-
ಕುಸಿತು ಬಿದ್ದ ಸೇತುವೆ-ವಿದ್ಯುತ್ ಕಂಬಗಳು
- ಭಾರೀ ಮಳೆಗೆ ಕೊಚ್ಚಿ ಹೋದ ಬೆಳೆ-ಕೋಟ್ಯಾಂತರ ರೂ.ನಷ್ಟ
ಮಂಡ್ಯ ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿ ಸುರಿದ ಧಾರಕಾರ ಮಳೆಗೆ ಮಂಡ್ಯ ಜಿಲ್ಲಾದ್ಯಂತ ಬಹುತೇಕ ಕೆರೆಗಳು ಕೋಡಿ ಬಿದ್ದು, ಸಾವಿರಾರು ಎರಕೆಯಲ್ಲಿ ಬೆಳೆಗಳು ಜಲಾವೃತಗೊಂಡು ನಷ್ಷವಾಗುವುದರ ಜೊತೆಗೆ, ರಸ್ತೆ, ಸೇತುವೆಗಳು ಜಲಾವೃತಗೊಂಡು ನೀರಿನಲ್ಲಿ ಕೊಚ್ಚಿ ಹೋಗಿ ರಸ್ತೆ ಸಂಚಾರ ಬಂದ್ ಆಗಿದೆ.
ಮತ್ತೆ ಒಡೆದ ಬೂದನೂರು ಕೆರೆ : ಬೆಂಗಳೂರು-ಮೈಸೂರು ಹೆದ್ದಾರಿ ಬಂದ್
ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲೇ ಇರುವ ಬೂದನೂರು ಕೆರೆ ಭಾರಿ ಮಳೆಯಿಂದ ಮತ್ತೆ ಒಡೆದಿದೆ, ಇದರಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಬೆಂಗಳೂರು-ಮೈಸೂರು ಹೆದ್ದಾರಿಯ ಬೂದನೂರಿನಿಂದ ಹಿಡಿದು ಕಿರಗಂದೂರು ಗೇಟ್ ಬಳಿಯ ವಿ.ಸಿ.ಫಾರಂ ಗೇಟ್ ವರೆಗೆ ರಸ್ತೆಯ ಇಕ್ಕೆಲಗಳೆಲ್ಲ ಸಂಪೂರ್ಣ ನೀರಿನಿಂದ ಆವೃವಾಗಿವೆ, ಅಂಗಡಿ ಮುಂಗಟ್ಟುಗಳು, ಬೈಕ್, ಕಾರುಗಳು ನೀರಿನಲ್ಲಿ ಮುಳುಗಿ ಹೋಗಿ ಅಪಾರ ನಷ್ಟ ಸಂಭವಿಸಿದೆ. ಅಲ್ಲದೆ ಹೆದ್ದಾರಿ ಸಮೀಪದ ಗದ್ದೆಗಳಲ್ಲಿ ನಾಟಿ ಮಾಡಿದ್ದ ಭತ್ತ, ಕಬ್ಬು ಬೆಳೆ ಸೇರಿದಂತೆ ಇನ್ನಿತರೆ ಬೆಳೆಗಳು ಕೊಚ್ಚಿ ಹೋಗಿ ಅಪಾರ ನಷ್ಟ ಉಂಟಾಗಿದೆ.
ಚಿಕ್ಕಮಂಡ್ಯ ಕೆರೆ
ಮಂಡ್ಯನಗರದ ಸಮೀಪ ಚಿಕ್ಕಮಂಡ್ಯ ಕೆರೆ ಅಂಗಳದಲ್ಲಿರುವ ವಿವೇಕಾನಂದ ಬಡಾವಣೆ ಸಂಪೂರ್ಣವಾಗಿ ಜಲಾವೃತವಾಗಿದೆ. ಇಡೀ ಪ್ರದೇಶ ಜಲದಿಗ್ಭಂಧನ ವಿಧಿಸಿದಂತಾಗಿದ್ದು, ಇಲ್ಲಿನ ಮನೆಗಳಲ್ಲಿ ವಾಸ ಮಾಡುವ ನಿವಾಸಿಗಳು ಇಡೀ ರಾತ್ರಿ ಊಟ, ನಿದ್ರೆಯಿಲ್ಲದೇ ಮಹಡಿ ಏರಿ ಕುಳಿತು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ.
ಪಕ್ಕದಲ್ಲಿರುವ ಚಿಕ್ಕ ಮಂಡ್ಯ ಕೆರೆ ಕೆರೆಯ ನೀರು ವಿವೇಕಾನಂದ ಬಡಾವಣೆಗೆ ನುಗ್ಗಿದೆ. ಅದರಲ್ಲೂ ಬೀಡಿ ಕಾರ್ಮಿಕರ ಬಡಾವಣೆ ಹೆಚ್ಚಿನ ಹಾನಿಗೀಡಾಗಿದೆ. ಮಳೆ ನೀರು ಎಲ್ಲಾ ಮನೆಗಳಗೆ ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ.
ಎಲ್ಲಾ ಮನೆಗಳ ಮುಂದೆ ಮೂರು-ನಾಲ್ಕು ಅಡಿ ನೀರು ನಿಂತಿದೆ. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮನೆಯಲ್ಲಿದ್ದ ವಸ್ತುಗಳು ನೀರಿನಲ್ಲಿ ಮುಳುಗಿದ್ದು, ಜನರು ರಾತ್ರಿ ಪೂರಾ ನಿದ್ದೆ ಇಲ್ಲದೆ ಮನೆಯ ಮಹಡಿಯ ಮೇಲೆ ವಾಸ ಮಾಡುವ ದುಸ್ಥಿತಿ ಉಂಟಾಗಿದೆ.
ಹೊಳಲು-ಮಂಡ್ಯ ಮೇಲ್ಸೇತುವೆ ಜಲಾವೃತ
ಬೆಂಗಳೂರು-ಮೈಸೂರು ಹೆದ್ಧಾರಿ ಬೈಪಾಸ್ ರಸ್ತೆಗೆ ಹೊಳಲು ಗ್ರಾಮದ ಬಳಿ ನಿರ್ಮಿಸಿರುವ ಮೇತ್ಸೇಲುವೆ ನೀರಿನಿಂದ ಆವೃತಗೊಂಡಿದೆ, ಅಲ್ಲದೆ ಅದರ ಅಕ್ಕ ಪಕ್ಕದ ನೂರಾರು ಎಕರೆಯಲ್ಲಿ ಬೆಳೆಯಲಾಗಿದೆ ಭತ್ತ ಜಲಾವೃತಗೊಂಡು ಭಾರೀ ನಷ್ಟ ಸಂಭವಿಸಿದೆ.
ಹೊಳಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬೈಪಾಸ್ ಮೇಲ್ಸೇತುವೆಯನ್ನು ಅತ್ಯಂತ ಕಿರಿದಾಗಿ ಅವ್ಯಜ್ಞಾನಿಕವಾಗಿ ನಿರ್ಮಾಣ ಮಾಡಿರುವುದೇ ಇಂತಹ ಅವಘಡಗಳಿಗೆ ಕಾರಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುದಗಂದೂರು : 200 ಎಕರೆ ಬೆಳೆ ನಷ್ಟ
ಮಂಡ್ಯ ತಾಲೂಕಿನ ದುದ್ದ ಹೋಬಳಿಯ ಮುದಗುಂದೂರು ಗ್ರಾಮದಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ 200 ಎಕರೆಯಷ್ಟು ಬೆಳೆ ನಷ್ಟ ಸಂಭವಿಸಿದೆ. ಮುದಗಂದೂರು ಕೆರೆಯಿಂದ ಹೋಗುವ ಹಳ್ಳದ ನೀರು ಭಾರೀ ಪ್ರಮಾಣದಲ್ಲಿ ಏರಿಕೆಯಲ್ಲಿ ಗದ್ದೆಗಳಿಗೆ ನುಗ್ಗಿ ನಷ್ಟ ಸಂಭವಿಸಿದೆ. ಸತತವಾಗಿ 3 ತಿಂಗಳಿಂದ ವರುಣನ ಆರ್ಭಟಕ್ಕೆ ಮುದಗಂದೂರು ಗ್ರಾಮಸ್ಥರು ತತ್ತರಿಸಿ ಹೋಗಿದ್ದಾರೆ. ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದದೆನಿರ್ಲಕ್ಷ ಧೋರಣೆ ತಾಳಿದ್ದಾರೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಡಿ ಒಡೆದ ಸೂಳೆಕೆರೆ
ಮದ್ದೂರು ತಾಲ್ಲೂಕಿನ ಮುಟ್ಟನಹಳ್ಳಿ ಸಮೀಪದ ಸೂಳೆಕೆರೆ ಕೋಡಿ ಒಡೆದು ಬಾರಿ ಪ್ರಮಾಣದ ನೀರು ಹೊರ ಬರುತ್ತಿದೆ, ಇದರಿಂದ ರೈತರ ಬೆಳೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸೂಳೆಕೆರೆ ಕೆರೆಯಿಂದ ಸುಮಾರು 16,000 ಕ್ಯುಸೆಕ್ಸ್ ಗೂ ನೀರು ಹೊರಬರುತ್ತಿದ್ದು ಇದರಿಂದಾಗಿ ಕೆರೆಯ ಕೋಡಿಯು ಭಾಗಶಃ ಒಡೆದು ಸೂಳೆಕೆರೆ ದಕ್ಷಿಣ ನಾಲೆಯ ಭಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದು ಇದರಡಿಯಲ್ಲಿ ಬರುವ ಮುಟ್ಟನಳ್ಳಿ, ದೊಡ್ಡರಸಿನಕೆರೆ, ಗೌಡಯ್ಯನದೊಡ್ಡಿ , ಕುರಿಕೆಂಪನದೊಡ್ಡಿ, ದೇವರಳ್ಳಿ, ಕಾರ್ಕಳ್ಳಿ, ಅಣ್ಣೂರು, ಮೆಳ್ಳಳ್ಳಿ ಗ್ರಾಮಗಳ ಸುಮಾರು 3800 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಮುಂಗಾರು ಬೆಳೆಗೆ ನೀರೊದಗಿಸುವುದು ಕಷ್ಟವಾಗುತ್ತದೆ ಎನ್ನಲಾಗಿದೆ.
ಹನಿಯಂಬಾಡಿ ಹೆಬ್ಬಾಳದಲ್ಲಿ ಹೆಚ್ಚಿದ ನೀರು : ಬೆಳೆ ನಷ್ಟ
ಮಂಡ್ಯ-ಹನಿಯಂಬಾಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಮೀಪದ ಹೆಬ್ಬಾಳದಲ್ಲಿ ಅಪಾರವಾದ ನೀರು ಹರಿದು ಬರುತ್ತಿದ್ದು, ಹೆಬ್ಬಾಳದ ಅಕ್ಕಪಕ್ಕದ ನೂರಾರು ಎಕರೆಯ ಬೆಳೆಗಳು ಜಲಾವೃತಗೊಂಡು ಅಪಾರ ನಷ್ಟ ಸಂಭವಿಸಿದೆ.
ಹೆಬ್ಬಾಳದ ಸೇತುವೆ ಬಳಿ ಅಪಾರ ಪ್ರಮಾಣದ ನೀರು ಗದ್ದೆಗೆ ನುಗ್ಗಿ ಹರಿಯುತ್ತಿದ್ದು, ಕಬ್ಬು, ಭತ್ತದ ಬೆಳೆಗಳು ಸಂಪೂರ್ಣವಾಗಿ ಕೊಚ್ಚಿ ಹೋಗಿದೆ.
ಮಂಡ್ಯ – ಕೆ.ಎಂ.ದೊಡ್ಡಿ ರಸ್ತೆ ಬಂದ್
ಭಾರಿ ಮಳೆಗೆ ಬೂದನಹೊಸೂರು ಸಮೀಪದ ಸೇತುವೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು ಮಂಡ್ಯ-ಕೆ.ಎಂ.ದೊಡ್ಡಿ ರಸ್ತೆ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.
ಎಲ್ಲಾ ಕೆಎಸ್ಆರ್ಟಿಸಿ ಬಸ್ಸುಗಳು ಬದಲಿ ಮಾರ್ಗವಾದ ಮಂಡ್ಯ-ಕಿರುಗಾವಲು ಮಾರ್ಗವಾಗಿ ಸಂಚಾರ ನಡೆಸಿ ನಂತರ ಮಳವಳ್ಳಿ ರಸ್ತೆಗೆ ಸಂಪರ್ಕ ಪಡೆದುಕೊಳ್ಳುತ್ತಿವೆ.




