Friday, November 20, 2026

ಪ್ರಾಯೋಗಿಕ ಆವೃತ್ತಿ

 ‘ಕೈ’ ಟಿಕೆಟ್ ನ ಮತ್ತೊಬ್ಬ ಆಕಾಂಕ್ಷಿ ಯಾರು ಗೊತ್ತಾ ?

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಆರೇಳು ತಿಂಗಳಷ್ಟೇ ಬಾಕಿ ಇದೆ. ಆದರೆ ಕೆ‌.ಆರ್‌.ಪೇಟೆ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಟಿಕೆಟ್ ಪಡೆಯಲು ಹಲವರು ಪ್ರಯತ್ನಿಸುತ್ತಿದ್ದು, ಈಗ ಮತ್ತೊಬ್ಬ ಕಾಂಗ್ರೆಸ್ ಮುಖಂಡ ಎಂ.ಡಿ. ಕೃಷ್ಣಮೂರ್ತಿ ಅವರು, ನಾನು ಕೂಡ ಓರ್ವ ಆಕಾಂಕ್ಷಿ ಎಂದು ಹೇಳಿದ್ದಾರೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್.ಪೇಟೆ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆಯಲು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಸಮಾಜಸೇವಕ ವಿಜಯ ರಾಮೇಗೌಡ, ಕಿಕ್ಕೇರಿ ಸುರೇಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಿ.ನಾಗೇಂದ್ರ ಕುಮಾರ್ ಹೆಸರು ಕೇಳಿ ಬರುತ್ತಿತ್ತು. ಇದೀಗ ಈ ಪಟ್ಟಿಗೆ ರಾಜ್ಯ ನಗರ ಮೂಲಭೂತ ಸೌಕರ್ಯ ಮತ್ತು ಹಣಕಾಸು ನಿಗಮದ ಮಾಜಿ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ ಹೆಸರು ಹೊಸದಾಗಿ ಸೇರ್ಪಡೆಯಾಗಿದೆ.

ಇತ್ತೀಚೆಗೆ ಕೆ.ಆರ್.ಪೇಟೆ ಪಟ್ಟಣದ ಸುಲೋಚಮ್ಮ ರಾಮದಾಸ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ತಮ್ಮ ಅಭಿಮಾನಿಗಳ ಸಭೆಯಲ್ಲಿ ಅವರು, ನಾನು ಕೂಡ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕಾಗಿ ಕಳೆದ 40 ವರ್ಷದಿಂದ ಕೆಲಸ ಮಾಡಿದ್ದೇನೆ. ನನ್ನ ಪಕ್ಷ ನಿಷ್ಟೆ, ಹಿರಿತನ ಗುರುತಿಸಿ ನನಗೆ ಮುಂದಿನ ವಿಧಾನ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೊಡಿ ಎಂದು ಅಲವತ್ತು ಕೊಂಡಿದ್ದಾರೆ.

ಸುದೀರ್ಘ ಅವಧಿಯಿಂದ ಪಕ್ಷದ ಕಾರ್ಯಕರ್ತನಾಗಿ, ಅಧ್ಯಕ್ಷನಾಗಿ ದುಡಿದು ಪಕ್ಷದ ಏಳ್ಗೆಗೆ ಶ್ರಮಿಸಿರುವ ನನ್ನಂತಹ ನಿಷ್ಠಾವಂತ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷವು ಗುರುತಿಸಿ ವಿಧಾನಸಭಾ ಟಿಕೆಟ್‌ ನೀಡುವಂತೆ ಒತ್ತಾಯಿಸಿದ್ದಾರೆ.

ಬ್ಯಾಂಕ್ ಉದ್ಯೋಗಿಯಾಗಿದ್ದ ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದವರು, ನನ್ನ ರಾಜಕೀಯ ಗುರು ಕೆ.ರೆಹಮಾನ್ ಖಾನ್. ಮಾಜಿ ಸಿಎಂ ಸಿದ್ದರಾಮಯ್ಯ ಕಂಡರೆ ಅಪಾರ ಗೌರವ. ಕಳೆದ 20 ವರ್ಷಗಳಿಂದಲೂ ವಿಧಾನಸಭೆ ಟಿಕೆಟ್‌ಗೆ ಪ್ರಯತ್ನ ನಡೆಸುತ್ತಿದ್ದೇನೆ. ನನ್ನ ಸನ್ನಡತೆಯನ್ನೇ ದೌರ್ಬಲ್ಯವೆಂದು ತಿಳಿದ ನಮ್ಮ ಕಾಂಗ್ರೆಸ್ ಪಕ್ಷದ ಕೆಲವರಿಂದಲೇ ನನಗೆ ಅನ್ಯಾಯವಾಗಿದೆ. ಆದರೂ ನಾನು ಪಕ್ಷದ ಸೇವೆ ಮಾಡಿಕೊಂಡು ಬಂದಿದ್ದೇನೆ. ನನಗೀಗ 69 ವರ್ಷ. ಇದು ಕಡೆಯ ಅವಕಾಶ. ಆದ್ದರಿಂದ ನನ್ನ ಹಿರಿತನವನ್ನು ಕಾಂಗ್ರೆಸ್ ಪಕ್ಷವು ಪರಿಗಣಿಸಬೇಕು ಎಂದು ಕೃಷ್ಣಮೂರ್ತಿ ಮನವಿ ಮಾಡಿದ್ದಾರೆ.

ನನ್ನ ರಾಜಕೀಯ ಜೀವನದಲ್ಲಿ ನನಗೆ ಇಷ್ಟದ ನಾಯಕನೆಂದರೆ ಅದು ಸಿದ್ದರಾಮಯ್ಯನವರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆದರ್ಶ ಗುಣಗಳು ನನಗೆ ಪ್ರೇರಣೆ ಎಂದಿರುವ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಲ್ಲಿ ಟಿಕೆಟ್ ನೀಡುವಂತೆ ಪರಿಗಣಿಸಿ ಎಂದು ಮನವಿ ಮಾಡಿದ್ದಾರೆ.

ಪಕ್ಷದ ತೀರ್ಮಾನಕ್ಕೆ ಬದ್ದ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅವಧಿಯಲ್ಲಿ ಕೆ.ಯು.ಐ.ಡಿ.ಎಫ್.ಸಿ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಕೆ.ಆರ್.ಪೇಟೆ ಪಟ್ಟಣಕ್ಕೆ ಹೇಮಾವತಿ ನದಿಯಿಂದ 27 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು ಯೋಜನೆ, 12 ಕೋಟಿ ವೆಚ್ಚದಲ್ಲಿ ಪಟ್ಟಣದ ಒಳಚರಂಡಿ ಯೋಜನೆ ಹಾಗೂ ಪುರಸಭೆಯ ಕಾಂಪ್ಲೆಕ್ಸ್ ನಿರ್ಮಾಣಕ್ಕೆ 6 ಕೋಟಿ ರೂ. ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಸಿದ್ದೆ ಎಂದು ತಮ್ಮ ಸಾಧನೆಗಳ ಪಟ್ಟಿ ಮುಂದಿಟ್ಟು ,ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿತರ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗುವ ಮೂಲಕ ಸಣ್ಣ ಸದ್ದು ಮಾಡಿದ್ದಾರೆ. 2023 ರ ವಿಧಾನಸಭಾ ಚುನಾವಣೆಯ ಕೈ ಟಿಕೆಟ್ ಯಾರಿಗೆ ಸಿಗಲಿದೆಯೋ ಎಂಬುದು ಕುತೂಹಲ ಹುಟ್ಟು ಹಾಕಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ