ರಾಜ್ಯ ಬಿಜೆಪಿ ಸರ್ಕಾರವು ಅಧಿಕಾರ ದುರುಪಯೋಗ ಮಾಡಿಕೊಂಡು, ಕೇವಲ ಮೂರು( ದ.ಕನ್ನಡ, ಉ.ಕನ್ನಡ, ಉಡುಪಿ) ಜಿಲ್ಲೆಯ ರೈತರಿಗೆ ಮಾತ್ರ ಭತ್ತಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಿದೆ. ಬೇರೆ ಜಿಲ್ಲೆಯ ರೈತರು ರೈತರಲ್ಲವೇ ? ಎಂದು ಮಂಡ್ಯ ಜಿಲ್ಲಾ ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ರಮೇಶ್ ಅಕ್ರೋಶ ವ್ಯಕ್ತಪಡಿಸಿದರು.
ಮಂಡ್ಯನಗರದಲ್ಲಿ ಕಬ್ಬು ಮತ್ತು ಹಾಲಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಆಗ್ರಹಿಸಿ ಕಳೆದ 27 ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿಯಲ್ಲಿ ಶನಿವಾರ ಭಾಗವಹಿಸಿ, ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡಿದರು.
ಈ 3 ಜಿಲ್ಲೆಗಳಲ್ಲಿ ಬಿಜೆಪಿಯ ಮತಬ್ಯಾಂಕ್ ಇದೆ. ಹಾಗಾಗಿ ಅವರಿಗೆ ಮಾತ್ರ ಬೆಂಬಲ ಬೆಲೆ ಘೋಷಣೆ ಮಾಡಿಕೊಂಡಿದ್ದಾರೆ. ಇಡೀ ರಾಜ್ಯಕ್ಕೆ ಅನ್ವಯಬೇಕಾದ ಆದೇಶವನ್ನು ಕೇವಲ ಮೂರು ಜಿಲ್ಲೆಗಳಿಗೆ ಸೀಮಿತಗೊಳಿಸುವ ಮೂಲಕ ಬಿಜೆಪಿ ಸರ್ಕಾರವು ಅಧಿಕಾರ ದುರುಪಯೋಗಪಡಿಸಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾತು ತಪ್ಪಿದ ಮುಖ್ಯಮಂತ್ರಿ
ಕಬ್ಬು ಮತ್ತು ಹಾಲಿಗೆ ಸೂಕ್ತ ಬೆಲೆ ನೀಡುವುದಾಗಿ ಮಾತು ಕೊಟ್ಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮಾತು ತಪ್ಪುವ ಮೂಲಕ ರೈತರಿಗೆ ದ್ರೋಹ ಮಾಡಿದ್ಧಾರೆ. ರಾಜಕಾರಣಿಗಳು ರೈತರನ್ನು ತುಳಿದು ನಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಭತ್ತ, ಕಬ್ಬು, ಹಾಲಿಗೆ ಸರಿಯಾದ ವೈಜ್ಞಾನಿಕ ಬೆಲೆಯನ್ನು ನೀಡುತ್ತಿಲ್ಲ, ಇದರಿಂದಾಗಿ ಭತ್ತ ಬೆಳೆಯುವ ರೈತರ ಸಂಖ್ಯೆ ಕಡಿಮೆ ಆಗಿದೆ ಎಂದರು.
ರಾಜಕಾರಣಿಗಳು ಎ ಸಿ ರೂಂನಲ್ಲಿ ಕುಳಿತು ಬೆಲೆ ನಿಗದಿ ಮಾಡುತ್ತಿದ್ದಾರೆ. ಭತ್ತಕ್ಕೆ ನಿಗದಿ ಮಾಡಿರುವ 2400 ರೂ. ಯಾವುದಕ್ಕೂ ಸಾಕಾಗುವುದಿಲ್ಲ, ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅಕ್ಕಿ ಗಿರಣಿ ಮಾಲೀಕರ ಸಂಘದ ಮಂಡ್ಯ ತಾಲ್ಲೂಕು ಅಧ್ಯಕ್ಷ ಆತ್ಮಾನಂದ, ಮುಖಂಡ ಸುಬ್ಬಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.




