ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಗೆ ಕೋಳಿ ಫಾರಂ ನೆಲಸಮವಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಮಂಡ್ಯ ತಾಲೂಕಿನ ಕಿರಗಂದೂರಿನ ಕ್ಯಾತುಂಗೆರೆ – ಮೋಳೆ ಕೊಪ್ಪಲು ರಸ್ತೆಯಲ್ಲಿರುವ ಕೆ.ಎಚ್.ಸಂಜೀವ್ ಎಂಬುವವರಿಗೆ ಸೇರಿದ ಕೋಳಿ ಫಾರಂ ಗೋಡೆ,ಮರ, ಕಂಬಗಳು ಸಂಪೂರ್ಣವಾಗಿ ನೆಲಕಚ್ಚಿದೆ. ಕಳೆದ ಮೂರು ದಿನಗಳಿಂದ ಬೀಳುತ್ತಿರುವ ಭಾರೀ ಮಳೆಗೆ ಕಳೆದ ರಾತ್ರಿ ಈ ಅವಘಡ ಸಂಭವಿಸಿದೆ.
ಗೋಡೆಗಳು ಕುಸಿದು ಬಿದ್ದು, ನೀರಿನ ಟ್ಯಾಂಕ್ ಧರೆಗೆ ಉರುಳಿದೆ. ಮಂಗಳೂರು ಹಂಚು, ಮರದ ಜಂತುಗಳು, ಕಲ್ಲು ಕಂಬ ಮುರಿದುಬಿದ್ದಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಕೋಳಿಫಾರಂ ಮಾಲೀಕ ಕೆ.ಎಚ್. ಸಂಜೀವ್ ಅವರು ಮಾತನಾಡಿ, ಕೋಳಿ ಫಾರಂ 120ಅಡಿ ಉದ್ದ 24 ಅಗಲ ನಿರ್ಮಾಣ ಮಾಡಲಾಗಿತ್ತು, 10ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಲಾಗಿತ್ತು, ಕಳೆದ ರಾತ್ರಿ ಬಿದ್ದ ಭಾರಿ ಮಳೆಯಿಂದ ಕೋಳಿ ಫಾರಂನ, ಗೋಡೆ, ನೀರಿನ ಟ್ಯಾಂಕ್, ಜಂತಿ, ಹಂಚು, ಕಲ್ಲಿನ ಕಂಬ ನೆಲಕ್ಕೆ ಬಿದ್ದು ಸಂಪೂರ್ಣ ಹಾಳಾಗಿದೆ.
ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಆಗಿದ್ದು ಸರ್ಕಾರಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.




