯನ್ನು ಎಲ್ಲಾ ಧರ್ಮದರ್ಶಿಗಳ ಸಹಕಾರದಿಂದ ಹೆಮ್ಮರವಾಗಿ ಬೆಳೆಸುವ ಜವಾಬ್ದಾರಿ ನಮ್ಮದಾಗಿದೆ ಎಂದರು.

ಡಾ.ಹೆಚ್.ಡಿ.ಚೌಡಯ್ಯ ಹೆಸರಿನಲ್ಲಿ ನೀಡುವ ಡಾ.ಎಂ.ಎನ್.ರಾಜೇಂದ್ರ ಕುಮಾರ್ (ಸಹಕಾರ ಪ್ರಶಸ್ತಿ) ಮೀರಾ ಶಿವಲಿಂಗಯ್ಯ ಅವರಿಗೆ (ಸಮಾಜ ಸೇವಾ ಪ್ರಶಸ್ತಿ) ಜಿ.ಬಿ.ಶಂಕರೇಗೌಡ ಅವರಿಗೆ (ಗ್ರಾಮೀಣಾಭಿವೃದ್ಧಿ ಪ್ರಶಸ್ತಿ) ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ 2022ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ವಿಸ್ಮಯ್ ಹೆಚ್.ಕೆ., ಸತ್ಯಮೂರ್ತಿ ಹೆಚ್.ಕೆ. ದಿಶಾ ಎಸ್. ಹಾಗೂ ಭುವನ್ ಸಿ.ಎಸ್. ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಜನತಾ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್, ಧರ್ಮದರ್ಶಿ ಹೆಚ್.ಸಿ.ಮೋಹನ್ ಕುಮಾರ್, ಡಾ.ರಾಮಲಿಂಗಯ್ಯ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ