ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ವನ್ಯಜೀವಿಗಳ ಪಾತ್ರವು ಪ್ರಮುಖವಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹದೇವಸ್ವಾಮಿ ತಿಳಿಸಿದರು.
ಮಳವಳ್ಳಿ ಪಟ್ಟಣದಲ್ಲಿ ಅರಣ್ಯ ಇಲಾಖೆ ಹಾಗೂ ವಿವಿಧ ಅಂಗಸಂಸ್ಥೆಗಳ ಸಹಯೋಗದೊಂದಿಗೆ ನಡೆದ ವನ್ಯಜೀವಿ ಸಪ್ತಾಹ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರ ಹಾಗೂ
ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಾಥ ನಡೆಸಲಾಗುತ್ತಿದೆ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.
ಇಂದು ಪ್ರಾಣಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ, ಮನುಷ್ಯರ ದುರಾಸೆಯಿಂದ ಸಂಕಷ್ಟದ ಸುಳಿಗಳಲ್ಲಿ ಸಿಲುಕಿದೆ. ಇದರಿಂದ ನಮ್ಮ ನೈಸರ್ಗಿಕ ಸಂಪತ್ತಿಗೆ ಬಹಳಷ್ಟು
ಹಾನಿ ಆಗುತ್ತಿದೆ, ವನ್ಯ ಪ್ರಾಣಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮಹತ್ತರವಾದ ಪ್ರಯತ್ನಗಳನ್ನು ನಾವು ಮಾಡಲೇ ಬೇಕಾಗಿದೆ ಎಂದರು.
ದೇಶದಲ್ಲಿರುವ ವೈವಿಧ್ಯಮಯ ಪ್ರಾಣಿಗಳನ್ನು ಸಂರಕ್ಷಿಸುವ ಉದ್ದೇಶದಿಂದ ವನ್ಯಜೀವಿ ಸಪ್ತಾಹವನ್ನು ಆಚರಿಸುತ್ತದೆ, ಈ ಸಪ್ತಾಹದಲ್ಲಿ ವನ್ಯಜೀವಿ ಸಂರಕ್ಷಣೆಯ ಮಹತ್ವವನ್ನು
ಜನರಿಗೆ ತಿಳಿಸಲು ತಜ್ಞರು ಕಾರ್ಯಾಗಾರಗಳನ್ನು, ಅಭಿಯಾನಗಳನ್ನು ನಡೆಸುತ್ತಾರೆ. ಇದಲ್ಲದೇ, ಇದನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸುವಂತೆ ಮಾಡಲು ಹಲವಾರು ಜಾಗೃತಿ
ಮೂಡಿಸುವ ಚಟುವಟಿಕೆಗಳನ್ನು ವಿವಿಧ ಹಂತಗಳಲ್ಲಿ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರೋಟರಿ ವಿದ್ಯಾರ್ಥಿಗಳು ಜಾಥ ನಡೆಸಿ ವನ್ಯಜೀವಿ ಸಪ್ತಾಹದ ಬಗ್ಗೆ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿ
ಎನ್.ಸಿ.ಮಹದೇವ್ಗೌಡ, ಶಿವರಾಜ್, ರೋಟರಿಶಾಲಾ ಮುಖ್ಯ ಶಿಕ್ಷಕ ಮೋಹನ್, ನಂದೀಶ್
ಇದ್ದರು.




