ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಜಾಗತಿಕ, ಧಾರ್ಮಿಕ ಸಂಕಲ್ಪ ಕೋಟಿಗೀತಾ ಲೇಖನ ಯಜ್ಞಕ್ಕಾಗಿ ಯಜ್ಞಕರ್ತರ ನೋಂದಣಿ ಅಭಿಯಾನವನ್ನು ಮಂಡ್ಯದಲ್ಲಿ ಆರಂಭಿಸಲಾಗಿದೆ ಎಂದು ಗೀತಾ ಪ್ರಚಾರಕ ರಮಣಾಚಾರ್ಯ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ, ಮತ, ಧರ್ಮ, ಲಿಂಗ ಮತ್ತು ವಯೋಭೇದವಿಲ್ಲದೇ ಭಗವದ್ಗೀತೆಯನ್ನು ಬರೆದು, 2024 ರಿಂದ 2026 ರ ಒಳಗಿನ ಶ್ರೀ ಪುತ್ತಿಗೆ ಪರ್ಯಾಯದ 2 ವರ್ಷದ ಅವಧಿಯಲ್ಲಿ ಶ್ರೀಪಾದರ ಮೂಲಕ ಉಡುಪಿ ಕೃಷ್ಣನಿಗೆ ಸಮರ್ಪಿಸಿ ಪ್ರಸಾದ ರೂಪವಾಗಿ ತಾವೇ ಬರೆದ ಭಗವದ್ಗೀತಾ ಗ್ರಂಥಗಳನ್ನು ಸ್ವೀಕರಿಸಬಹುದು ಎಂದು ಹೇಳಿದರು.
ಆತ್ಮೋದ್ಧಾರ ಮತ್ತು ಲೋಕ ಕಲ್ಯಾಣಾರ್ಥವಾಗಿರುವ ಈ ಸಂಕಲ್ಪಕ್ಕೆ ಧೀಕ್ಷಾಬದ್ಧರಾಗುವ ಮೂಲಕ ಮುಂದಿನ ತಲೆಮಾರಿಗೆ ಗೀತಾ ಮೌಲ್ಯಗಳನ್ನು ಹಸ್ತಾಂತರಿಸುವ ಉದ್ದೇಶ ಹೊಂದಿದೆ. ಪ್ರಸ್ತುತ ಉಡುಪಿಯಿಂದ ಬಂದಿರುವ ಪ್ರಚಾರಕರ ತಂಡ ಮಂಡ್ಯದಲ್ಲಿ ಮೊಕ್ಕಾಂ ಹೂಡಿದ್ದು, ಗೀತಾ ಮನವಿ, ಸಂಕಲ್ಪಸೂತ್ರ ಸಹಿತ ಗೀತಾ ಲೇಖನ ಪುಸ್ತಕಗಳು ಲಭ್ಯವಿದೆ, ಮಂಡ್ಯ ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಈ ಅಭಿಯಾನವನ್ನು ಯಶಸ್ವಿಗೊಳಿಸುವಂತೆ, ಹೆಚ್ಚಿನ ಮಾಹಿತಿಗಾಗಿ ಮೊ : 8792158946, 9448391301, ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಮನವಿ ಮಾಡಿದರು.
ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಮಾತನಾಡಿ, ಕಳೆದ 8 ವರ್ಷಗಳ ಹಿಂದೆ ಭಗವದ್ಗೀತಾ ಅಭಿಯಾನವನ್ನು ಮಂಡ್ಯದಲ್ಲಿ ಆರಂಭಿಸಲಾಗಿತ್ತು. ಈ ಕೋಟಿಗೀತಾ ಲೇಖನಯಜ್ಞ ನೋಂದಣಿ ಅಭಿಯಾನ ಹಮ್ಮಿಕೊಂಡಿದ್ದು ಜನರು ಇದನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.
ಗೋಷ್ಠಿಯಲ್ಲಿ ಕೊಳಲು ಪತ್ರಿಕೆ ಸಂಪಾದಕ, ವಿಶ್ವನಾಥ ಬಾಬು, ಆನಂತಪದ್ಮನಾಭ ಹಾಗೂ ಚಂದ್ರಶೇಖರ್, ಉಪಸ್ಥಿತರಿದ್ದರು.




