ದಲ್ಲಾಳಿಗಳು ರೈತರಿಂದ ಭತ್ತ ಖರೀದಿ ಮಾಡಿದ ನಂತರವೇ ಸರ್ಕಾರ ಭತ್ತ ಖರೀದಿ ಕೇಂದ್ರ ತೆರೆಯುತ್ತವೆ.ಇದರಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ. ಆದರೆ ದಲ್ಲಾಳಿಗಳಿಗೆ ಸಾಕಷ್ಟು ಅನುಕೂಲ ಮಾಡಿಕೊಡುತ್ತಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದರು.
ಮಂಡ್ಯ ತಾಲೂಕಿನ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕ್ಯಾತುಂಗೆರೆ ಗ್ರಾಮದಲ್ಲಿ ಶ್ರೀಹುಚ್ಚಮ್ಮ ದೇವಸ್ಥಾನದ ಕಲ್ಯಾಣಿ ಮತ್ತು ಉದ್ಯಾನವನ ಕಾಮಗಾರಿಗೆ ಚಾಲನೆ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಈಗಾಗಲೇ ಭತ್ತ ಕಟಾವಿಗೆ ಬಂದಿದ್ದರೂ, ಸರ್ಕಾರ ಭತ್ತ ಖರೀದಿ ಕೇಂದ್ರ ತೆರೆದಿಲ್ಲ. ಈ ಸರ್ಕಾರಕ್ಕೆ ವಿವೇಕವಿಲ್ಲ. ಅಂದು ಎಚ್. ಡಿ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ, ಬಹಳ ಬೇಗ ಭತ್ತ ಖರೀದಿ ಕೇಂದ್ರ ತೆರೆದಿದ್ದರು. ಆಗ ದೊಡ್ಡ ಪ್ರಮಾಣದಲ್ಲಿ ರೈತರಿಂದ ಭತ್ತ ಖರೀದಿ ಮಾಡಿ ಅವರಿಗೆ ಹೆಚ್ಚು ಹಣ ಸಿಗುವಂತೆ ಮಾಡಿದ್ದರು. ಈಗ ಈ ಸರ್ಕಾರಗಳು ದಲ್ಲಾಳಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಇನ್ನೂ ಖರೀದಿ ಕೇಂದ್ರ ತೆರೆದಿಲ್ಲ. ಕೂಡಲೇ ಭತ್ತ ಖರೀದಿ ಕೇಂದ್ರ ತೆರೆದು ರೈತರಿಗೆ ಅನುಕೂಲ ಮಾಡಬೇಕು. ಇಲ್ಲದಿದ್ದರೆ ಈ ಸರ್ಕಾರದಿಂದ ಜನರಿಗೆ ಏನು ಪ್ರಯೋಜನವಾಗುವುದುಲ್ಲ ಎಂದರು.
ಕಬ್ಬಿಗೆ 5000 ಕೊಡಿ
ಕಬ್ಬು ಬೆಳೆಗಾರರಿಗೆ ಸರ್ಕಾರ ಅನ್ಯಾಯ ಮಾಡುತ್ತಿದೆ. ಯಾವ್ಯಾವುದಕ್ಕೋ ಬೆಲೆ ಹೆಚ್ಚಳ ಮಾಡುವ ಸರ್ಕಾರ, ಈಗ ಶಾಲೆಗಳಿಗೆ ಕೇಸರಿ ಬಣ್ಣ ಬಳಿ ಬೇಕು ಎಂದು ಗೊಂದಲ ಮಾಡುತ್ತಿದೆ. ಸರ್ಕಾರ ರೈತರು ಕಬ್ಬು ಬೆಳೆಯುವಾಗ ಆಗುವ ಖರ್ಚಿನ ಬಗ್ಗೆ ಲೆಕ್ಕಾಚಾರ ಹಾಕಲಿ. ಇಂದು ಕಡುಗೂಲಿ ದರ ಹೆಚ್ಚಳವಾಗಿದೆ. ರಸಗೊಬ್ಬರದ ಬೆಲೆ ದುಪ್ಪಾಟ್ಟಾಗಿದೆ. ಹಾಗಿದ್ದರೂ ಹಳೆಯ ಕಾಲದ ಬೆಲೆನೇ ಈಗಲೂ ಮುಂದುವರಿಸುವುದು, ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಕಬ್ಬು ಬೆಲೆ ಹೆಚ್ಚಳ ಮಾಡಿ ರೈತರಿಗೆ ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದರು.
ದತ್ತಾಂಶ ಕಳವು ಖಂಡನೀಯ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪ್ರತಿಯೊಬ್ಬರ ಮೂಲಭೂತ ಹಕ್ಕು. ಅದನ್ನು ಕಸಿದುಕೊಳ್ಳುವ ಹಕ್ಕನ್ನು ಯಾರಿಗೂ ಕೊಟ್ಟಿಲ್ಲ. ಮತದಾರರ ದತ್ತಾಂಶ ಕಳುವು ಪ್ರಕರಣದಲ್ಲಿ ಭಾಗಿಯಾಗಿದ್ದರೆ, ಅದು ನಾಚಿಕೆಗೇಡಿನ ಕೃತ್ಯ. ತಲೆತಗ್ಗಿಸುವ ವಿಚಾರ. ಇದರಲ್ಲಿ ಸರ್ಕಾರ ಭಾಗಿಯಾಗಿದ್ದರೆ ಕೂಡಲೇ ಜನರ ಕ್ಷಮೆ ಕೇಳಬೇಕು ಎಂದರು.
ಈ ಸಂದರ್ಭದಲ್ಲಿ ಕ್ಯಾತುಂಗೆರೆ ಗ್ರಾಮದ ಮುಖಂಡರಾದ ಬಸವರಾಜ, ಪುಟ್ಟಸ್ವಾಮಿ, ಪ್ರದೀಪ್ (ಗದ್ದೇಗೌಡ), ಆಡಿಟರ್ ಕುಮಾರ್, ನಗರಸಭಾ ಸದಸ್ಯ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.




