ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ ಎಂದೇ ಹೆಸರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾದ ಸಿನಿಮಾದ ಪ್ರಚಾರವನ್ನು ಅಭಿಮಾನಿಗಳು ಅದ್ದೂರಿಯಾಗಿ ನಡೆಸಿದರು.
ಮಂಡ್ಯ ನಗರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಅದ್ದೂರಿ ಮೆರವಣಿಗೆ ನಡೆಸಿ ಡಿ.ಬಾಸ್. ಡಿ. ಬಾಸ್ ಎಂದು ಹರ್ಷೋದ್ಘಾರ ಮೊಳಗಿಸಿದರು. ಕ್ರಾಂತಿ ಚಿತ್ರದ ಪೋಸ್ಟರ್ ಪ್ರದರ್ಶನ ಮಾಡುತ್ತಾ ನೃತ್ಯ ಮಾಡಿ ಸಂಭ್ರಮದಿಂದ ಹೆಜ್ಜೆ ಹಾಕಿದರು.
ಕ್ರಾಂತಿ ಸಿನಿಮಾದ ಪೋಸ್ಟರ್ ಹಿಡಿದು ಜೊತೆಗೆ ಕೈಯಲ್ಲಿ ಕರುನಾಡ ಬಾವುಟ ಹಿಡಿದಿದ್ದ ದರ್ಶನ್ ಅಭಿಮಾನಿಗಳು ಡಿ ಬಾಸ್ ಘೋಷಣೆ ಮೊಳಗಿಸಿ ಪ್ರಚಾರದಲ್ಲಿ ತೊಡಗಿಕೊಂಡರು.
ಅಭಿಮಾನಿಗಳ ಸಂಭ್ರಮಕ್ಕೆ ಡೊಳ್ಳು ಕುಣಿತ, ಪೂಜಾ ಕುಣಿತ, ತಮಟೆ ಮೆರಗು ನೀಡಿತು.ವೀರ ಯೋಧರ ಭಾವ ಚಿತ್ರಗಳೊಂದಿಗೆ ಹೆಜ್ಜೆ ಹಾಕಿದರು. ಅದೇ ರೀತಿ ನಟ ದರ್ಶನ್ ಪ್ರಾಣಿ ಪ್ರಿಯರಾಗಿದ್ದು ಬಸವ ಗಳನ್ನು ಅಲಂಕೃತಗೊಳಿಸಿ ಅಭಿಮಾನಿಗಳು ಸಂಭ್ರಮಿಸಿದರು.
ದರ್ಶನ್ ಸೇನಾ ಸಮಿತಿ ವಿಭಿನ್ನ ಮಾದರಿಯಲ್ಲಿ ಕ್ರಾಂತಿ ಸಿನಿಮಾದ ಪ್ರಚಾರ ನಡೆಸಿತು. ಕೃಷಿಯ ಉತ್ಪಾದನೆ ಹೆಚ್ಚಿಸಲು 1965ರಲ್ಲಿ ಶುರುವಾದದ್ದು ಹಸಿರು ಕ್ರಾಂತಿ. ಹಾಲು ಉತ್ಪನ್ನಗಳ ಅಭಿವೃದ್ಧಿಗಾಗಿ 1970 ರಲ್ಲಿ ಶುರುವಾದದ್ದು ಕ್ಷೀರ ಕ್ರಾಂತಿ. ಸ್ವಾಭಿಮಾನದ ಛಲ ಮತ್ತು ಅಭಿಮಾನದ ಬಲದಿಂದ 2022ರಲ್ಲಿ ಶುರುವಾಗಿರೋದು ಡಿ ಬಾಸ್ ಕ್ರಾಂತಿ ಎಂದು
ಘೋಷಣೆ ಮೊಳಗಿಸಿದ್ದು,ಅಭಿಮಾನಿಗಳಿಗೆ ಮತ್ತಷ್ಟು ಖುಷಿ ಕೊಟ್ಟಿತು.
ಕ್ರಾಂತಿ ಸಿನಿಮಾದ ಮೆರವಣಿಗೆ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಸಾಗಿ ನಗರದ ಪ್ರಮುಖ ರಸ್ತೆಗಳ ಮೂಲಕ ಸರ್ ಎಂ ವಿ ಕ್ರೀಡಾಂಗಣದವರೆಗೆ ನಡೆಯಿತು. ಬಿಸಿಲಿನಲ್ಲಿಯೂ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.




