ನಾಗಮಂಗಲ ಪುರಸಭೆಯ 3 ನೇ ವಾರ್ಡಿಗೆ ನಡೆದ ಉಪಚುನಾವಣೆಯ ಫಲಿತಾಂಶ ಇಂದು ನಡೆದಿದ್ದು, ಜೆಡಿಎಸ್ ಅಭ್ಯರ್ಥಿ ಸೌಮ್ಯ ತಿರುಮಲಯ್ಯ ಗೆಲುವು ಸಾಧಿಸಿದ್ದಾರೆ.
ತೀವ್ರ ಕುತೂಹಲ ಕೆರಳಿಸಿದ್ದ ಮೂರನೇ ವಾರ್ಡಿನ ಉಪಚುನಾವಣೆಯಲ್ಲಿ ಕಾಂಚಾಣದ ಸದ್ದು ಜೋರಾಗಿ ನಡೆದಿತ್ತು.ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ನಡುವೆ ಸಾಕಷ್ಟು ಜಿದ್ದಾಜಿದ್ದಿನಿಂದ ನಡೆದ ಕದನದಲ್ಲಿ, ಅಂತಿಮವಾಗಿ ಜೆಡಿಎಸ್ ಪಕ್ಷದ ಸೌಮ್ಯ ತಿರುಮಲಯ್ಯ 247 ಮತ ಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ರಂಗಪ್ಪ (209 ಮತ) ಅವರನ್ನು 38 ಮತಗಳ ಅಂತರದಿಂದ ಪರಾಭವ ಗೊಳಿಸಿದರು. ಬಿಜೆಪಿ ಅಭ್ಯರ್ಥಿ ಶಶಿಕಲಾ ಚಂದ್ರು ಅವರು ಕೇವಲ ಐದು ಮತಗಳನ್ನು ಪಡೆದಿದ್ದಾರೆ.

23 ಸದಸ್ಯ ಬಲದ ಪುರಸಭೆಯಲ್ಲಿ ಜೆಡಿಎಸ್ ಪಕ್ಷ ಆಡಳಿತದ ಚುಕ್ಕಾಣಿ ಹಿಡಿದಿದೆ. ಕಾಂಗ್ರೆಸ್ ಪಕ್ಷ 11 ಸದಸ್ಯರ ಬಲ ಹೊಂದಿದ್ದು,ಜೆಡಿಎಸ್ 12 ಸದಸ್ಯ ಬಲ ಹೊಂದಿತ್ತು. ಮೂರನೇ ವಾರ್ಡಿನ ಕಾಂಗ್ರೆಸ್ ಸದಸ್ಯರಾಗಿದ್ದ ಇಂದಿರಾ ಕುಮಾರ್ ಅವರು ಅನಾರೋಗ್ಯದಿಂದ ನಿಧನ ಹೊಂದಿದ ಹಿನ್ನೆಲೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಒಂದು ಸ್ಥಾನ ಕಳೆದುಕೊಂಡು ಈಗ 10 ಸ್ಥಾನಗಳಿಗೆ ಕುಸಿದಿದೆ.ಜೆಡಿಎಸ್ ಬಲ 13ಕ್ಕೆ ಹೆಚ್ಚಾಗಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಎರಡು ಪಕ್ಷಗಳು ಉಪಚುನಾವಣೆಯಲ್ಲಿ ಗೆಲುವು ಸಾಧಿಸಲು ತೀವ್ರ ಕಸರತ್ತು ನಡೆಸಿದ್ದವು. ಶಾಸಕ ಸುರೇಶ್ ಗೌಡ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಈ ವಾರ್ಡ್ ಅನ್ನು ಜೆಡಿಎಸ್ ತೆಕ್ಕೆಗೆ ಪಡೆಯಲು ಎಲ್ಲಾ ರೀತಿಯ ತಂತ್ರಗಾರಿಕೆ ನಡೆಸಿದ್ದವು.ಎರಡೂ ಪಕ್ಷಗಳ ಅಭ್ಯರ್ಥಿಗಳು ಪ್ರತಿ ಮತಕ್ಕೆ ಸಾವಿರಾರು ರೂಪಾಯಿ ಹಣವನ್ನು ಹಂಚಿದ್ದವು. ಆದರೆ ಅಂತಿಮವಾಗಿ ಜೆಡಿಎಸ್ ಸೌಮ್ಯ ತಿರುಮಲಯ್ಯ ಅವರು ಲಕ್ಷ್ಮಿ ರಂಗಪ್ಪ ಅವರನ್ನು 38 ಮತಗಳ ಅಂತರದಿಂದ ಪರಾಭವ ಗೊಳಿಸಿ ವಿಜಯಶಾಲಿಯಾಗಿದ್ದಾರೆ.
ಸೌಮ್ಯ ತಿರುಮಲಯ್ಯ ಅವರು ಗೆಲುವು ಸಾಧಿಸುತ್ತಿದಂತೆ ಜೆಡಿಎಸ್ ಕಾರ್ಯಕರ್ತರು ಸೌಮ್ಯ ಮತ್ತು ತಿರುಮಲಯ್ಯ ಅವರಿಗೆ ಭಾರಿ ಗಾತ್ರದ ಹೂವಿನ ಹಾರ ಹಾಕಿ ಮೆರವಣಿಗೆಯಲ್ಲಿ ಕರೆದಂದರು. ಈ ಸಂದರ್ಭದಲ್ಲಿ ಪುರಸಭೆ ಸ್ಥಾಯಿ ಸಮಿತಿ ಸದಸ್ಯ ಯೋಗೇಶ್,ಸದಸ್ಯರಾದ ಚನ್ನಪ್ಪ, ವಿಜಯ್ ಕುಮಾರ್ ಸೇರಿದಂತೆ ಹಲವರಿದ್ದರು.




