Tuesday, November 24, 2026

ಪ್ರಾಯೋಗಿಕ ಆವೃತ್ತಿ

ಸಚಿವರ ಭರವಸೆ ಅನಿರ್ದಿಷ್ಟಾವಧಿ ಧರಣಿ ವಾಪಸ್ ಪಡೆದ ರೈತ ಸಂಘ

 ಕೆ.ಆರ್. ಪೇಟೆ ತಾಲೂಕಿನ ಸರ್ಕಾರಿ ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹಾಗೂ ಕಡತಗಳ ವಿಲೇವಾರಿಯಲ್ಲಿನ ವಿಳಂಬದ ವಿರುದ್ಧ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳು, ಸಚಿವ ನಾರಾಯಣಗೌಡ ನೀಡಿದ ಭರವಸೆ ಮೇರೆಗೆ ಧರಣಿ ಕೈಬಿಟ್ಟಿವೆ.

ಪ್ರವಾಸಿಮಂದಿರದಿಂದ ಮೆರವಣಿಗೆ ಪ್ರಾರಂಭಿಸಿದ ರೈತಸಂಘದ ಕಾರ್ಯಕರ್ತರು ತಾಲೂಕು ಕಚೇರಿ ಎದುರು ಬಂದು ಸೇರಿದ್ದರು. “ಫೆಬ್ರವರಿಯಲ್ಲಿ ನಡೆದ ರೈತ ಸಂಘದ ಚಳುವಳಿಯಲ್ಲಿ ಸಚಿವರು ನೀಡಿದ ಯಾವುದೇ ಭರವಸೆ ಈಡೇರಿಲ್ಲ. ಇಲಾಖೆಗಳಲ್ಲಿ ರೈತರಿಗೆ ಆಗುತ್ತಿರುವ ಕಿರುಕುಳವನ್ನು ತಪ್ಪಿಸಬೇಕು ಎನ್ನುವ ಉದ್ದೇಶದಿಂದ ರೈತ ಸಂಘ ಅನಿರ್ದಿಷ್ಟಾವಧಿ ಧರಣಿ ನಡೆಸಲು ನಿರ್ಧರಿಸಿದೆ” ಎಂದು ಹಿರಿಯ ಮುಖಂಡ ಕೆ.ಆರ್. ಜಯರಾಂ ಹೇಳಿದರು.

“ತಾಲೂಕಿನಾದ್ಯಂತ ಕಂದಾಯ ಅದಾಲತ್‌ ನಡೆದರೂ ರೈತರ ಸಮಸ್ಯೆ ಬಗೆಹರಿದಿಲ್ಲ. ಕಂದಾಯ ಅದಾಲತ್‌ನಲ್ಲಿ ಕೇವಲ ಅರ್ಜಿಗಳನ್ನು ಸ್ವೀಕರಿಸದೆ ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ತಾಲೂಕು ಕಚೇರಿಗಳಿಗೆ ಅಲೆದು ರೈತರ ಚಪ್ಪಲಿಗಳು ಸವೆದಿದೆ. ಸರ್ಕಾರ ರೈತರಿಗೋಸ್ಕರ ಚಪ್ಪಲಿ ಭಾಗ್ಯ ಯೋಜನೆ ತರಬೇಕು” ಎಂದು ಹೇಳಿದರು.

ರೈತ ಸಂಘದ ಮಾಜಿ ಅಧ್ಯಕ್ಷ ಎಂ.ವಿ. ರಾಜೇಗೌಡ ಮಾತನಾಡಿ, “ಹೇಮಾವತಿ ನೀರಾವರಿ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಿಲ್ಲ. ಹೆಣ್ಣು ಮಗಳ ಹೆರಿಗೆಯ ಸಂದರ್ಭದಲ್ಲಿ ವೈದ್ಯರೊಬ್ಬರು ಲಂಚ ಕೇಳಿದ ಪ್ರಕರಣಕ್ಕೆ ಸಂಬಂಧ ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕಂದಾಯ ಇಲಾಖೆಗೆ ಸಂಬಂಧಪಟ್ಟ ಸುಮಾರು 90 ಅರ್ಜಿಗಳು ಇಲ್ಲಿಯವರೆಗೆ ಇತ್ಯರ್ಥ ಮಾಡಿಲ್ಲ” ಎಂದು ಅಸಮಾಧಾನ ಹೊರಹಾಕಿದರು.

ರೈತ ಸಂಘದ ಮುಖಂಡರು ಅಪರ ಜಿಲ್ಲಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜು ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಎಚ್‌.ಎಲ್‌ .ನಾಗರಾಜು, “ಪ್ರತಿ ತಿಂಗಳು ಹೋಬಳಿ ಮಟ್ಟದಲ್ಲಿ ಕಂದಾಯ ಅದಾಲತ್‌ ನಡೆಸಲು ಕಾರ್ಯಕ್ರಮ ರೂಪಿಸಲಾಗಿದೆ. ರೈತ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಿ ರೈತರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಹೊಣೆ ನಮ್ಮ ಮೇಲಿದೆ” ಎಂದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ