Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಹಾ ಕುಂಭಮೇಳ: ನಿರ್ಮಲಾನಂದನಾಥ ಸ್ವಾಮೀಜಿ ಮೂಲಕ ಒಕ್ಕಲಿಗರಿಗೆ ಗಾಳ?


  • ಮಹಾ ಕುಂಭಮೇಳಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮನ
  • ಒಕ್ಕಲಿಗರ ರಾಜಕೀಯ ಗಮನ ಸೆಳೆಯುತ್ತದೆಯೇ ಇಬ್ಬರು ಸ್ವಾಮೀಜಿಗಳ ಮಹಾ ಭೇಟಿ
  • ನಿರ್ಮಲಾನಂದನಾಥ ಸ್ವಾಮೀಜಿ ಕರ್ನಾಟಕದ ಯೋಗಿ ಆದಿತ್ಯನಾಥ್ ಆಗಲಿದ್ದಾರಾ?

ಕೆ.ಆರ್.ಪೇಟೆಯಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಶ್ರೀ ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನಾಳೆಯಿಂದ ಮೂರು ದಿನಗಳ ಕಾಲ ಭಾಗವಹಿಸಲಿದ್ದಾರೆ.

ಅ.14ರಂದು ಕುಂಭಮೇಳದ ಉದ್ಘಾಟನೆ, 15ರಂದು ಧಾರ್ಮಿಕ ಸಭೆ ಹಾಗೂ 16 ರಂದು ನಡೆಯುವ ಸಮಾರೋಪ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನಿರ್ಮಲಾನಂದನಾಥ ಸ್ವಾಮೀಜಿ ವಹಿಸಲಿದ್ದಾರೆ.

16 ರಂದು ನಡೆಯುವ ಸಮಾರೋಪ ಸಮಾರಂಭವನ್ನು ನಾಥ ಪಂಥದ ಅರ್ಚಕ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉದ್ಘಾಟಿಸಿದರೆ, ದಿವ್ಯ ಸಾನಿಧ್ಯವನ್ನು ನಿರ್ಮಲಾನಂದನಾಥ ಸ್ವಾಮೀಜಿ ವಹಿಸಲಿದ್ದಾರೆ.

ಈ ಮೂಲಕ ಇಬ್ಬರೂ ನಾಥ ಪಂಥದ ಸ್ವಾಮೀಜಿಗಳು ಸೇರಿ ಕರ್ನಾಟಕದಲ್ಲಿ ಒಕ್ಕಲಿಗ ಸಮುದಾಯಕ್ಕೆ ಗುಪ್ತ ಸಂದೇಶ ನೀಡಲಿದ್ದಾರೆ ಎಂಬ ಮಾಹಿತಿಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. ಕುಂಭಮೇಳದ ಮೂಲಕ ಒಕ್ಕಲಿಗರಿಗೆ ಗಾಳ ಹಾಕುವ ಪ್ರಯತ್ನಕ್ಕೆ ಬಿಜೆಪಿ ಕೈ ಹಾಕಿದೆ. ಆ ಮೂಲಕ ಒಕ್ಕಲಿಗರ ಪಾಳೇಪಟ್ಟಿನ ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿಗೆ ನೆಲೆ ಒದಗಿಸಲು ಕುಂಭಮೇಳ ಬಳಸಿಕೊಳ್ಳಲಾಗುತ್ತಿದೆ. ಹಾಗಾಗಿ ಇದು ಜನರ ಉತ್ಸವವಾಗದೆ ಬಿಜೆಪಿ ಉತ್ಸವವಾಗಿದೆ ಎಂದು ಜನರೇ ಆರೋಪಿಸುತ್ತಿದ್ದಾರೆ.

ಆರ್ ಎಸ್ ಎಸ್ ನಂಟು?
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಕಠೋರ ಹಿಂದುತ್ವದ ಮೂರ್ತರೂಪದ ರಾಜಕಾರಣಿ. ನಾಥ ಪಂಥದ ಧಾರ್ಮಿಕ ಮುಖ್ಯಸ್ಥರಾಗಿರುವ ಯೋಗಿ ಆದಿತ್ಯನಾಥ ಉತ್ತರಪ್ರದೇಶದ ಘೋರಖಪುರ ಕ್ಷೇತ್ರದಿಂದ ಐದು ಬಾರಿ ಸಂಸದರಾಗಿ, ಎರಡನೇ ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿ ಅಧಿಕಾರ ನಡೆಸುತ್ತಿದ್ದಾರೆ. ಅದೇ ರೀತಿ ನಾಥ ಪಂಥದ ನಿರ್ಮಲಾನಂದನಾಥ ಸ್ವಾಮೀಜಿ ಒಕ್ಕಲಿಗ ಸಮುದಾಯದ ಪ್ರಬಲ ಮಠವಾದ ಆದಿಚುಂಚನಗಿರಿ ಪೀಠಾಧ್ಯಕ್ಷರಾಗಿದ್ದಾರೆ.

ಯೋಗಿ ಆದಿತ್ಯನಾಥ್ ಕರ್ನಾಟಕಕ್ಕೆ ಬಂದರೆ ಅಲ್ಲಿ ಅವರ ಪಕ್ಕದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಸದಾ ಇರುತ್ತಾರೆ. ಇತ್ತೀಚೆಗೆ ಧರ್ಮಸ್ಥಳ ಕ್ಷೇಮವನ ಉದ್ಘಾಟನೆಯಲ್ಲಿ ಇಬ್ಬರೂ ಭಾಗಿಯಾಗಿದ್ದರು. ಯೋಗಿ ಆದಿತ್ಯನಾಥ್ ಎರಡನೇ ಬಾರಿ ಉತ್ತರ ಪ್ರದೇಶ ಸಿಎಂ ಆಗಿ ಪದಗ್ರಹಣ ಮಾಡಿದ ಸಮಾರಂಭದಲ್ಲಿ ಭಾಗವಹಿಸಿದ್ದರು, ಅಯೋಧ್ಯೆಯ ರಾಮ ಮಂದಿರ ಶಿಲಾನ್ಯಾಸ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಆದಿಚುಂಚನಗಿರಿ ಮಠಕ್ಕೂ ಭೇಟಿ ಕೊಟ್ಟಿರುವ ಯೋಗಿ ಆದಿತ್ಯನಾಥ್ ಹಾಗೂ ನಿರ್ಮಲಾನಂದ ಸ್ವಾಮೀಜಿ ಮಧ್ಯೆ ಆತ್ಮೀಯತೆ ಇದೆ. ಈ ಹಿನ್ನೆಲೆಯಲ್ಲಿಯೇ ನಿರ್ಮಲಾನಂದನಾಥ ಸ್ವಾಮೀಜಿ ಕರ್ನಾಟಕದ ಯೋಗಿ ಆದಿತ್ಯನಾಥ್ ಆಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು.


ಇದನ್ನೂ ಓದಿ: ಕುಂಭಮೇಳದಲ್ಲಿ ಆದಿ ಶಂಕರರಿಗಿಲ್ಲ ಪ್ರಾಶಸ್ತ್ಯ !!


 

ಇನ್ನು ಸಾವರ್ಕರ್ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋಗಿದ್ದ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಕುವೆಂಪು ಅವರಿಗೆ ಹೋಲಿಸಿದ್ದರು. ಆರ್ ಎಸ್ ಎಸ್ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುವ ಸ್ವಾಮೀಜಿ ಕಂಡರೆ ಆರ್ ಎಸ್ ಎಸ್ ಹಾಗೂ ಬಿಜೆಪಿ ನಾಯಕರಿಗೂ ಅಚ್ಚು ಮೆಚ್ಚು.

ಇನ್ನು ಪ್ರಧಾನಿ ನರೇಂದ್ರ ಮೋದಿ ನಂತರ ಅವರ ಜಾಗಕ್ಕೆ ಕಟ್ಟರ್ ಹಿಂದುತ್ವವಾದಿ ಯೋಗಿ ಆದಿತ್ಯನಾಥ್ ತರುತ್ತೇವೆಂದು ಸಂಘ ಪರಿವಾರ ಈಗಾಗಲೇ ನಿರ್ಧರಿಸಿ ಆಗಿದೆ. ಹಾಗಾದಾಗ ಏನು ಬೇಕಾದರೂ ಆಗಬಹುದು. ಯಾಕೆಂದರೆ ಸನ್ಯಾಸಿಯೇ ಸಂಸದ,ಶಾಸಕ,ಸಿಎಂ ಆಗಿರುವ ಉದಾಹರಣೆ ನಮ್ಮ ದೇಶದ ರಾಜಕಾರಣದಲ್ಲಿದೆ. ಹಾಗಾದಾಗ ಕರ್ನಾಟಕದಲ್ಲೂ ಸನ್ಯಾಸಿ ಒಬ್ಬ ಸಿಎಂ ಆಗಬಹುದು ಎಂಬುದನ್ನು ಅಷ್ಟು ಸುಲಭವಾಗಿ ತಳ್ಳಿ ಹಾಕಲಾಗದು.

ಒಕ್ಕಲಿಗರಿಗೆ ಗಾಳ?
ಬಿಜೆಪಿ ಪಕ್ಷದ ಹಾಗೂ ಆ ಪಕ್ಷದ ರಾಜಕಾರಣಿಗಳ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ನಾಥ ಪಂಥದ ನೆಪದಲ್ಲಿ ಯೋಗಿ ಆದಿತ್ಯನಾಥ್ ಬೆಸೆದರೆ ಮುಂದಿನ ಚುನಾವಣೆಯಲ್ಲಿ ಪ್ರಬಲ ಒಕ್ಕಲಿಗ ಸಮುದಾಯದ ಮತಗಳು ಬಿಜೆಪಿ ತೆಕ್ಕೆಗೆ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ. ಹಳೇ ಮೈಸೂರು ಭಾಗದಲ್ಲಿರುವ 89 ಕ್ಷೇತ್ರಗಳಲ್ಲಿ ಒಕ್ಕಲಿಗರ ಪ್ರಭಾವ ಹೆಚ್ಚು. ಈ ಭಾಗದಲ್ಲಿ 50 ಕ್ಕೂ ಹೆಚ್ಚು ಸ್ಥಾನ ಗಳಿಸಿದರೆ ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬಹುದು ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ.

ಆದಿಚುಂಚನಗಿರಿ ಮಠಕ್ಕೆ ಆಗಾಗ್ಗೆ ಸಿಎಂ ಸೇರಿದಂತೆ ಬಿಜೆಪಿ ಪಕ್ಷದ ರಾಜಕಾರಣಿಗಳು ಭೇಟಿ ನೀಡಿ ಸ್ವಾಮೀಜಿಯೊಂದಿಗೆ ಮಾತುಕತೆ ನಡೆಸುತ್ತಿರುವುದನ್ನು ನೋಡಿದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಒಕ್ಕಲಿಗ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿದೆ ಎಂಬುದು ಗೊತ್ತಾಗುತ್ತದೆ.

ಒಟ್ಟಾರೆ ಹೇಳುವುದಾದರೆ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಹೀಗೆ ಆಗುತ್ತೆ ಎಂದು ಇಂದು ಹೇಳಲು ಸಾಧ್ಯವಿಲ್ಲ. ಅದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ವಿಚಾರದಲ್ಲೂ ಕೂಡಾ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ