ಹಿಂದೂ ಪದದ ಬಗ್ಗೆ ಶಾಸಕ ಸತೀಶ್ ಜಾರಕಿಹೊಳಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಬಿಜೆಪಿ ನಾಯಕರು ಟೀಕಿಸುತ್ತಿರುವುದಕ್ಕೆ ಮಾನವ ಬಂಧುತ್ವ ವೇದಿಕೆಯ ಮಂಡ್ಯ ಜಿಲ್ಲಾ ಘಟಕ ಖಂಡನೆ ವ್ಯಕ್ತಪಡಿಸಿದೆ.
ಇತ್ತಿಚೇಗೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ “ಮಾನವ ಬಂಧುತ್ವ ವೇದಿಕೆ”ಯ ಮನೆ ಮನೆಗೆ ಬುದ್ಧ-ಬಸವ- ಅಂಬೇಡ್ಕರ್ ” ಕಾರ್ಯಕ್ರಮದಲ್ಲಿ ಸತೀಶ ಜಾರಕಿಹೊಳಿ ಅವರು ನೀಡಿರುವ “ಹಿಂದೂ” ಪದದ ಬಗೆಗಿನ ಹೇಳಿಕೆ ಐತಿಹಾಸಿಕ ಸತ್ಯವೂ, ಸಾರ್ವಕಾಲಿಕವಾಗಿ ಈ ನೆಲದಲ್ಲಿ ಚರ್ಚೆಯಾಗಬೇಕಾದ ಗಂಭೀರ ವಿಚಾರವೂ ಆಗಿದೆ ಎಂದು ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಡಿ.ದೇವರಾಜ ಕೊಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂ ಎಂಬ ಶಬ್ದ ಪಾರಸೀ ಅಥವಾ ಇರಾನಿ ಭಾಷೆಯ ಮೂಲವಾಗಿದ್ದು, ಅಶ್ಲೀಲ ಅರ್ಥವನ್ನು ಧ್ವನಿಸುತ್ತದೆ ಎಂದು ಹೇಳಿ, ಇದಕ್ಕೆ ಗ್ರಂಥಗಳ ಆಧಾರವನ್ನು ಜಾರಕಿಹೊಳಿ ನೀಡಿದ್ದಾರೆ. ಅವರು ಎಲ್ಲಿಯೂ ಧರ್ಮದ ವಿಚಾರ ಮಾತನಾಡಿಲ್ಲ. ಈ ಬಗ್ಗೆ ಚರ್ಚೆ ನಡೆಯಲಿ, ಈ ವಿಚಾರದಲ್ಲಿ ತಪ್ಪಿದ್ದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿಯೂ ಅವರು ತಮ್ಮ ಬದ್ಧತೆಯನ್ನು ಸ್ಪಷ್ಟಪಡಿಸಿದ್ದಾರೆ.
ಇವರ ಪಂಥಾಹ್ವಾನವನ್ನು ಸ್ವೀಕರಿಸಲು ಬೌದ್ಧಿಕವಾಗಿ ದುರ್ಬಲರಾಗಿರುವ ಬಿಜೆಪಿಯ ಹಿರಿ,ಕಿರಿ ನಾಯಕರು, ತಮ್ಮ ಧರ್ಮಕ್ಕೆ ಅಪಮಾನವಾಗಿದೆ ಎಂದು ವಿತಂಡವಾದ ಮಂಡಿಸುತ್ತಾ, ಬಾಯಿಗೆ ಬಂದಂತೆ ಅರಚುತ್ತಾ, ಅವರು ಎತ್ತಿರುವ ತಾತ್ವಿಕ ಪ್ರಶ್ನೆಯ ಹಿಂದಿರುವ ಸತ್ಯವನ್ನು ಸಮಾಧಿ ಮಾಡಲು ಹೊರಟಿರುವುದನ್ನು `ಮಾನವ ಬಂಧುತ್ವ ವೇದಿಕೆ’ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರುಗಳು ಜಾತಿ ತಾರತಮ್ಯ, ಅಸಮಾನತೆಗಳನ್ನು ಭೋದಿಸಿ, ಸಾವಿರಾರು ವರ್ಷಗಳಿಂದ ತಳ ಸಮುದಾಯಗಳನ್ನು ಶೋಷಿಸಿದ, ಮನುಸ್ಮೃತಿಯ ಗುಲಾಮರು ಮತ್ತು ಸರ್ವರಿಗೂ ಸ್ವಾತಂತ್ರ್ಯ, ಸಮಾನತೆ, ಬಂಧುತ್ವ ನೀಡುವ ಸಂವಿಧಾನದ ವಿರೋಧಿಗಳು ಎಂಬುದು ಜಗತ್ತಿಗೆ ತಿಳಿದಿರುವ ವಿಷಯ. ಆದರೆ ಅವರು ಈಗ ನೀಡುತ್ತಿರುವ ವಿವೇಕ ರಹಿತ ಹೇಳಿಕೆಗಳಿಂದ ಅವರ ಬೌದ್ಧಿಕ ದಾರಿದ್ರ್ಯವನ್ನು ಅವರೇ
ಪ್ರದರ್ಶಿಸುತ್ತಿದ್ದಾರೆ. ಇಪ್ಪತ್ತೊಂದನೇ ಶತಮಾನದ ಆಧುನಿಕ ದೇಶದಲ್ಲಿ ವೈಜ್ಞಾನಿಕ, ವೈಚಾರಿಕ ಪ್ರಜ್ಞೆಗಳನ್ನು ಕೊಂದು, ಮಧ್ಯಕಾಲೀನ ಯುಗಕ್ಕೆ ಕೊಂಡೊಯ್ಯುವ ಅವರ ಹುನ್ನಾರಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.
1940ರಲ್ಲೇ ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ`ಪಾಕಿಸ್ತಾನ ಅಥವಾ ಭಾರತದ ವಿಭಜನೆ’ ಎಂಬ ಕೃತಿಯಲ್ಲಿ ಹೀಗೆ ಹೇಳುತ್ತಾರೆ “ಹಿಂದು ಪ್ರಭುತ್ವ ಎಂಬುದೇನಾದರೂ ಅಸ್ತಿತ್ವಕ್ಕೆ ಬರುತ್ತದೆ ಎಂದರೆ, ಅದು ದೇಶದ ವಿನಾಶವೇ. ಅಲ್ಲಿ ಸ್ವಾತಂತ್ರ್ಯ, ಸಮಾನತೆ, ಬಂಧುತ್ವ ಎಂಬ ಪರಿಕಲ್ಪನೆಗಳಿಗೇ ಕುತ್ತು ಬರುವ ಅಪಾಯವಿದೆ. ಹಿಂದುತ್ವ ಪ್ರಜಾಪ್ರಭುತ್ವದ ಬಹು ದೊಡ್ಡ ಶತ್ರು. ಆದುದರಿಂದ ನಾವು ಎಲ್ಲ ಪ್ರಯತ್ನಗಳನ್ನು ಹಾಕಿ ಹಿಂದು ಪ್ರಭುತ್ವ ಬಾರದಂತೆ ನೋಡಿಕೊಳ್ಳಬೇಕು”. ಅಂಬೇಡ್ಕರ್ ಅವರ ಈ ನಿಲುವಿನ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಮೊದಲು ಸ್ಪಷ್ಟನೆ ನೀಡಲಿ ಎಂದು ಅವರು ಒತ್ತಾಯಿಸಿದ್ದಾರೆ.




