-
ಎಐಸಿಸಿ ಚುಕ್ಕಾಣಿ ಹಿಡಿಯಲು ದಕ್ಷಿಣ ಭಾರತದ ನಾಯಕರ ಕಸರತ್ತು
- ‘ಭೀಷ್ಮ ಪಿತಾಮಹ’ ಖರ್ಗೆ vs ಮಹತ್ವಾಕಾಂಕ್ಷೆಯ ತರೂರ್
ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಯ ಆಧ್ಯಕ್ಷ ಸ್ಥಾನಕ್ಕೆ ಇದೇ ಅ.17ರಂದು ಚುನಾವಣೆ ನಡೆಯಲಿದ್ದು, ಅಂತಿಮ ಕಣದಲ್ಲಿ ದಕ್ಷಿಣ ಭಾರತದವರೇ ಆದ ಇಬ್ಬರು ಘಟಾನುಘಟಿ ನಾಯಕರು ಸ್ಪರ್ಧೆಗೆ ಧುಮುಕಿದ್ದಾರೆ.
ಈ ಪೈಕಿ ಮಲ್ಲಿಕಾರ್ಜುನ ಖರ್ಗೆ ಅವರು ಅನುಭವಿ ರಾಜಕಾರಣಿಯಾಗಿ ಕೇಂದ್ರದಲ್ಲಿ ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ ಅತ್ಯಂತ ಅನುಭವ ಹೊಂದಿದ ನಾಯಕರಾಗಿ ಗಾಂಧಿ ಕುಟುಂಬದ ನಿಷ್ಟರಾಗಿ ಸ್ಪರ್ಧೆಗೆ ಇಳಿದಿದ್ದರೆ, ಮತ್ತೊಂದೆಡೆ ಬದಲಾವಣೆಯ ಮನಸ್ಥಿತಿ ಹೊಂದಿರುವ ಕೇರಳದ ತಿರುವನಂತಪುರದ ಸಂಸದ ಶಶಿ ತರೂರ್ ಅವರು ಸಾಹಿತಿಯಾಗಿ, ಲೇಖಕರಾಗಿ, ವಿಶ್ವಸಂಸ್ಥೆಯಡಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ ಅನುಭವ ಹೊಂದಿವರಾಗಿದ್ಧಾರೆ.
ಖರ್ಗೆ ಅವರ ನಿಷ್ಠೆ ಮತ್ತು ತರೂರ್ ಅವರ ವ್ಯಕ್ತಿತ್ವದ ನಡುವೆ, ಇಬ್ಬರೂ ನಾಯಕರು ತಮ್ಮದೇ ಆದ ಅನೂಕೂಲ ಮತ್ತು ಅನಾನುಕೂಲತೆಗಳನ್ನು ಹೊಂದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ – 11 ವಿವಿಧ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ಧಾರೆ. ಅವರು ಪ್ರಸ್ತುತ
80ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 1972 ರಿಂದ 2008 ರವರೆಗೆ ಗುರ್ಮಿಟ್ಕಲ್ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ 9 ಬಾರಿ, ಮತ್ತು ನಂತರ 2009 ಮತ್ತು 2014 ರಲ್ಲಿ ಕಲಬುರ್ಗಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. 2019 ರ ಲೋಕಸಭೆ ಚುನಾವಣೆಯಲ್ಲಿ ಅವರು ಸೋಲು ಅನುಭವಿಸುವಂತಾಯಯಿತು.
ಇತ್ತೀಚಿನವರೆಗೂ ಖರ್ಗೆಯವರು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು, ಮೊನ್ನೆಯಷ್ಟೆ ಈ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ಬಹುಶಃ ಖರ್ಗೆಯವರಿಗೆ ಗಾಂಧಿ ಕುಟುಂಬದ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ ,ಇದನ್ನೆ ಶಶಿತರೂರು ಉಲ್ಲೇಖಿಸಿ ಖರ್ಗೆ ಆಯ್ಕೆಯಾದರೆ ಯಥಾಸ್ಥಿತಿ ಮುಂದುವರಿಕೆ, ನಾನು ಆಯ್ಕೆಯಾದರೆ ಬದಲಾವಣೆ ಎಂದು ತರೂರು ಹೇಳಿದ್ದಾರೆ.
ಇತ್ತೀಚೆಗಷ್ಟೇ ಗುಲಾಂ ನಬಿ ಆಜಾದ್, ಅಮರಿಂದರ್ ಸಿಂಗ್ ಅವರು ಪಕ್ಷವನ್ನು ತೊರೆದಿದ್ದು, ಪಕ್ಷವು ಹಿನ್ನೆಡೆ ಅನುಭವಿಸುತ್ತಿದೆ, ಇಂತಹ ಸಂದರ್ಭದಲ್ಲಿ ಅನುಭವಿ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಾಯಕತ್ವ ನೀಡುವುದು ಹೈ ಕಮಾಂಡ್ ನ ತಂತ್ರವಾಗಿದೆ. 66 ವಸಂತಗಳನ್ನು ಪೂರೈಸಿರುವ ಶಶಿ ತರೂರ್- ಮಾಧ್ಯಮದಲ್ಲಿ ಜನಪ್ರಿಯವಾದ ವ್ಯಕ್ತಿತ್ವ ಹೊಂದಿದವರು.
ತರೂರ್ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅತ್ಯಂತ ಚಟುವಟಿಕೆಯಿಂದ ತೊಡಗಿಸಿಕೊಂಡಿದ್ದಾರೆ. ಬ್ರಿಟಿಷ್ ವಸಾಹತುಶಾಹಿ ಮತ್ತು ಭಾರತದಲ್ಲಿ ಅದರ ಮುಂದುವರಿದ ಪರಿಣಾಮಗಳ ಕುರಿತು ಆಕ್ಸ್ ಫರ್ಡ್ ನಲ್ಲಿ ಮಾಡಿದ ಭಾಷಣವು ಜಾಗತಿಕವಾಗಿ ವೈರಲ್ ಆಗಿದೆ ಮತ್ತು ಇಲ್ಲಿಯವರೆಗೆ 9 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ತರೂರ್ ಅವರು ಉತ್ತಮ ವಾಗ್ಮಿ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
ತರೂರು ಇತರೆ ಕಾಂಗ್ರೆಸ್ ನಾಯಕರಂತಲ್ಲ, ಅವರು ಉತ್ತಮ ವ್ಯಕ್ತಿತ್ವ ಹೊಂದಿದ್ಧಾರೆ. 2020ರ ಆಗಸ್ಟ್ ನಲ್ಲಿ ಆಂತರಿಕ ಪಕ್ಷದ ಚುನಾವಣೆಗೆ ಒತ್ತಾಯಿಸಿ ಸೋನಿಯಾ ಗಾಂಧಿಗೆ ಪತ್ರ ಬರೆದವರಲ್ಲಿ ಜಿ.23 ನಾಯಕರ ಗುಂಪಿನಲ್ಲಿ ಗುರುತಿಸಿ ಕೊಂಡಿಲ್ಲ. ತರೂರ್ ಅವರು ಕಾರ್ತಿ ಚಿದಂಬರಂ ಮತ್ತು ಸಲ್ಮಾನ್ ಸೋಜ್ ಅವರಂತಹ ಕಾಂಗ್ರೆಸ್ ನಾಯಕರಿಂದ ಬೆಂಬಲವನ್ನು ಪಡೆದಿದ್ದಾರೆ.
ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ತರೂರ್, ಖರ್ಗೆ ಅವರು ಭಾರತದ ಅತ್ಯಂತ ಅನುಭವಿ ರಾಜಕಾರಣಿಗಳಲ್ಲಿ ಒಬ್ಬರು ಎಂದು ಒಪ್ಪಿಕೊಂಡರು. ಮತ್ತು ಅವರನ್ನು ‘ಕಾಂಗ್ರೆಸ್ ನ ಭೀಷ್ಮ ಪಿತಾಮಹ’ ಎಂದೂ ಕರೆದರು. ತರೂರ್ ಅವರು ಹೊಸ ಆಲೋಚನೆ ಮತ್ತು ಕಾರ್ಯಚಟುವಟಿಕೆಗಳನ್ನು ಕಾರ್ಯರೂಪಕ್ಕೆ ತರಲು ಮುಂದಾಗಿದ್ದಾರೆ.
ಶಶಿ ತರೂರ್ ಒಬ್ಬ ರಾಜತಾಂತ್ರಿಕ, ರಾಜಕಾರಣಿ, ಬರಹಗಾರ ಮತ್ತು ಸಾರ್ವಜನಿಕ ಬುದ್ಧಿಜೀವಿ, ಇವರು ಕೇರಳದ ತಿರುವನಂತಪುರಂನ ಸಂಸತ್ ಸದಸ್ಯರಾಗಿದ್ಧಾರೆ. ಪ್ರಸ್ತುತ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಅವರಿಗೆ ವಿಶ್ವಸಂಸ್ಥೆಯ ಅಂಡರ್-ಸೆಕ್ರೆಟರಿ ಜನರಲ್ ಆಗಿ ಕಾರ್ಯ ನಿರ್ವಹಿಸಿದ ಅನುಭವವಿದೆ.
ತರೂರು ಮಾಹಿತಿ ತಂತ್ರಜ್ಞಾನ ಮತ್ತು ಅಖಿಲ ಭಾರತ ವೃತ್ತಿಪರ ಕಾಂಗ್ರೆಸ್ನ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಹಿಂದೆ ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ (2014 ರಿಂದ 2019) ಸೇವೆ ಸಲ್ಲಿಸಿದ್ದಾರೆ.
ಲಂಡನ್ನಲ್ಲಿ ಹುಟ್ಟಿ ಭಾರತದಲ್ಲಿ ಬೆಳೆದ ತರೂರ್ ಪ್ರಪಂಚದಾದ್ಯಂತ ಕೆಲಸ ಮಾಡಿದ್ದಾರೆ. 1975 ರಲ್ಲಿ ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಪದವಿ ಪಡೆದರು ಮತ್ತು 1978 ರಲ್ಲಿ ಫ್ಲೆಚರ್ ಸ್ಕೂಲ್ ಆಫ್ ಲಾ ಮತ್ತು ಡಿಪ್ಲೋಮಸಿಯಿಂದ ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ವ್ಯವಹಾರಗಳಲ್ಲಿ ಡಾಕ್ಟರೇಟ್ನೊಂದಿಗೆ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದರು. 1978 ರಿಂದ 2007 ರವರೆಗೆ ತರೂರ್ ವಿಶ್ವಸಂಸ್ಥೆಯಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
2009 ರಲ್ಲಿ ತರೂರ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಗೆ ಸೇರುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು ಮತ್ತು ಲೋಕಸಭೆ ಚುನಾವಣೆಯಲ್ಲಿ ಗೆದ್ದು ಸಂಸತ್ತಿನ ಸದಸ್ಯರಾಗುವ ಮೂಲಕ ಕೇರಳದ ತಿರುವನಂತಪುರಂನಿಂದ ಪಕ್ಷವನ್ನು ಯಶಸ್ವಿಯಾಗಿ ಪ್ರತಿನಿಧಿಸುತ್ತಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಆಡಳಿತದಲ್ಲಿ ತರೂರ್ ಅವರು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾಗಿ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ತರೂರ್ ಅವರು 1981 ರಿಂದ 23 ಕಾಲ್ಪನಿಕ ಮತ್ತು ಕಾಲ್ಪನಿಕವಲ್ಲದ ಕೃತಿಗಳನ್ನು ರಚಿಸಿದ್ದಾರೆ, ಇವು ಭಾರತ ಮತ್ತು ಅದರ ಇತಿಹಾಸ, ಸಂಸ್ಕೃತಿ, ಚಲನಚಿತ್ರ, ರಾಜಕೀಯ, ಸಮಾಜ, ವಿದೇಶಾಂಗ ನೀತಿ ಮತ್ತು ಹೆಚ್ಚಿನ ಸಂಬಂಧಿತ ವಿಷಯಗಳ ಮೇಲೆ ಕೇಂದ್ರೀಕೃತವಾಗಿದೆ.
2019 ರಲ್ಲಿ, ಶಶಿ ತರೂರ್ ಅವರು ಆಂಗ್ಲ ಭಾಷೆಯ ಕಾಲ್ಪನಿಕವಲ್ಲದ ವಿಭಾಗದಲ್ಲಿ ಬ್ರಿಟಿಷ್ ರಾಜ್ ಕುರಿತು ತಮ್ಮ ಪುಸ್ತಕ ಆನ್ ಎರಾ ಆಫ್ ಡಾರ್ಕ್ನೆಸ್ಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು. ಅವರು ದಿ ನ್ಯೂಯಾರ್ಕ್ ಟೈಮ್ಸ್, ದಿ ವಾಷಿಂಗ್ಟನ್ ಪೋಸ್ಟ್, ಟೈಮ್, ನ್ಯೂಸ್ವೀಕ್ ಮತ್ತು ದಿ ಟೈಮ್ಸ್ ಆಫ್ ಇಂಡಿಯಾದಂತಹ ಪ್ರಕಟಣೆಗಳಲ್ಲಿ ನೂರಾರು ಅಂಕಣಗಳು ಮತ್ತು ಲೇಖನಗಳ ಲೇಖಕರಾಗಿದ್ದಾರೆ.
ನಾನು ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದಂದು ನನ್ನ ಚುನಾವಣಾ ಪ್ರಚಾರವನ್ನು ಪ್ರಾರಂಭಿಸುತ್ತಿದ್ದೇನೆ ಎಂದು ಹೇಳಿರುವ ಖರ್ಗೆ, ನಾನು ಯಾವಾಗಲೂ ನನ್ನ ಸಿದ್ಧಾಂತ ಮತ್ತು ನೀತಿಗಳಿಗಾಗಿ ಹೋರಾಡುತ್ತೇನೆ. ನಾನು ಹಲವಾರು ಬಾರಿ ವಿರೋಧ ಪಕ್ಷದ ನಾಯಕ, ಮಂತ್ರಿ ಮತ್ತು ಶಾಸಕನಾಗಿದ್ದೇನೆ. ಈಗ ಮತ್ತೆ ಹೋರಾಡಲು ಬಯಸುತ್ತೇನೆ ಮತ್ತು ಅದೇ ನೈತಿಕತೆ ಮತ್ತು ಸಿದ್ಧಾಂತವನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಬಯಸುತ್ತೇನೆ ಎಂದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯು ಪಕ್ಷದೊಳಗಿನ ಸ್ಪರ್ಧೆಯಲ್ಲ, ಆದರೆ ಬಿಜೆಪಿಯನ್ನು ಹೇಗೆ ಪರಿಣಾಮಕಾರಿಯಾಗಿ ಎದುರಿಸಬೇಕು ಎಂಬುದನ್ನು ಆಯ್ಕೆ ಮಾಡಲು ಪಕ್ಷದ ಸದಸ್ಯರಿಗೆ ಇರುವ ಅವಕಾಶವಾಗಿದೆ ಎಂದು ಶಶಿ ತರೂರ್ ಹೇಳಿದ್ದಾರೆ.
ಒಟ್ಟಿನಲ್ಲಿ ಎಐಸಿಸಿ ಗಾದಿಗಾಗಿ ಅತ್ಯಂತ ಅನುಭವಿ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಹೊಸ ಬದಲಾವಣೆಗೆ ತೆರೆದುಕೊಳ್ಳುವ ಮನಸ್ಥಿತಿ ಹೊಂದಿರುವ ಪ್ರಖ್ಯಾತ ಲೇಖಕ, ಅಂಕಣಕಾರ ಶಶಿತರೂರು ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಅ.19ರ ಚುನಾವಣೆ ಫಲಿತಾಂಶದ ನಂತರ ಎಐಸಿಸಿ ಸಾರಥಿ ಯಾರಾಗುತ್ತಾರೆ ಎಂಬುದು ತಿಳಿದು ಬರಲಿದೆ.




